ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವಕ್ಕೆ ಭಾರತ ಅರ್ಹವಾಗಿದೆ ಎಂದು ನಾಲ್ಕು ದಿನಗಳ ಭಾರತ ಪ್ರವಾಸಕ್ಕೆ ಬಂದಿರುವ ಫ್ರಾನ್ಸ್ ಅಧ್ಯಕ್ಷ ನಿಕೋಲಾಸ್ ಸರ್ಕೋಜಿ ತನ್ನ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.
ಬೆಂಗಳೂರಿನ ಇಸ್ರೊ ಕೇಂದ್ರದಲ್ಲಿ ಉದ್ಯಮ ಪ್ರಮುಖರು, ವಿದ್ಯಾರ್ಥಿಗಳು, ಹಾಗೂ 500ರಷ್ಟು ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನೂರು ಕೋಟಿ ಭಾರತೀಯರನ್ನು ಒಬ್ಬನೇ ಒಬ್ಬ ಪ್ರತಿನಿಧಿಸದಿರುವುದು ಆಶ್ಚರ್ಯದ ಸಂಗತಿ ಎಂದ ಅವರು, ಭಾರತ ಸೇರಿದಂತೆ, ಬ್ರೆಜಿಲ್, ಜರ್ಮನಿ, ಜಪಾನ್, ಆಫ್ರಿಕಾ ಮತ್ತು ಅರಬ್ ರಾಷ್ಟ್ರಗಳೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸ್ಥಾನ ಪಡೆಯಬೇಕು ಎಂದರು.
ಭಾರತದ ಪರಮಾಣು ಯೋಜನೆಗೆ ಫ್ರಾನ್ಸ್‌ನ ಸಂಪೂರ್ಣ ಬೆಂಬಲ ಸೂಚಿಸಿದ ಸರ್ಕೋಜಿ, ಯೋಜನೆಗೆ ನಿರ್ಬಂಧ ಹೇರಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಸಂತೋಷದ ವಿಷಯವೆಂದರೆ, ಮಹಾರಾಷ್ಟ್ರದ ಜೈಟಾಪುರದಲ್ಲಿ ಫ್ರಾನ್ಸ್ ಮೂಲದ ಅರೇವಾ ಕಂಪನಿ, ಪರಿಸರ ಸ್ನೇಹಿ ಅಣುಸ್ಥಾವರ ಸ್ಥಾಪಿಸುತ್ತಿದೆ. ಇದರಿಂದ 10,000 ಮೆಗಾವ್ಯಾಟ್ ವಿದ್ಯುತ್ ಪಡೆಯಬಹುದಾಗಿದೆ ಎಂದರು.
ಪರಮಾಣು ಒಪ್ಪಂದಕ್ಕೆ ಸಹಿ ಸೇರಿದಂತೆ, ಬಾಹ್ಯಾಕಾಶ ವಿಜ್ಞಾನ ಮತ್ತು ಅಣುಶಕ್ತಿಯಲ್ಲಿ ಉಭಯರ ಸಂಬಂಧ ಬಲಗೊಳಿಸಲು ಸಹಕಾರ ಪಡೆಯುವ ಉದ್ದೇಶದಿಂದ ನಾಲ್ಕು ದಿನದ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ಸರ್ಕೋಜಿ, ಪತ್ನಿ ಮತ್ತು ಪ್ರಮುಖ ನಿಯೋಗದೊಂದಿಗೆ ಬೆಂಗಳೂರಿಗೆ ಮೊದಲು ಬಂದಿಳಿದರು.
ಭಾನುವಾರ ಪತ್ನಿ ಕಾರ್ಲಾ ಬ್ರೂನಿ ಅವರೊಂದಿಗೆ ತಾಜ್‌ಮಹಲ್‌ಗೆ ಖಾಸಗಿ ಭೇಟಿ ನೀಡಲಿರುವ ಅವರು, ಸೋಮವಾರ ಪ್ರಧಾನಿಯೊಂದಿಗೆ ಚರ್ಚಿಸಲಿದ್ದಾರೆ.
ವರ್ಷಾಂತ್ಯದಲ್ಲಿ ಅಮೆರಿಕಾ, ಚೀನಾ, ರಷ್ಯಾದ ಪ್ರಮುಖ ನಾಯಕರು ಭೇಟಿ ನೀಡಿದ ಬೆನ್ನಲ್ಲೇ, ಫ್ರಾನ್ಸ್ ಅಧ್ಯಕ್ಷರು ಭೇಟಿ ನೀಡಿರುವುದು ಮಹತ್ವ ಪಡೆದುಕೊಂಡಿದೆ.