ವಿಯೆಟ್ನಾಂನಲ್ಲಿ ನಡೆದ ಮಿಸ್ ಅರ್ಥ್ 2010 ಸೌಂದರ್ಯ ಸ್ಪರ್ಧೆಯಲ್ಲಿ ಭಾರತದ ನಿಕೋಲೆ ಫಾರಿಯಾ ಜಯ ಗಳಿಸಿದ್ದಾರೆ. 20ರ ಹರೆಯದ ಈ ಬೆಂಗಳೂರು ಹುಡುಗಿ ಇತರೆ 17 ಪ್ರಬಲ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಕೊನೆಯ ಹಂತದಲ್ಲಿ ಕಿರೀಟ ಧಾರಿಣಿಯಾಗಿದ್ದಾರೆ.
ಹೊ ಚಿ ಮಿನ್ಹ್ ನಗರದಲ್ಲಿ ಶನಿವಾರ ನಡೆದ ಈ ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಭಾರತ ಕಿರೀಟ ಪಡೆದುಕೊಳ್ಳುತ್ತಿರುವುದು ಇದೇ ಮೊದಲು. ಒಟ್ಟು 84 ದೇಶಗಳು ಪಾಲ್ಗೊಂಡಿದ್ದ ಮಿಸ್ ಅರ್ಥ್ 2010ನಲ್ಲಿ ಅಂತಿಮ 18ಕ್ಕೆ ಪ್ರವೇಶ ಪಡೆದಿದ್ದ ಫಾರಿಯಾ, ಕೊನೆಗೆ ವಿಜೇತೆಯಾಗಿ ಹೊರ ಹೊಮ್ಮಿದರು.
ಫಲಿತಾಂಶ ಹೀಗಿದೆ: ಮಿಸ್ ಅರ್ಥ್ 2010 - ನಿಕೋಲೆ ಫಾರಿಯಾ (ಭಾರತ) ಮಿಸ್ ಏರ್ - ಜೆನ್ನಿಫರ್ ಪಾಜ್ಮಿನೋ (ಈಕ್ವೆಡಾರ್) ಮಿಸ್ ವಾಟರ್ - ವಾಟ್ಸಾಂಪಾರ್ನ್ ವಟ್ಟಾನಕೂನ್ (ಥಾಯ್ಲೆಂಡ್) ಮಿಸ್ ಫೈರ್ - ಯೇಡಿ ಬೋಸ್ಕಾಸ್ (ಪೋರ್ಟ್‌ರಿಕೋ) ಫೈನಲಿಸ್ಟ್ಸ್ - ಮರೀನಾ ಕಿಶೀರಾ (ಜಪಾನ್), ನೊಂಡಿಬೋ ಡಿಂಗ್ವಾ (ದಕ್ಷಿಣ ಆಫ್ರಿಕಾ), ಮರಿಯಾಂಜೆಲಾ ಬೊನಾನಿ (ವೆನಿಜುವೆಲಾ) ಸೆಮಿ ಫೈನಲಿಸ್ಟ್ಸ್ - ಕಾರ್ಮೆನ್ ಜಸ್ಟೋವಾ (ಝೆಕ್ ಗಣರಾಜ್ಯ), ಇನಿಯಾ ಅರ್ನೊಲ್ಫೋ (ಇಟಲಿ), ಡಿಸೀರೀ ವಾನ್ ಡೆನ್ ಬರ್ಗ್ (ನೆದರ್ಲೆಂಡ್), ವಿಕ್ಟೋರಿಯಾ ಸುಕಿನಾ (ರಷ್ಯಾ), ವೆಲೆಂಟಿನಾ ಜಿಟಾಂಕ್ (ಉಕ್ರೇನ್), ಡೆನಿಯೆಲ್ ಬೌಂಡ್ಸ್ (ಅಮೆರಿಕಾ), ಲೂ ತಿ ಡಿಮ್ ಹಾಂಗ್ (ವಿಯೆಟ್ನಾಂ).
ಮೌಂಟ್ ಕಾರ್ಮೆಲ್ ವಿದ್ಯಾರ್ಥಿನಿ... 20ರ ಹರೆಯದ ನಿಕೋಲೆ ಫಾರಿಯಾ ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನ ಹಳೆ ವಿದ್ಯಾರ್ಥಿನಿ. ಇದೇ ವರ್ಷದ ಏಪ್ರಿಲ್ 30ರಂದು ಪ್ಯಾಂಟಾಲೂಮ್ಸ್ ಫೆಮಿನಾ ಮಿಸ್ ಇಂಡಿಯಾ ಕಿರೀಟವನ್ನು ತೊಟ್ಟು ಮಿಸ್ ಅರ್ಥ್ ಪ್ರವೇಶಿಸಿದ್ದರು.
ಮಿಸ್ ಇಂಡಿಯಾ ಕಿರೀಟ ಪಡೆಯುವ ಮೊದಲೇ 2005ರಿಂದ ಫಾರಿಯಾ ಮಾಡೆಲಿಂಗ್ ಜಗತ್ತಿನಲ್ಲಿ ಹೆಸರು ಮಾಡಿದವರು. ಈಗ ಮಿಸ್ ಅರ್ಥ್ ಕಿರೀಟವೂ ಸಿಕ್ಕಿರುವುದರಿಂದ ಆನಂದ ತುಂದಿಲರಾಗಿರುವ ಅವರು, 'ಮುಂದಿನ ವಾರವೇ ಬೆಂಗಳೂರಿಗೆ ಬರುತ್ತಿದ್ದೇನೆ. ಬಂದ ಕೂಡಲೇ ಸೈಕಲ್ ರಿಕ್ಷಾದ ಕುರಿತು ಪ್ರಚಾರ ಆರಂಭಿಸುತ್ತೇನೆ' ಎಂದಿದ್ದಾರೆ.
ಸೈಕಲ್ ರಿಕ್ಷಾದಿಂದ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವುದು ಮಾತ್ರವಲ್ಲ, ಮಾಲಿನ್ಯವನ್ನು ಕೂಡ ತಡೆಗಟ್ಟಬಹುದಾಗಿದೆ. ಜಾಗತಿಕ ತಾಪಮಾನ ಏರಿಕೆ ಸಂಬಂಧ ನನ್ನಿಂದ ಸಾಧ್ಯವಾಗುವಷ್ಟು ಸಹಕಾರ ನೀಡುವ ಬಯಕೆ ನನ್ನದು ಎಂದು ತಿಳಿಸಿದ್ದಾರೆ.