2ಜಿ ತರಂಗಾಂತರ ಹಂಚಿಕೆಯ 76 ಲಕ್ಷ ಕೋಟಿ ರೂಪಾಯಿ ಹಗರಣದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಅವರ ಇಬ್ಬರು ಸಹೋದರಿಯರು ಪಾಲ್ಗೊಂಡಿದ್ದಾರೆಯೇ? ಈ ಹಗರಣವನ್ನು ಹೊರಗೆಳೆಯುವಲ್ಲಿ ಅವಿರತ ಶ್ರಮವಹಿಸಿರುವ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯನ್ ಸ್ವಾಮಿಯವರ ಪ್ರಕಾರ ಹೌದು.
ಇದೇ ವರ್ಷದ ನವೆಂಬರ್ 24ರಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ ಸ್ವಾಮಿ ಇದನ್ನು ತಿಳಿಸಿದ್ದಾರೆ. ವಾಸ್ತವದಲ್ಲಿ ಪತ್ರಿಕೆಗಳಿಗೂ ಈ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಯಾವುದೇ ಪತ್ರಿಕೆ ಅಥವಾ ಸುದ್ದಿವಾಹಿನಿಗಳು ಇದನ್ನು ಪ್ರಕಟಿಸುವ ಗೋಜಿಗೆ ಹೋಗಿಲ್ಲ.
ನನಗಿರುವ ಮಾಹಿತಿಗಳ ಪ್ರಕಾರ ಸೋನಿಯಾ ಗಾಂಧಿಯವರ ಇಬ್ಬರು ಸಹೋದರಿಯರಾದ ಅನೂಷ್ಕಾ ಮತ್ತು ನಾಡಿಯಾರಿಗೆ ತಲಾ ಶೇ.30ರಂತೆ ಅಂದರೆ 18,000 ಕೋಟಿ ರೂಪಾಯಿಗಳಂತೆ (ಒಟ್ಟು 36,000 ಕೋಟಿ ರೂ.) ಸಲ್ಲಿಕೆಯಾಗಿದೆ. ಸೋನಿಯಾ ಗಾಂಧಿ ಮತ್ತು ಅವರ ರಕ್ತಸಂಬಂಧಿಗಳು ಮಲೇಷಿಯಾ, ಹಾಂಕಾಂಗ್, ದುಬೈ ಮತ್ತು ಲಂಡನ್ ಸೇರಿದಂತೆ ಯೂರೋಪಿನ ವಿವಿಧ ಭಾಗಗಳಿಗೆ ನಿರಂತರ ಪ್ರಯಾಣ ಮಾಡುತ್ತಿರುವುದನ್ನು ಕಾನೂನಿನ ಅಡಿಯಲ್ಲಿ ತನಿಖೆಗೊಳಪಡಿಸುವ ಅಗತ್ಯವಿದೆ ಎಂದು ಸ್ವಾಮಿ ತನ್ನ ಪತ್ರದಲ್ಲಿ ತಿಳಿಸಿದ್ದಾರೆ.
ಅವರು ವಾಣಿಜ್ಯ ವಿಮಾನಗಳಲ್ಲಿ ಪ್ರಯಾಣಿಸುವ ಬದಲು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ (ಡಿಜಿಸಿಎ) ನೀತಿಗಳ ಅಡಿಯಲ್ಲಿ ಅಕ್ರಮವಾಗಿರುವ ಕಾರ್ಪೊರೇಟ್ ವಲಯವು ಒದಗಿಸುವ ಜೆಟ್ ವಿಮಾನಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ನನ್ನ ಗಮನಕ್ಕೆ ಬಂದಿರುವ ಪ್ರಕಾರ ಸೋನಿಯಾ ಮತ್ತು ಅವರ ಕುಟುಂಬವು ಆಗಾಗ ದುಬೈಗೆ ಪ್ರಯಾಣಿಸಿದ್ದು, ಅರಬ್ ಉದ್ಯಮ ಮೂಲವು ಒದಗಿಸುವ ಖಾಸಗಿ ಜೆಟ್‌ಗಳ ಮೂಲಕ ಅಲ್ಲಿಂದ ಯೂರೋಪಿಗೆ ಹೋಗಿದ್ದಾರೆ.
ಅವರು ಯಾವ ಪಾಸ್‌ಪೋರ್ಟಿನಲ್ಲಿ ವಿವಿಧ ದೇಶಗಳಲ್ಲಿ ಪ್ರಯಾಣಿಸಿದ್ದಾರೆ ಎಂಬುದು ನನಗೆ ಖಚಿತವಾಗಿ ತಿಳಿದಿಲ್ಲ. ಆದರೆ ದುಬೈಯಲ್ಲಿ ಅವರಿಗೆ ಪಾಕಿಸ್ತಾನ ಸೇರಿದಂತೆ ಭಾರತದ ವೈರಿ ರಾಷ್ಟ್ರಗಳ ಸಂಸ್ಥೆಗಳು ಸನ್ಮಾನ ಮಾಡಿವೆ ಎಂದು ಸ್ವಾಮಿ ಆರೋಪಿಸಿದ್ದಾರೆ.
ಭಯೋತ್ಪಾದನೆ, ಮತಾಂತರ ಮತ್ತು ಒಳನುಸುಳುವಿಕೆಯ ರೂಪದಲ್ಲಿ ಅಧರ್ಮವು ದೇಶವನ್ನೇ ವ್ಯಾಪಿಸುತ್ತಿದ್ದರೂ ಈ ಕುರಿತು ನೀವು ಯಾವುದೇ ನಿಲುವಿಗೆ ಬಂದಿಲ್ಲ. ಕಪ್ಪು ಹಣವನ್ನು ಬಿಳಿ ಮಾಡುವುದು ಮತ್ತು ಅಕ್ರಮವಾಗಿ ಬಿಲಿಯನ್‌ಗಟ್ಟರೆ ಡಾಲರ್ ಮೋಸದ ಹಣದಿಂದಾಗಿ ದೇಶದ ಏಕತೆಗೆ ಧಕ್ಕೆಯಾಗಿದೆ ಎಂದು ಹೇಳಿರುವ ಸ್ವಾಮಿ, ದುಷ್ಟರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪ್ರಧಾನಿಯವರನ್ನು ಒತ್ತಾಯಿಸಿದ್ದಾರೆ.
ಈ ಪತ್ರವನ್ನು ಸ್ವಾಮಿಯವರು ಸರ್ವೋಚ್ಚ ನ್ಯಾಯಾಲಯಕ್ಕೂ ಸಲ್ಲಿಸಿದ್ದಾರೆ. ಅವರು ಹೇಳಿಕೊಂಡಿರುವ ಪ್ರಕಾರ 2ಜಿ ಹಗರಣದ ಮೊತ್ತದಲ್ಲಿ ಶೇ.10ನ್ನು ದೂರಸಂಪರ್ಕ ಖಾತೆಯ ಮಾಜಿ ಸಚಿವ ಎ. ರಾಜಾ, ಶೇ.30ನ್ನು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಹಾಗೂ ಶೇ.30-30ರಂತೆ ಸೋನಿಯಾ ಗಾಂಧಿಯವರ ಇಬ್ಬರು ಸಹೋದರಿಯರಾದ ಅನೂಷ್ಕಾ ಮತ್ತು ನಾಡಿಯಾ ಅವರಿಗೆ ಹಂಚಲಾಗಿದೆ.