ಸುದೀರ್ಘ 14 ವರ್ಷಗಳ ಕಾಲ ಸಮಾಜವಾದಿ ಪಕ್ಷದಲ್ಲಿದ್ದು ಕೆಲ ಸಮಯದ ಹಿಂದಷ್ಟೇ ಉಚ್ಛಾಟಿಸಲ್ಪಟ್ಟಿದ್ದ ಅಮರ್ ಸಿಂಗ್, ತಾನು ಎಲ್ಲಾದರೂ ಬಾಯ್ಬಿಟ್ಟರೆ ಮುಲಾಯಂ ಸಿಂಗ್ ಜೈಲಿನಲ್ಲಿರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ನಾನು ಒಂದು ವೇಳೆ ಬಾಯ್ತೆರೆದಲ್ಲಿ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಸೇರಿದಂತೆ ಹಲವು ಮಂದಿ ಕಂಬಿ ಎಣಿಸಬೇಕಾಗುತ್ತದೆ ಎಂದು ಬಡೋಹಿ ಎಂಬಲ್ಲಿ ಪತ್ರಕರ್ತರ ಜತೆ ಮಾತನಾಡುತ್ತಾ ತಿಳಿಸಿದರು.
ಉತ್ತರ ಪ್ರದೇಶವನ್ನು ಛೇದಿಸಿ ಪೂರ್ವಾಂಚಲ ಎಂಬ ಪ್ರತ್ಯೇಕ ರಾಜ್ಯ ಸೃಷ್ಟಿಸಬೇಕು ಎಂದು ಜನರನ್ನು ಬಡಿದೆಬ್ಬಿಸುತ್ತಿರುವ ಅಮರ್ ಸಿಂಗ್, ತಾನು 14 ವರ್ಷಗಳನ್ನು ಸಮಾಜವಾದಿ ಪಕ್ಷದಲ್ಲಿ ಕಳೆದವನು ಎಂಬುದು ನೆನಪಿರಲಿ ಎಂದಿದ್ದಾರೆ.
ಸಮಾಜವಾದಿ ಪಕ್ಷಕ್ಕೆ ಮತ್ತೆ ಸೇರ್ಪಡೆಗೊಂಡಿರುವ ಜನಪ್ರಿಯ ಮುಸ್ಲಿಂ ರಾಜಕೀಯ ನಾಯಕ ಆಜಂ ಖಾನ್ ಹೇಳಿಕೆಗೂ ಲೋಕ ಮಂಚ್ ಸಂಸ್ಥಾಪಕ ತಿರುಗೇಟು ನೀಡಿದ್ದಾರೆ.
ಅಮರ್ ಸಿಂಗ್ ಒಬ್ಬ ಏಜೆಂಟ್ ಮತ್ತು ಪೂರೈಕೆದಾರ ಎಂದು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಸಮಾಜವಾದಿ ಪಕ್ಷದಿಂದ ವರ್ಷದ ಹಿಂದೆ ಉಚ್ಚಾಟನೆಗೊಂಡಿದ್ದ ಖಾನ್ ಆರೋಪಿಸಿದ್ದರು.
ತಾನು ಏನನ್ನು ಮುಲಾಯಂ ಸಿಂಗ್‌ರಿಗೆ ಪೂರೈಸಿದ್ದೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಅದನ್ನು ಖಾನ್‌ಗೆ ಅವರು ತಿಳಿಸಬೇಕು ಎಂದು ಅಮರ್ ಸಿಂಗ್ ಸಲಹೆ ನೀಡಿದರು.
ಬಹಿರಂಗಪಡಿಸಲು ಏನೂ ಇಲ್ಲ... ಹೀಗೆಂದು ಪ್ರತಿಕ್ರಿಯಿಸಿರುವುದು ಸಮಾಜವಾದಿ ಪಕ್ಷ. ನಾನು ಯಾವತ್ತೂ ಅಮರ್ ಸಿಂಗ್ ಅವರನ್ನು ಅಂಕಲ್ ಎಂದು ಕರೆಯುತ್ತಾ ಬಂದವನು. ನಮ್ಮ ಪ್ರಕಾರ ಸಮಾಜವಾದಿ ಪಕ್ಷ ಅಥವಾ ಅದರ ವ್ಯಕ್ತಿಗಳಿಗೆ ಸಂಬಂಧಪಟ್ಟಂತೆ ಅವರಲ್ಲಿ ಯಾವುದೇ ರಹಸ್ಯಗಳಿಲ್ಲ. ಇದ್ದರೆ ಅದನ್ನು ಬಹಿರಂಗಪಡಿಸಲಿ ಎಂದು ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ.