ಶನಿವಾರ ತಮಿಳುನಾಡಿನ ಪ್ರಸಿದ್ಧ ದೇವಸ್ಥಾನವೊಂದಕ್ಕೆ ತೆರಳಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಅತಿಥಿ ಗೃಹವೊಂದನ್ನು ನಿರ್ಮಿಸುವುದಾಗಿ ಪ್ರಕಟಿಸಿದ್ದಾರೆ.
ಚೆನ್ನೈಯಿಂದ 560 ಕಿಲೋ ಮೀಟರ್ ದೂರದಲ್ಲಿರುವ ತಿರುಚೆಂಡೂರ್ ಮುರುಗನ್ ದೇವಸ್ಥಾನಕ್ಕೆ ತೆರಳಿ ಸುಬ್ರಮಣ್ಯ ಸ್ವಾಮಿಯ ದರ್ಶನ ಪಡೆದ ಯಡಿಯೂರಪ್ಪ, ಅತಿಥಿ ಗೃಹ ನಿರ್ಮಾಣಕ್ಕಾಗಿ ಒಂದು ಕೋಟಿ ರೂಪಾಯಿಗಳನ್ನು ನೀಡುವುದಾಗಿ ಸ್ಥಳದಲ್ಲೇ ಪ್ರಕಟಿಸಿದರು.
MOKSHA
ಅತಿಥಿ ಗೃಹ ನಿರ್ಮಾಣಕ್ಕೆ ಹಣ ಮಂಜೂರು ಮಾಡುವ ಜತೆಗೆ, ಶಂಕುಸ್ಥಾಪನೆಯನ್ನೂ ಮುಖ್ಯಮಂತ್ರಿ ನೆರವೇರಿಸಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡುವ ರಾಜ್ಯದ ಜನರಿಗಾಗಿ ಇಲ್ಲಿ ಉಳಿದುಕೊಳ್ಳಲು ಸಹಾಯವಾಗುವಂತೆ ಕರ್ನಾಟಕ ಸರಕಾರವು ಈ ಅತಿಥಿ ಗೃಹವನ್ನು ನಿರ್ಮಿಸಲು ಮುಂದಾಗಿದೆ ಎಂದು ತಿಳಿಸಿದರು.
ದೇವಸ್ಥಾನದ 'ಶತ್ರು ಸಂಹಾರ ಮೂರ್ತಿ ಸ್ವಾಮಿ ಸನ್ನಿಧಿ'ಯಲ್ಲಿ ವಿಶೇಷ ಯಜ್ಞವೊಂದರಲ್ಲಿ ಪಾಲ್ಗೊಂಡ ಯಡಿಯೂರಪ್ಪನವರು, ಮುಂದಿನ ಅವಧಿಯನ್ನು ತಾನೇ ಪೂರ್ಣಗೊಳಿಸುತ್ತೇನೆ. ನಂತರವೂ ಪಕ್ಷ ಖಂಡಿತಾ ಅಧಿಕಾರಕ್ಕೆ ಮರಳುತ್ತದೆ. ಈ ಬಗ್ಗೆ ಯಾವುದೇ ಸಂಶಯ ಬೇಕಾಗಿಲ್ಲ. ಪ್ರತಿಪಕ್ಷಗಳು ನಡೆಸುತ್ತಿರುವ ಕುತಂತ್ರ ಯಶಸ್ವಿಯಾಗುವುದಿಲ್ಲ ಎಂದರು.
ಬೆಂಗಳೂರಿನಿಂದ ತುಟಿಕೊರಿನ್ ಎಂಬಲ್ಲಿಗೆ ವಿಶೇಷ ವಿಮಾನದಲ್ಲಿ ಆಗಮಿಸಿದ ಮುಖ್ಯಮಂತ್ರಿಯವರು, ಅಲ್ಲಿಂದ ದೇವಸ್ಥಾನಕ್ಕೆ ಕಾರಿನಲ್ಲಿ ಪೊಲೀಸ್ ಬೆಂಗಾವಲಿನೊಂದಿಗೆ ತೆರಳಿದರು.