ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗುಟ್ಕಾ ಮೇಲೆ ಸುಪ್ರೀಂ ಪ್ರಹಾರ; ಪ್ಲಾಸ್ಟಿಕ್ ಪ್ಯಾಕೆಟ್ ನಿಷೇಧ (gutka | tobacco | Supreme Court | plastic sachets)
Bookmark and Share Feedback Print
 
ಗುಟ್ಕಾ, ಪಾನ್ ಮಸಾಲ ಮತ್ತು ತಂಬಾಕು ಉತ್ಪಾದಕರಿಗೆ ಮತ್ತೊಂದು ಮಹತ್ವದ ಹಿನ್ನಡೆಯುಂಟಾಗಿದೆ. ಈ ಉತ್ಪನ್ನಗಳ ಪ್ಲಾಸ್ಟಿಕ್ ಪ್ಯಾಕೇಟುಗಳನ್ನು ಸರ್ವೋಚ್ಚ ನ್ಯಾಯಾಲಯ ನಿಷೇಧಿಸಿದೆ. 2011ರ ಮಾರ್ಚ್ ಒಂದರಿಂದ ಜಾರಿಗೆ ಬರುವಂತೆ ಈ ನಿಷೇಧ ವಿಧಿಸಲಾಗಿದೆ.

ನ್ಯಾಯಾಲಯವು ಇಂತಹ ಆದೇಶ ನೀಡುವುದರಿಂದ ಇದಕ್ಕೆ ಸಂಬಂಧಪಟ್ಟ ಉದ್ಯಮವು ಮುಚ್ಚಿ ಹೋಗಬಹುದು ಎಂದು ಭೀತಿ ವ್ಯಕ್ತಪಡಿಸಿರುವುದಕ್ಕೆ, ಒಂದೋ ಪರಿಸರ ಸ್ನೇಹಿ ಪ್ಯಾಕೇಟುಗಳತ್ತ ನೀವು ಹೊರಳಬೇಕು; ಇಲ್ಲವೇ ಮುಚ್ಚಿ ಬಿಡಿ. ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ ಎಂದಿದೆ.
PR

ಮುಂದಿನ ವರ್ಷದ ಮಾರ್ಚ್ ತಿಂಗಳೊಳಗೆ ಗುಟ್ಕಾ, ಪಾನ್ ಮಸಾಲ ಮತ್ತು ತಂಬಾಕು ಉತ್ಪಾದಕರು, ತಮ್ಮ ಉತ್ಪನ್ನಗಳನ್ನು ಪ್ಲಾಸ್ಟಿಕ್ ಪೊಟ್ಟಣದ ಬದಲಿಗೆ ಕಾಗದ ಅಥವಾ ಇನ್ನಿತರ ಪರಿಸರ ಸ್ನೇಹಿ ಪೊಟ್ಟಣಗಳಲ್ಲಿ ಮಾರುಕಟ್ಟೆಗೆ ತರಬೇಕಾಗುತ್ತದೆ.

ಅನಿಯಂತ್ರಿತ ಗುಟ್ಕಾ ಸೇವನೆಯಿಂದ ದೇಶದಲ್ಲಿನ 15 ವರ್ಷದೊಳಗಿನ 50 ಲಕ್ಷಕ್ಕೂ ಹೆಚ್ಚು ಮಕ್ಕಳು ಬಾಯಿಯ ಕ್ಯಾನ್ಸರುಗಳಿಂದ ಬಳಲುತ್ತಿರುವ ವರದಿಗಳು ಬಂದಿರುವ ನಡುವೆಯೇ ಸುಪ್ರೀಂ ಕೋರ್ಟ್ ಇಂತಹ ಮಹತ್ವದ ಆದೇಶ ನೀಡಿದೆ. ವರದಿಗಳ ಪ್ರಕಾರ ದೇಶದ ಒಟ್ಟು ಮಕ್ಕಳಲ್ಲಿರುವ ಬಾಯಿ ಕ್ಯಾನ್ಸರಿನ ಶೇ.16ರಷ್ಟು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳಲ್ಲೇ ಕಂಡು ಬಂದಿದೆ.

ಶಾಲಾ ಮಕ್ಕಳಲ್ಲಿ ಗುಟ್ಕಾ ಚಟ ವಿಪರೀತವಾಗುತ್ತಿರುವುದರಿಂದ ನ್ಯಾಯಾಲಯ ಇಂತಹ ತೀರ್ಮಾನಕ್ಕೆ ಬಂದಿದೆ. ಆದರೆ ಈ ನಿರ್ಧಾರ ಗುಟ್ಕಾ ತಯಾರಿಕಾ ಕಂಪನಿಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ತಂಬಾಕು ಉತ್ಪನ್ನಗಳ ಪ್ಯಾಕೇಟುಗಳ ಮೇಲೆ ಕನಿಷ್ಠ ಶೇ.40 ಆವರಿಸಿಕೊಳ್ಳುವಂತೆ ಎಚ್ಚರಿಕೆ ಚಿತ್ರಗಳನ್ನೊಳಗೊಂಡ ಬರಹಗಳನ್ನು ಕಡ್ಡಾಯವಾಗಿ ಮುದ್ರಿಸಬೇಕು ಎಂದು ಕೇಂದ್ರ ಸರಕಾರವು ಆದೇಶ ನೀಡಿದ ವರ್ಷದ ನಂತರ ಈ ಬೆಳವಣಿಗೆ ನಡೆದಿದೆ.

ಸಿಗರೇಟು, ಗುಟ್ಕಾ ಪ್ಯಾಕೇಟುಗಳ ಮೇಲೆ ಅನ್ವಯವಾಗುವಂತೆ ಈ ಆದೇಶವನ್ನು ನೀಡಲಾಗಿತ್ತು. ಶ್ವಾಸಕೋಶದ ಕ್ಯಾನ್ಸರ್ ಸೇರಿದಂತೆ ಅಪಾಯಕಾರಿ ರೋಗಗಳ ಚಿತ್ರದೊಂದಿಗೆ, Smoking Kills, Tobacco Kills ಎಂಬ ಸಂದೇಶವನ್ನು ಕೂಡ ಪ್ರಸಕ್ತ ಈ ಪ್ಯಾಕೇಟುಗಳ ಮೇಲೆ ಮುದ್ರಿಸಲಾಗುತ್ತಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ ಎಂಟು ಲಕ್ಷ ಅಥವಾ ಪ್ರತಿದಿನ 2,200 ಮಂದಿ ತಂಬಾಕು ಉತ್ಪನ್ನಗಳ ಕಾರಣದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ