ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಿವಿಸಿ ನೇಮಕಾತಿ ರದ್ದು ಪ್ರಶ್ನೆ; ಥಾಮಸ್‌, ಕೇಂದ್ರಕ್ಕೆ ಸಂಕಟ (Supreme Court | CVC | PJ Thomas | Congress)
Bookmark and Share Feedback Print
 
ಭ್ರಷ್ಟಾಚಾರಿಯನ್ನು ಕೇಂದ್ರ ಜಾಗೃತದಳ ಆಯುಕ್ತರ ಹುದ್ದೆಗೆ ನೇಮಕಗೊಳಿಸಿರುವುದನ್ನು ಯಾಕೆ ರದ್ದುಗೊಳಿಸಬಾರದು ಎಂದು ಪಿ.ಜೆ. ಥಾಮಸ್ ಮತ್ತು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನಿಸಿದ್ದು, 2ಜಿ ಪ್ರಕರಣದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಮತ್ತೊಮ್ಮೆ ಮುಜುಗರಕ್ಕೀಡಾಗಿದೆ.

ಕೇಂದ್ರ ಜಾಗೃತದಳ ಆಯುಕ್ತ (ಸಿವಿಸಿ) ಪಿ.ಜೆ. ಥಾಮಸ್ ಅವರ ನೇಮಕಾತಿಯನ್ನು ರದ್ದುಗೊಳಿಸಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್, ಕೇಂದ್ರ ಮತ್ತು ಸಿವಿಸಿಗೆ ನೊಟೀಸ್ ಜಾರಿಗೊಳಿಸಿದೆ.

ಪ್ರಕರಣದ ಮುಂದಿನ ವಿಚಾರಣೆ ಜನವರಿ 27ರಂದು ನಡೆಯಲಿದ್ದು, ಥಾಮಸ್ ಸ್ವತಃ ಹಾಜರಾಗಬೇಕು ಎಂದೂ ನ್ಯಾಯಾಲಯ ಆದೇಶ ನೀಡಿದೆ.

ನಾವು ಕಡತಗಳನ್ನು ಪರಿಶೀಲನೆ ನಡೆಸುತ್ತೇವೆ. ಅಂತಿಮ ವಿಚಾರಣೆಯ ಸಂದರ್ಭದಲ್ಲಿ ಸಿವಿಸಿ ಮತ್ತು ಕೇಂದ್ರ ಸರಕಾರವು ಈ ಸಂಬಂಧ ತಮ್ಮ ಪ್ರತಿಕ್ರಿಯೆಗಳನ್ನು ನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ಅವರ ನೇತೃತ್ವದ ಪೀಠವು ಸೂಚಿಸಿತು.

ಸರಕಾರಕ್ಕೆ ಕೋರ್ಟ್ ನೀಡಿದ ನೊಟೀಸನ್ನು ಅಟಾರ್ನಿ ಜನರಲ್ ಜಿ.ಇ. ವಹನ್ವತಿ ಸ್ವೀಕರಿಸಿದರು. ಆದರೆ ಥಾಮಸ್ ಪರವಾಗಿ ನೊಟೀಸ್ ಸ್ವೀಕರಿಸಲು ನಿರಾಕರಿಸಿದರು.

ತಕ್ಷಣವೇ ಅಂತಿಮ ವಿಚಾರಣೆಯನ್ನು ನಡೆಸುವ ಉತ್ಸುಕತೆಯನ್ನು ನ್ಯಾಯಾಲಯ ತೋರಿಸಿತಾದರೂ, ಸರಕಾರಿ ವಕೀಲ ವಹನ್ವತಿಯವರು ಆರು ವಾರಗಳ ಕಾಲಾವಕಾಶ ಕೇಳಿದರು. ಇದಕ್ಕೆ ಅರ್ಜಿದಾರರ ಪರ ವಕೀಲರು ವಿರೋಧ ವ್ಯಕ್ತಪಡಿಸಿದ ಹೊರತಾಗಿಯೂ ಜನವರಿ 27ಕ್ಕೆ ವಿಚಾರಣೆಯನ್ನು ನಿಗದಿಪಡಿಸಲಾಯಿತು.

ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿರುವ ಥಾಮಸ್‌ರನ್ನು ದೇಶದ ಉನ್ನತ ತನಿಖಾ ಸಂಸ್ಥೆಯ ಮುಖ್ಯಸ್ಥ ಹುದ್ದೆಗೆ ನೇಮಕ ಮಾಡಿರುವುದನ್ನು ರದ್ದುಗೊಳಿಸಬೇಕು ಎಂದು ಸರಕಾರೇತರ ಸಂಸ್ಥೆಯೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿತ್ತು.

ಸಿವಿಸಿ ಥಾಮಸ್ ಅವರು ಜನವರಿ 27ರೊಳಗೆ ರಾಜೀನಾಮೆ ನೀಡಬೇಕಾದ ಒತ್ತಡವಿಲ್ಲ. ನೊಟೀಸನ್ನು ಲೋಕಸಭೆಯ ಪ್ರತಿಪಕ್ಷದ ನಾಯಕಿಗೂ ಕಳುಹಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಗೃಹಸಚಿವ ಪಿ. ಚಿದಂಬರಂ ಮತ್ತು ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ನೇತೃತ್ವದ ತ್ರಿಸದಸ್ಯ ಸಮಿತಿಯು ಇದೇ ವರ್ಷದ ಸೆಪ್ಟೆಂಬರಿನಲ್ಲಿ ಥಾಮಸ್ ಅವರನ್ನು ಕೇಂದ್ರ ಜಾಗೃತದಳ ಆಯುಕ್ತರನ್ನಾಗಿ ನೇಮಕ ಮಾಡಿತ್ತು. ಕಳಂಕಿತ ಥಾಮಸ್‌ರ ನೇಮಕವನ್ನು ಸುಷ್ಮಾ ವಿರೋಧಿಸಿದ್ದ ಹೊರತಾಗಿಯೂ ಸರಕಾರ ಅವರನ್ನೇ ಆಯ್ಕೆ ಮಾಡಿತ್ತು. ಈ ಸಂಬಂಧ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೂ ಸುಷ್ಮಾ ದೂರು ನೀಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ