ಸಂಸತ್ ಸದಸ್ಯನ ಸ್ಥಾನಕ್ಕೆ ಮತ್ತು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಕೆಲ ದಿನಗಳ ನಂತರ ಮೊದಲ ಬಾರಿ ಬಹಿರಂಗವಾಗಿ ಕಾಣಿಸಿಕೊಂಡಿರುವ ವೈಎಸ್‌ಆರ್ ಪುತ್ರ ಜಗನ್ ಮೋಹನ್ ರೆಡ್ಡಿ, ಮುಂದಿನ 45 ದಿನಗಳೊಳಗೆ ಹೊಸ ಪಕ್ಷ ಸ್ಥಾಪನೆ ಮಾಡುತ್ತೇನೆ ಎಂದು ಮಂಗಳವಾರ ತಿಳಿಸಿದರು.
ಪುಲಿವೆಂದುಲದಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಜಗನ್, 2014ರ ವಿಧಾನಸಭೆ ಚುನಾವಣೆ ನನ್ನದಾಗಿರುತ್ತದೆ ಎಂದರು.
ಇನ್ನು 45 ದಿನಗಳಲ್ಲಿ ಹೊಸ ಪಕ್ಷ ಸ್ಥಾಪಿಸಲಿದ್ದೇನೆ. ಲಕ್ಷಾಂತರ ಜನರು ಇಂದಿಗೂ ತನ್ನ ತಂದೆ, ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್. ರಾಜಶೇಖರ ರೆಡ್ಡಿಯವರನ್ನು ಪೂಜಿಸುತ್ತಿದ್ದಾರೆ. ಅವರ ಕಾರ್ಯಸೇವೆಯನ್ನು ಶ್ಲಾಘಿಸುತ್ತಿದ್ದಾರೆ ಎಂದರು.
ಸೋನಿಯಾ ಗಾಂಧಿ ಒಳಗೊಂಡಂತೆ ಕಾಂಗ್ರೆಸ್ ನಾಯಕರು ತಮ್ಮ ಕುಟುಂಬವನ್ನು ಅವಮಾನಿಸಿ, ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮತ್ತು ಲೋಕಸಭಾ ಸದಸ್ಯತ್ವಕ್ಕೆ ಜಗನ್ ನವೆಂಬರ್ 29 ಸೋಮವಾರ ರಾಜೀನಾಮೆ ನೀಡಿದ್ದರು.
2014ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ ನನ್ನ ಫೈನಲ್ ಆಗಿರುತ್ತದೆ ಎಂದ ಅವರು, ನೂತನ ಪಕ್ಷ ಅಧಿಕಾರಕ್ಕೆ ಬರಲು ವೈಎಸ್ಆರ್ ಬೆಂಬಲಿಗರು ಮತ್ತು ತಮ್ಮ ಹೊಸ ಪಕ್ಷದ ಬೆಂಬಲಿಗರು ಆಶೀರ್ವಾದ ಮಾಡಲಿದ್ದಾರೆ ಎಂದು ಭವಿಷ್ಯ ನುಡಿದರು.