ಕಾಮನ್‌ವೆಲ್ತ್ ಗೇಮ್ಸ್, 2ಜಿ ತರಂಗಾಂತರ ಹಗರಣ, ಕರ್ನಾಟಕದ ಭೂ ಹಗರಣ ಇವುಗಳು ಇತ್ತೀಚಿನ ದಿನಗಳಲ್ಲಿ ಭಾರತ ಕಂಡ ಬಹುದೊಡ್ಡ ಹಗರಣಗಳು. ಆದರೆ ಅವನ್ನೆಲ್ಲ ಮೀರಿಸುವ ಮತ್ತೊಂದು ಹಗರಣ ಬಯಲಿಗೆ ಬಂದಿದೆ. ಇದು ಬರೋಬ್ಬರಿ ಎರಡು ಲಕ್ಷ ಕೋಟಿ ರೂಪಾಯಿ ಮೊತ್ತದ ಆಹಾರ ಹಗರಣ.
ಭ್ರಷ್ಟಾಚಾರದ ಜಾಗತಿಕ ಪಟ್ಟಿಯಲ್ಲಿ ಪ್ರಸಕ್ತ ಭಾರತ ಹೊಂದಿರುವ ಸ್ಥಾನ 87. ಬಹುಶಃ 2011ರ ವರದಿಯಲ್ಲಿ ಇದು ಭಾರೀ ಏರಿಕೆ ಕಾಣುವ ಎಲ್ಲಾ ಸಾಧ್ಯತೆಗಳು ಕಾಣುತ್ತಿವೆ. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರದಲ್ಲಿ ದಿನಕ್ಕೊಂದರಂತೆ ಹಗರಣಗಳು (ಅಕ್ಕಿ ರಫ್ತು, ಸಕ್ಕರೆ-ಗೋಧಿ ರಫ್ತು, ಗೇಮ್ಸ್, ಪ್ರಸಾರ ಭಾರತಿ, 2ಜಿ, ಎಲ್ಐಸಿ ಹಗರಣ) ಹೊರಗೆ ಬರುತ್ತಿವೆ. ಇದಕ್ಕೆ ಕರ್ನಾಟಕದ ಬಿಜೆಪಿ (ಭೂ ಹಗರಣ), ಉತ್ತರ ಪ್ರದೇಶದ ಬಹುಜನ ಸಮಾಜ ಪಕ್ಷ (ಆಹಾರ ಹಗರಣ), ತಮಿಳುನಾಡಿನ ಡಿಎಂಕೆ ಸರಕಾರಗಳು (ಭೂ ಹಗರಣ) ಪೈಪೋಟಿ ನೀಡುತ್ತಿವೆ.
ವಿದೇಶಗಳಿಗೆ ಮಾರಿದ್ದ ಧೂರ್ತರು... ಅಂತ್ಯೋದಯ, ಅನ್ನಪೂರ್ಣ, ಮಧ್ಯಾಹ್ನದ ಊಟ ಯೋಜನೆಗಳಿಗೆ ವಿತರಿಸಬೇಕಾಗಿದ್ದ ಆಹಾರ ಪದಾರ್ಥಗಳನ್ನು ಕಳ್ಳತನದ ಮೂಲಕ ಬಾಂಗ್ಲಾದೇಶ, ನೇಪಾಳ ಮತ್ತು ಇತರ ರಾಷ್ಟ್ರಗಳಿಗೆ ಮಾರಾಟ ಮಾಡಲಾಗಿರುವ ಪ್ರಕರಣವಿದು.
ಇದು ನಡೆದಿರುವುದು 2001ರಿಂದ 2007ರ ನಡುವೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳ ಉನ್ನತ ಅಧಿಕಾರಿಗಳ ಸಹಕಾರದೊಂದಿಗೆ ಹೀಗೆ ಮಾಡಲಾಗಿತ್ತು. ಸಿಬಿಐ ಪ್ರಕಾರ 200ಕ್ಕೂ ಹೆಚ್ಚು ಅಧಿಕಾರಿಗಳ ಕೈವಾಡ ಇದರಲ್ಲಿದೆ.
2007ರ ಡಿಸೆಂಬರ್ 1ರಂದು ಈ ಹಗರಣದ ಸಿಬಿಐ ತನಿಖೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಆದೇಶಿಸಿದ್ದರು.
ಹಗರಣ ನಡೆದಿರುವ ಆರು ವರ್ಷಗಳ ಸಂದರ್ಭದಲ್ಲಿ ಮೂರು ಪಕ್ಷಗಳು ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದಿದ್ದವು. 28-10-2000ದಿಂದ 8-3-2002ರವರೆಗೆ ಬಿಜೆಪಿಯ ರಾಜನಾಥ್ ಸಿಂಗ್, 3-5-2002ರಿಂದ 29-8-2003ರವರೆಗೆ ಬಿಎಸ್‌ಪಿಯ ಮಾಯಾವತಿ ಹಾಗೂ 29-8-2003ರಿಂದ 13-5-2007ರವರೆಗೆ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಮುಖ್ಯಮಂತ್ರಿಯಾಗಿದ್ದರು.
ಉತ್ತರ ಪ್ರದೇಶದ 31 ಜಿಲ್ಲೆಗಳಲ್ಲಿ ಬಡವರಿಗೆ ಉಚಿತವಾಗಿ ಇಲ್ಲವೇ ಗರಿಷ್ಠ ರಿಯಾಯಿತಿ ದರದಲ್ಲಿ ನೀಡಲೆಂದು ಮೀಸಲಾಗಿದ್ದ ಆಹಾರ ಪದಾರ್ಥಗಳನ್ನು ಅಧಿಕಾರಿಗಳು ರಾಜಕಾರಣಿಗಳ ಬೆಂಬಲದೊಂದಿಗೆ ರಾಜ್ಯದ ಹೊರಗೆ ಮಾತ್ರವಲ್ಲದೆ, ವಿದೇಶಗಳಿಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಿದ್ದ ಪ್ರಕರಣವಿದು.
ಪ್ರಸಕ್ತ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ -- ಈ ಎರಡೂ ತನಿಖಾ ಸಂಸ್ಥೆಗಳು ಪ್ರಕರಣದ ತನಿಖೆ ನಡೆಸುತ್ತಿವೆ. ಇದುವರೆಗೂ ಹಗರಣದ ಒಟ್ಟು ಮೌಲ್ಯ ಎಷ್ಟೆಂಬುದು ಖಚಿತವಾಗಿಲ್ಲ. ಆದರೆ ಅಂದಾಜು ಎರಡು ಲಕ್ಷ ಕೋಟಿ ರೂಪಾಯಿಗಳು ಎಂದು ಹೇಳಲಾಗಿದೆ. ಸ್ವತಂತ್ರ ಭಾರತದ ಅತಿ ದೊಡ್ಡ ಹಗರಣ ಎಂದು ಎಂದು ವರದಿಗಳು ಹೇಳಿವೆ.
ಪ್ರಸಕ್ತ ಎಲ್ಲಾ ಪಕ್ಷಗಳೂ ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿಸಿಕೊಂಡಿವೆ. ಸಿಬಿಐ ತನಿಖೆಗೆ ಆದೇಶ ನೀಡಿದ್ದೇ ನಾನು ಎಂದು ಮುಲಾಯಂ ಹೇಳುತ್ತಿದ್ದರೆ, ಮಾಯಾ ಮತ್ತೊಂದು ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ತಾನು ಸಾಚಾ ಎನ್ನುತ್ತಿದ್ದರೆ, ಬಿಜೆಪಿ ತಾನು ಅಪರಂಜಿ ಎಂದು ಹೇಳುತ್ತಿದೆ.
ತನಿಖೆ ಪೂರ್ತಿಗೊಂಡ ಬಳಿಕವಷ್ಟೇ ವಾಸ್ತವ ಚಿತ್ರಣ ಜನತೆಗೆ ಸ್ಪಷ್ಟವಾಗಿ ತಿಳಿಯಲಿದೆ.