ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯಡಿಯೂರಪ್ಪ ಸ್ವೇಚ್ಛಾಚಾರಕ್ಕೆ ಬಿಜೆಪಿ ಹೈಕಮಾಂಡ್ ಬ್ರೇಕ್? (BS Yeddyurappa | Arun Jaitley | Nitin Gadkari | Dharmendra Pradhan)
Bookmark and Share Feedback Print
 
ಸ್ವಜನ ಪಕ್ಷಪಾತ ಮತ್ತು ಭೂ ಹಗರಣಗಳ ಸುಳಿವಿನಲ್ಲಿ ಸಿಕ್ಕರೂ ಪಟ್ಟ ಉಳಿಸಿಕೊಂಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮೂಗುದಾರ ಹಾಕಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದು, ಹಲವಾರು ಬದಲಾವಣೆಗಳನ್ನು ಮಾಡಿದ್ದಾರೆ.

ಅದರಲ್ಲಿ ಮಹತ್ವವಾದದ್ದು ಕರ್ನಾಟಕ ಬಿಜೆಪಿಯ ವಿಶೇಷ ನಿರ್ವಹಣಾಧಿಕಾರಿ ಹುದ್ದೆಯನ್ನು ಹೊಸತಾಗಿ ಸೃಷ್ಟಿಸಿರುವುದು. ಇದರ ಹೊಣೆಯನ್ನು ರಾಜ್ಯಸಭೆಯ ವಿಪಕ್ಷದ ನಾಯಕ ಅರುಣ್ ಜೇಟ್ಲಿಯವರಿಗೆ ವಹಿಸಲಾಗಿದೆ. ರಾಜ್ಯದ ರಾಜಕೀಯ ಬಿಕ್ಕಟ್ಟುಗಳನ್ನು ಪರಿಹರಿಸುವ ಮೊದಲ ಅಧಿಕಾರ ಇನ್ನು ಮುಂದೆ ಜೇಟ್ಲಿಯವರಲ್ಲಿರುತ್ತದೆ.

ಹಾಗೆಯೇ ರಾಜ್ಯದಲ್ಲಿ ಮುಖ್ಯಮಂತ್ರಿ ಕೈಗೊಳ್ಳುವ ಕ್ರಮಗಳು ಮತ್ತು ಇತರ ವಿಚಾರಗಳು ನೇರವಾಗಿ ಜೇಟ್ಲಿಯವರ ಗಮನಕ್ಕೆ ಬರುತ್ತದೆ. ಮುಂದಿನ ದಿನಗಳಲ್ಲಿ ಪ್ರತಿಪಕ್ಷಗಳು ಮತ್ತು ಜನತೆಯಿಂದ ಮುಜುಗರ ಎದುರಾಗಬಾರದೆಂಬ ನಿಟ್ಟಿನಲ್ಲಿ ವರಿಷ್ಠರು ಇಂತಹ ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ. ಇದು ಯಡಿಯೂರಪ್ಪನವರಿಗೆ ಹಾಕಲಾಗುತ್ತಿರುವ ಲಕ್ಷ್ಮಣರೇಖೆ ಎಂದೂ ಹೇಳಲಾಗುತ್ತಿದೆ.

ಅದೇ ರೀತಿ ಕರ್ನಾಟಕ ಬಿಜೆಪಿಯ ಉಸ್ತುವಾರಿಯನ್ನು ಕೂಡ ಬದಲಾಯಿಸಿದ್ದಾರೆ. ಹಿಮಾಚಲ ಪ್ರದೇಶ ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕ ಶಾಂತ ಕುಮಾರ್ ಕೈಯಲ್ಲಿದ್ದ ಕರ್ನಾಟಕ ಬಿಜೆಪಿ ಉಸ್ತುವಾರಿಯನ್ನು ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಪ್ರಧಾನ್ ಹೆಗಲಿಗೆ ವರ್ಗಾಯಿಸಲಾಗಿದೆ.

ಶಾಂತ ಕುಮಾರ್ ದಕ್ಷಿಣ ಭಾರತದ ರಾಜಕೀಯ ವ್ಯವಹಾರಗಳಲ್ಲಿ ಅಷ್ಟೊಂದು ಆಸಕ್ತಿ ಹೊಂದಿರಲಿಲ್ಲ. ಅತ್ತ ಪ್ರಧಾನ್ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹತ್ವದ ಪಾತ್ರ ನಿಭಾಯಿಸಿದವರು. ಬಿಹಾರ ಬಿಜೆಪಿಯ ಉಸ್ತುವಾರಿ ಅನಂತ್ ಕುಮಾರ್ ಅವರಾಗಿದ್ದರೂ, ಅವರಿಗೆ ಸಹಾಯಕರಾಗಿ ಶ್ರಮವಹಿಸಿ ಬಿಜೆಪಿಗೆ ಭಾರೀ ಮುನ್ನಡೆ ಒದಗಿಸುವಲ್ಲಿ ಎದ್ದು ಕಂಡಿದ್ದ ಹೆಸರು ಪ್ರಧಾನ್.

ಅವರನ್ನೀಗ ಕರ್ನಾಟಕಕ್ಕೆ ವರ್ಗಾಯಿಸಲಾಗಿದೆ. ರಾಜ್ಯದ ರಾಜಕೀಯವನ್ನು ತಹಬದಿಗೆ ತರಬೇಕೆನ್ನುವುದು ಬಿಜೆಪಿ ವರಿಷ್ಠರ ಚಿಂತನೆ. ಸಚಿವರು, ನಾಯಕರು ಮತ್ತು ಸ್ವತಃ ಮುಖ್ಯಮಂತ್ರಿಯ ಹೆಸರೂ ಹಗರಣಗಳಲ್ಲಿ ಥಳಕು ಹಾಕಿಕೊಂಡಿರುವುದರಿಂದ ಇಂತಹ ಕ್ರಮ ಅನಿವಾರ್ಯವಾಗಿತ್ತು ಎಂದು ಹೇಳಲಾಗುತ್ತಿದೆ.

ಸಚಿವರಿಗೆ ಗಡ್ಕರಿ ಪಾಠ...
ಈ ನಡುವೆ ರಾಜ್ಯದ ಸಚಿವರು ಮತ್ತು ನಾಯಕರ ಜತೆ ಮಂಗಳವಾರ ಕೇಸರಿ ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಸಂವಾದ ನಡೆಸಲಿದ್ದಾರೆ. ಹಗರಣಗಳಲ್ಲಿ ಮುಳುಗೇಳುತ್ತಿರುವ ರಾಜ್ಯದ ಬಿಜೆಪಿ ನಾಯಕರು, ಸಚಿವರು ಮತ್ತು ಮುಖ್ಯಮಂತ್ರಿಗೆ ಶಿಸ್ತಿನ ಪಾಠವನ್ನು ಕಲಿಸಲಿದ್ದಾರೆ.

ಮಗ ನಿಖಿಲ್ ಗಡ್ಕರಿ ಮದುವೆ ಕಾರ್ಯಕ್ರಮದಲ್ಲಿ ಪ್ರಸಕ್ತ ಬ್ಯುಸಿಯಾಗಿರುವ ಗಡ್ಕರಿಯವರು, ಮಂಗಳವಾರ ಬೆಂಗಳೂರಿಗೆ ಬರುತ್ತಿದ್ದಾರೆ. ಒಂದೆರಡು ದಿನಗಳ ಕಾಲ ಅವರು ನಗರದಲ್ಲೇ ಉಳಿಯಲಿದ್ದಾರೆ. ಈ ಸಂದರ್ಭದಲ್ಲಿ ಅತೃಪ್ತರನ್ನು ಕೂಡ ಅವರು ಭೇಟಿಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಈ ತತ್‌ಕ್ಷಣದ ಬೆಳವಣಿಗೆ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ದಕ್ಷಿಣ ಭಾರತದಲ್ಲಿ ಪ್ರಪಥಮ ಭಾರಿಗೆ ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ, ಉತ್ತಮ ಆಡಳಿತ ಕೊಡುವ ಮೂಲಕ ನೆರೆಯ ರಾಜ್ಯಗಳಲ್ಲೂ ಅಧಿಕಾರ ಪಡೆಯುವ ಹಿತಾಸಕ್ತಿಯನ್ನು ಹೊಂದಿತ್ತು.

ಆದರೆ, ಬಿಜೆಪಿ ಮೊದಲ ಆಡಳಿತಾವಧಿಯಲ್ಲೇ ಸ್ವಜನ ಪಕ್ಷಪಾತ, ಭೂ ಹಗರಣದಲ್ಲಿ ಸಿಲುಕಿ ನಲುಗುತ್ತಿದೆ. ಕೆಐಎಡಿಬಿಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಕಟ್ಟಾ ಸುಬ್ರಮಣ್ಯಂ ಸೇರಿದಂತೆ ಅವರ ಪುತ್ರ ಜಗದೀಶ್ ಹಾಗೂ ಇನ್ನೂ ಒಂಬತ್ತು ಮಂದಿಯ ಮೇಲೆ ಲೋಕಾಯುಕ್ತ ಎಫ್‌ಐಆರ್ ದಾಖಲಿಸಿದ ಹಿನ್ನಲೆಯಲ್ಲಿ ಮೊದಲ ತಲೆದಂಡವೆಂಬಂತೆ ಕಟ್ಟಾ ರಾಜೀನಾಮೆಯನ್ನೂ ನೀಡಿದ್ದಾರೆ.

ಜತೆಗೆ ವಿರೋಧ ಪಕ್ಷಗಳು ಕಾಲೆಳೆಯುವುದು ಮಿತಿಮೀರಿದೆ. ಇಂತಹ ಬೆಳವಣಿಗೆಗಳಿಂದ ಪಕ್ಷದ ವರ್ಚಸ್ಸು ಅಧೋಗತಿಗೆ ಸಾಗಿದೆ. ಆದ್ದರಿಂದ ಪಕ್ಷವನ್ನು ಶಿಸ್ತುಬದ್ಧವಾಗಿ ನಡೆಸುವಂತಾಗಲು ಈ ದಿಢೀರ್ ಬೆಳವಣಿಗೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ