ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಂಬೈ ದಾಳಿ; ಪಾಕಿಸ್ತಾನ ನಿಯೋಗಕ್ಕೆ ಭಾರತ ಒಪ್ಪಿಗೆ? (India | Pakistan | Mumbai attacks | Ajmal Kasab)
Bookmark and Share Feedback Print
 
ಮುಂಬೈ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಏಳು ಶಂಕಿತರನ್ನು ವಿಚಾರಣೆ ನಡೆಸುತ್ತಿರುವ ಪಾಕಿಸ್ತಾನದ ನಿಯೋಗವು ಭಾರತಕ್ಕೆ ಬರುವ ಸಂದರ್ಭದಲ್ಲಿ ಅವರಿಗೆ ಸಾಕ್ಷಿಗಳು ಮತ್ತು ಇತರ ಅಧಿಕಾರಿಗಳನ್ನು ಭೇಟಿ ಮಾಡಲು ಸರಕಾರ ಅವಕಾಶ ನೀಡುವ ಸಾಧ್ಯತೆಗಳಿವೆ.

ಈ ಸಂಬಂಧ ಬಾಂಬೆ ಹೈಕೋರ್ಟ್ ಮುಂದಿನ ವಾರ ನೀಡಬಹುದಾದ ಅಭಿಪ್ರಾಯವನ್ನು ಆಧರಿಸಿ ಭಾರತ ಸರಕಾರವು ತನ್ನ ನಿಲುವನ್ನು ಪಾಕಿಸ್ತಾನಕ್ಕೆ ತಿಳಿಸಲಿದೆ ಎಂದು ಮೂಲಗಳು ಹೇಳಿವೆ.

ಮುಂಬೈ ದಾಳಿಯಲ್ಲಿ ತಪ್ಪಿತಸ್ಥ ಎಂದು ಘೋಷಿಸಲ್ಪಟ್ಟಿರುವ ಅಜ್ಮಲ್ ಕಸಬ್‌ ಹೇಳಿಕೆ ಪಡೆದುಕೊಂಡಿರುವ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್.ವಿ. ಸಾವಂತ್ ವಾಘಲೆ ಮತ್ತು ತನಿಖಾಧಿಕಾರಿ ರಮೇಶ್ ಮಹಾಲೆ ಹಾಗೂ ಬಲಿಪಶುಗಳು ಮತ್ತು ಭಯೋತ್ಪಾದಕರ ಶವಗಳ ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರನ್ನು ಸಂದರ್ಶಿಸಿ, ಅವರ ಹೇಳಿಕೆಗಳನ್ನು ಪಾಕಿಸ್ತಾನದ ನಿಯೋಗವು ಪಡೆದುಕೊಳ್ಳುವ ನಿಟ್ಟಿನಲ್ಲಿ ಭಾರತವು ಯಾವುದೇ ಆಕ್ಷೇಪಗಳನ್ನು ವ್ಯಕ್ತಪಡಿಸುವ ಸಾಧ್ಯತೆಗಳು ಕಡಿಮೆ.

ಆದರೆ ಈ ಪ್ರಕರಣವು ಹೈಕೋರ್ಟಿನಲ್ಲಿರುವುದರಿಂದ, ನ್ಯಾಯಾಲಯದ ಅಭಿಪ್ರಾಯವನ್ನು ಪಡೆಯುವುದು ಅಗತ್ಯವಾಗಿದೆ ಎಂದು ಮೂಲಗಳು ಹೇಳಿವೆ.

2008ರ ನವೆಂಬರ್ 26ರ ಮುಂಬೈ ದಾಳಿ ಪ್ರಕರಣವು ಪಾಕಿಸ್ತಾನದಲ್ಲಿ ತಾರ್ಕಿಕ ನಿರ್ಣಯಕ್ಕೆ ತಲುಪಬೇಕೆಂಬುದು ನಮ್ಮ ಬಯಕೆ. ಹೈಕೋರ್ಟ್ ಅನುಮತಿ ನೀಡಿದರೆ ಪಾಕಿಸ್ತಾನದ ನಿಯೋಗವು ಭಾರತಕ್ಕೆ ಬಂದು ಅಧಿಕಾರಿಗಳ ಹೇಳಿಕೆಗಳನ್ನು ಪಡೆಯುವುದರಲ್ಲಿ ನಮ್ಮದೇನೂ ಅಭ್ಯಂತರವಿಲ್ಲ ಎಂದು ಸರಕಾರಿ ಮೂಲವೊಂದು ಹೇಳಿದೆ.

ಮುಂಬೈ ದಾಳಿಯಲ್ಲಿ ಬದುಕುಳಿದಿದ್ದ ಏಕೈಕ ಪಾಕಿಸ್ತಾನಿ ಉಗ್ರ ಕಸಬ್‌ಗೆ ವಿಶೇಷ ನ್ಯಾಯಾಧೀಶ ಎಂ.ಎಲ್. ತಹಲಿಯಾನಿಯವರು ಇದೇ ವರ್ಷದ ಮೇ ತಿಂಗಳಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಿದ್ದರು. ಪ್ರಸಕ್ತ ಇದನ್ನು ಖಚಿತಪಡಿಸುವ ವಿಚಾರಣೆ ಹೈಕೋರ್ಟಿನಲ್ಲಿ ನಡೆಯುತ್ತಿದೆ.

ಭಾರತದಲ್ಲಿರುವ ಸಾಕ್ಷಿಗಳು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ಹೇಳಿಕೆಗಳನ್ನು ಪಡೆದುಕೊಳ್ಳಲು ನಮ್ಮ ನಿಯೋಗಕ್ಕೆ ಭಾರತವು ಇನ್ನೂ ಅವಕಾಶ ನೀಡದೇ ಇರುವುದರಿಂದ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಶಂಕಿತ ಆರೋಪಿಗಳ ವಿಚಾರಣೆ ವಿಳಂಬವಾಗುತ್ತಿದೆ ಎಂದು ಇತ್ತೀಚೆಗಷ್ಟೇ ಪಾಕ್ ಆಂತರಿ ಸಚಿವ ರೆಹಮಾನ್ ಮಲಿಕ್ ಹೇಳಿದ್ದರು.
ಸಂಬಂಧಿತ ಮಾಹಿತಿ ಹುಡುಕಿ