ಪುತ್ರನ ಬ್ರಹ್ಮಚರ್ಯಕ್ಕೆ ಅಂತ್ಯ ಹಾಡಲು ಮಹಾತಾಯಿಯೊಬ್ಬಳು ನಾಲಿಗೆಯನ್ನೇ ದೇವಿಗೆ ಅರ್ಪಿಸಿದ ವಿಚಿತ್ರ ಪ್ರಸಂಗವಿದು. ಮಗನಿಗೆ ಆದಷ್ಟು ಬೇಗ ಮದುವೆಯಾಗಬೇಕು ಎಂದು ಬೇಡಿಕೊಂಡು ಆಕೆ ಇಂತಹ ಕೃತ್ಯ ಎಸಗಿದ್ದಾಳೆ.
ಈ ಮಹಿಳೆಯನ್ನು 55ರ ಹರೆಯದ ಸಾಧನಾ ದೇವಿ ಎಂದು ಗುರುತಿಸಲಾಗಿದೆ. ವಿಧವೆಯಾಗಿರುವ ಈಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದುದನ್ನು ನೋಡಿದ ಭಕ್ತನೊಬ್ಬ ಆಸ್ಪತ್ರೆಗೆ ದಾಖಲಿಸಿದ್ದ. ಇದೀಗ ಚೇತರಿಸಿಕೊಳ್ಳುತ್ತಿದ್ದಾಳೆ.
ಇದು ನಡೆದಿರುವುದು ಲಕ್ನೋ (ಉತ್ತರ ಪ್ರದೇಶ) ಸಮೀಪದ ಬಾರಾಫ್ಖಾನಾ ಎಂಬಲ್ಲಿ. ನೇಕಾರನಾಗಿರುವ ತನ್ನ ಮಗನಿಗೆ ಹಲವು ತಿಂಗಳುಗಳಿಂದ ಮದುವೆ ಮಾಡಿಸಲು ಸಾಧನಾ ದೇವಿ ಯತ್ನಿಸಿದ್ದಳಾದರೂ, ಅದು ಕೈಗೂಡಿರಲಿಲ್ಲ. ಹಾಗಾಗಿ ತೀರಾ ಖಿನ್ನಳಾಗಿ ದೇವರ ಮೊರೆ ಹೋಗಿದ್ದಾಗಿ ಹೇಳಿದ್ದಾಳೆ.
ತನ್ನ ಮಗನಿಗೆ ಮದುವೆಯಾಗುವುದನ್ನು ನೋಡಬೇಕು ಎನ್ನುವುದು ಆ ಮಾತೆಯ ಬಯಕೆಯಾಗಿತ್ತು. ಈ ವಿಚಾರವನ್ನು ಸಂಬಂಧಿಕರು ಮತ್ತು ಆಪ್ತರಲ್ಲಿಯೂ ಹೇಳಿಕೊಂಡಿದ್ದಳು. ಬಯಕೆ ಈಡೇರಿಕೆಗಾಗಿ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಮಗನಿಗೆ ಮದುವೆಯಾದರೆ ಮಾರಿಯಮ್ಮನಿಗೆ ಹರಕೆ ನೀಡುವುದಾಗಿ ಕೆಲ ತಿಂಗಳುಗಳ ಹಿಂದೆ ಸಾಧನಾ ಹೇಳಿದ್ದಳು. ಆದರೆ ಕಡಿಮೆ ಸಂಪಾದನೆಯುಳ್ಳ ತಾಯಿ-ಮಗನ ಮನೆಯತ್ತ ಯಾವುದೇ ಹೆಣ್ಣು ಹೆತ್ತವರು ಒಲವು ತೋರಿಸಿರಲಿಲ್ಲ.
ನಿನ್ನ ನಾಲಿಗೆಯನ್ನು ದೇವಿಗೆ ಕೊಟ್ಟರೆ ಬಯಕೆ ಈಡೇರುತ್ತದೆ ಎಂದು ಈ ಹೊತ್ತಿನಲ್ಲಿ ಕೆಲವು ಮಂದಿ ಸಾಧನಾಗೆ ಸಲಹೆ ನೀಡಿದ್ದರು. ಇದನ್ನೇ ನಂಬಿದ ಆಕೆ, ಶುಕ್ರವಾರ ದೇವಿ ಗುಡಿಗೆ ತೆರಳಿ ಬ್ಲೇಡಿನಿಂದ ನಾಲಿಗೆಯನ್ನು ಕತ್ತರಿಸಿಕೊಂಡಿದ್ದಾಳೆ.
ಇಂತಹ ಘಟನೆಗಳು ರಾಜ್ಯದಿಂದ ಈ ಹಿಂದೆಯೂ ವರದಿಯಾಗಿವೆ. ಕೈ ಬೆರಳು, ಕೈ, ಕಣ್ಣು ಮುಂತಾದ ಅಂಗಗಳನ್ನು ದೇವರಿಗೆ ಅರ್ಪಿಸುವ ಮೂಢ ನಂಬಿಕೆಗಳು ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಕಂಡು ಬಂದಿದೆ.
ಇಲ್ಲೇ ಪಕ್ಕದ ಸೀತಾಪುರ ಜಿಲ್ಲೆಯಲ್ಲಿನ ನೈಮಿಶರಣ್ಯ ದೇವಸ್ಥಾನದಲ್ಲಿ ಯುವಕನೊಬ್ಬ ತನ್ನ ನಾಲಿಗೆ ಕತ್ತರಿಸಿಕೊಂಡಿದ್ದ. ಹರ್ದೋಯಿ ಜಿಲ್ಲೆಯ ಶಿವ ದೇಗುಲದಲ್ಲಿ ಹತ್ತಾರು ಮಂದಿ ನಾಲಿಗೆ ಕತ್ತರಿಸಿಕೊಂಡಿರುವ ಉದಾಹರಣೆಗಳಿವೆ.