ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಂದು ಜಡ್ಜ್‌ಗೆ ಬೆದರಿಕೆ ಹಾಕಿದ್ದು ಕರುಣಾನಿಧಿ ಶಿಷ್ಯ ರಾಜಾ!
(A Raja | Madras High Court | Khalifullah | R Raghupathy)
ಅಂದು ಜಡ್ಜ್‌ಗೆ ಬೆದರಿಕೆ ಹಾಕಿದ್ದು ಕರುಣಾನಿಧಿ ಶಿಷ್ಯ ರಾಜಾ!
ಚೆನ್ನೈ, ಮಂಗಳವಾರ, 7 ಡಿಸೆಂಬರ್ 2010( 17:37 IST )
2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಸಿಕ್ಕಿ ಬಿದ್ದು ಮಂತ್ರಿ ಪದವಿ ಕಳೆದುಕೊಂಡಿರುವ ಡಿಎಂಕೆ ಸಂಸದ ಎ. ರಾಜಾ ಮಾಡಿರುವ ಮತ್ತೊಂದು ಘನಾಂಧಾರಿ ಕಾರ್ಯ ಬಯಲಾಗಿದೆ. ಜಯಲಲಿತಾ ಅಂದು ಆರೋಪಿಸಿರುವಂತೆ ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶರೋರ್ವರಿಗೆ ಬೆದರಿಕೆ ಹಾಕಿರುವುದು ಸ್ವತಃ ರಾಜಾ ಎಂದು ನ್ಯಾಯಾಧೀಶರೊಬ್ಬರು ಬಹಿರಂಗಪಡಿಸಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ ಆರ್. ರಘುಪತಿಯವರು ಆಗಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಾಲಕೃಷ್ಣನ್ ಅವರಿಗೆ ಪತ್ರವೊಂದನ್ನು ಬರೆದು, ಸಚಿವರೊಬ್ಬರು ತನಗೆ ಬೆದರಿಕೆ ಹಾಕಿದ್ದನ್ನು ದೂರಿದ್ದರು.
ಸಿಬಿಐಯಿಂದ ತನಿಖೆ ನಡೆಯುತ್ತಿದ್ದ ಶೈಕ್ಷಣಿಕ ಹಗರಣ ಪ್ರಕರಣವೊಂದರಲ್ಲಿ ತನ್ನ ಪರವಾಗಿರಬೇಕೆಂದು ಸಚಿವರೊಬ್ಬರು ವಕೀಲರ ಮೂಲಕ ತನಗೆ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಯಾರನ್ನೂ ಹೆಸರಿಸದೆ ರಘುಪತಿ ಪತ್ರ ಬರೆದಿದ್ದರು.
12-6-2009ರಂದು ಮಧ್ಯಾಹ್ನ ಎರಡು ಗಂಟೆಯ ಭೋಜನ ವಿರಾಮದ ಹೊತ್ತಿನಲ್ಲಿ ನಾನು ಹೈಕೋರ್ಟಿನ ನನ್ನ ಕಚೇರಿಯಲ್ಲಿದ್ದೆ. ಆ ಹೊತ್ತಲ್ಲಿ ನನ್ನ ಕಚೇರಿಯಲ್ಲಿದ್ದ ತಮಿಳುನಾಡು ಬಾರ್ ಕೌನ್ಸಿಲ್ ಅಧ್ಯಕ್ಷ ಚಂದ್ರಮೋಹನ್ ಅವರ ಮೊಬೈಲ್ ಫೋನನ್ನು ನನಗೆ ಕೊಟ್ಟು, 'ಕೇಂದ್ರ ಸಚಿವರೊಬ್ಬರು ಲೈನಿನಲ್ಲಿದ್ದಾರೆ, ನಿಮ್ಮೊಂದಿಗೆ ಅವರಿಗೆ ಮಾತನಾಡಬೇಕಂತೆ' ಎಂದರು. ಆಗ ನಾನು ಚಂದ್ರಮೋಹನ್ ನಡೆಯನ್ನು ವಿರೋಧಿಸಿದ್ದೆ. ಈ ಪ್ರಕರಣ ನನ್ನ ಮುಂದೆ ಬಂದರೆ, ಕಾನೂನಿನ ಪ್ರಕಾರ ಮಾತ್ರ ನಡೆದುಕೊಳ್ಳುವುದಾಗಿ ಹೇಳಿದ್ದೆ ಎಂದು ರಘುಪತಿಯವರು ಸುಪ್ರೀಂ ಕೋರ್ಟ್ ಸಿಜೆಐಗೆ ಲಿಖಿತ ದೂರು ನೀಡಿದ್ದರು.
ವಕೀಲ ಚಂದ್ರಮೋಹನ್ ಅವರು ರಾಜಾಗೆ ಸಂಬಂಧಪಟ್ಟ ಪ್ರಕರಣದಲ್ಲಿ ವಕೀಲರಾಗಿದ್ದರು. ಹಾಗಾಗಿ ರಾಜಾ ಸಂಬಂಧಿಗಳ ಪರ ತೀರ್ಪು ನೀಡಬೇಕು ಎಂದು ನ್ಯಾಯಮೂರ್ತಿಗಳ ಮೇಲೆ ಒತ್ತಡ ಹೇರಲು ಯತ್ನಿಸಿದ್ದರು. ಇದೇ ಕಾರಣದಿಂದ ಚಂದ್ರಮೋಹನ್ ಅವರನ್ನು ಬಾರ್ ಕೌನ್ಸಿಲ್ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಲಾಗಿದೆ.
ನ್ಯಾಯಮೂರ್ತಿಗಳ ಕಚೇರಿಗೆ ಬಂದಿದ್ದ ಚಂದ್ರಮೋಹನ್, ಸಿಬಿಐಯಿಂದ ತನಿಖೆ ನಡೆಯುತ್ತಿರುವ ಶೈಕ್ಷಣಿಕ ಹಗರಣದಲ್ಲಿ ನಕಲಿ ಮಾರ್ಕ್ ಕಾರ್ಡುಗಳನ್ನು ತಯಾರಿಸಿದ ಆರೋಪ ಹೊತ್ತಿರುವ ವೈದ್ಯ ಮತ್ತು ಆತನ ಪುತ್ರ ಕೇಂದ್ರ ಸಚಿವ ರಾಜಾ ಅವರ ಕುಟುಂಬದ ಆಪ್ತರು. ಹಾಗಾಗಿ ಅವರ ಪರವಾಗಿ ತೀರ್ಪು ನೀಡಬೇಕು. ಅವರಿಗೆ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಹೇಳಿದ ನಂತರ ರಾಜಾ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸುವಂತೆ ಒತ್ತಾಯಿಸಿದ್ದರು.
ಈ ಪ್ರಕರಣದಲ್ಲಿ ರಾಜಾ ಹೆಸರು ಅಧಿಕೃತವಾಗಿ ಬಹಿರಂಗವಾಗಿರುವುದು ಹೈಕೋರ್ಟ್ ನ್ಯಾಯಾಧೀಶ ಇಬ್ರಾಹಿಂ ಖಲೀಫುಲ್ಲಾ ಮೂಲಕ. ವಕೀಲ ಚಂದ್ರಮೋಹನ್‌ರವರು ತನ್ನ ಕಕ್ಷಿಗಾರನ ಪರವಾಗಿ ತೀರ್ಪು ನೀಡಲೆಂದು ನ್ಯಾಯಮೂರ್ತಿ ರಘುಪತಿಯವರ ಮೇಲೆ ಒತ್ತಡ ಹೇರಿದ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿದ್ದು, ತಮಿಳುನಾಡು ಬಾರ್ ಕೌನ್ಸಿಲ್ ಅಧ್ಯಕ್ಷರ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ಖಲೀಫುಲ್ಲಾ ನೀಡಿರುವ ತೀರ್ಪಿನಲ್ಲಿ ಹೇಳಿದ್ದಾರೆ. ಅಲ್ಲದೆ ಇದರಲ್ಲಿ ಕೇಂದ್ರದ ಮಾಜಿ ದೂರಸಂಪರ್ಕ ಸಚಿವ ರಾಜಾ ಹೆಸರನ್ನು ಕೂಡ ಉಲ್ಲೇಖಿಸಲಾಗಿದೆ.
ಚಂದ್ರಮೋಹನ್ ಅವರು ಮಾಜಿ ಸಚಿವ ರಾಜಾ ಆಪ್ತ ಎಂದು ಹೇಳಲಾಗಿದೆ. ಶೈಕ್ಷಣಿಕ ಹಗರಣದಲ್ಲಿ ಸಿಕ್ಕಿ ಬಿದ್ದಿದ್ದ ವೈದ್ಯ ಕೃಷ್ಣಮೂರ್ತಿ ಮತ್ತು ಅವರ ಪುತ್ರ ಶ್ರೀಧರ್ ಎಂಬವರಿಗೆ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ನ್ಯಾಯಾಧೀಶ ರಘುಪತಿಯವರ ಮೇಲೆ ಒತ್ತಡ ಹೇರಲಾಗಿತ್ತು.
ಈ ಬೆದರಿಕೆಯನ್ನು ಹಾಕಿರುವುದು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿಯವರ ಡಿಎಂಕೆ ಪಕ್ಷದ ಸಂಸದ ಹಾಗೂ ಕೇಂದ್ರ ಸಚಿವ ರಾಜಾ ಎಂದು ಘಟನೆ ಬೆಳಕಿಗೆ ಬರುತ್ತಿದ್ದಂತೆ ಎಐಎಡಿಎಂಕೆ ವರಿಷ್ಠೆ ಜಯಲಲಿತಾ ಆರೋಪಿಸಿದ್ದನ್ನು ಇದೀಗ ಸ್ಮರಿಸಬಹುದಾಗಿದೆ.