ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಾರಾಣಸಿಯಲ್ಲಿ ಪ್ರಬಲ ಸ್ಫೋಟ; ದೇಶಾದ್ಯಂತ ಕಟ್ಟೆಚ್ಚರ (Ganga River | Varanasi Blast | Bomb Blast | Ganga Arti | Shitla Ghat)
Bookmark and Share Feedback Print
 
ಕಾಶಿ ವಿಶ್ವನಾಥನ ಸನ್ನಿಧಿ ವಾರಾಣಸಿಯ ಶೀತಲಾ ಘಾಟ್‌ನಲ್ಲಿ ಮಂಗಳವಾರ ಸಂಜೆ ಗಂಗಾ ಆರತಿ ನಡೆಯುತ್ತಿದ್ದ ಸಂದರ್ಭ ಪ್ರಬಲ ಸ್ಫೋಟ ಸಂಭವಿಸಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಸಾಯಂಕಾಲ ನಡೆದ ಈ ಸ್ಫೋಟದಿಂದ ಭಯಭೀತರಾದ ಜನರು ಚೆಲ್ಲಾಪಿಲ್ಲಿಯಾದಾಗ ಕಾಲ್ತುಳಿತ ಉಂಟಾಯಿತು,

ಹಾಲಿನ ಡಬ್ಬದೊಳಗೆ ಇಡಲಾಗಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡಿದೆ ಎನ್ನಲಾಗಿದೆ. ಘಟನೆಯಲ್ಲಿ 2 ವರ್ಷ ಪ್ರಾಯದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ ಎಂದು ಆರಂಭಿಕ ವರದಿಗಳು ತಿಳಿಸಿವೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು, ಮುಂಬೈ, ದೆಹಲಿ ಮತ್ತು ಹೈದರಾಬಾದ್‌ಗಳ ಸಹಿತ ದೇಶಾದ್ಯಂತ ಕಟ್ಟೆಚ್ಚರ ಘೋಷಿಸಲಾಗಿದೆ.

ಈ ಮಧ್ಯೆ, ಕಸದ ತೊಟ್ಟಿಯಲ್ಲಿ ಇನ್ನೂ ಸ್ಫೋಟಗೊಳ್ಳದೇ ಇರುವ ಕಚ್ಚಾ ಬಾಂಬ್‌ಗಳು ಪತ್ತೆಯಾಗಿದ್ದು, ಅವುಗಳನ್ನು ನಿಷ್ಕ್ರಿಯಗೊಳಿಸಿರುವ ಪೊಲೀಸರು ದುರಂತ ತಪ್ಪಿಸಿದ್ದಾರೆ.

ಇತ್ತೀಚಿನ ಮಾಹಿತಿಯ ಪ್ರಕಾರ, ಈ ಸ್ಫೋಟ ನಡೆಸಿದ್ದು ತಾನು ಎಂದು ಇಸ್ಲಾಮಿಕ್ ಭಯೋತ್ಪಾದನಾ ಸಂಘಟನೆ ಇಂಡಿಯನ್ ಮುಜಾಹಿದೀನ್ ಹೇಳಿಕೊಂಡಿದೆ.

ಘಟನೆಯಲ್ಲಿ ವಿದೇಶೀಯರೂ ಸಹಿತ 20ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ ಎಂದು ಮೂಲಗಳು ತಿಳಿಸಿವೆ. ವಾರಾಣಸಿಯಲ್ಲಿ 2006ರಲ್ಲಿ ಸಂಕಟಮೋಚನ ಆರತಿ ನಡೆಯುತ್ತಿದ್ದ ವೇಳೆ ಬಾಂಬ್ ಸ್ಫೋಟ ನಡೆದಿತ್ತು ಮತ್ತು ಕೆಲವೆಡೆ ಸ್ಫೋಟಗೊಳ್ಳದ ಬಾಂಬ್‌ಗಳೂ ದೊರೆತಿದ್ದವು. ಇದರಲ್ಲಿ ಪಾಕಿಸ್ತಾನಿ ಮೂಲದ ಇಸ್ಲಾಮಿಕ್ ಉಗ್ರಗಾಮಿಗಳ ಕೈವಾಡ ದೃಢಪಟ್ಟಿತ್ತು.

ವಾರಾಣಸಿಯ ಗಂಗಾ ತಟದಲ್ಲಿರುವ ಶೀತಲಾ ಘಾಟ್ ಬಳಿಯ ದಶಾಶ್ವಮೇಧ ಘಾಟ್‌ನಲ್ಲಿ ಸಾಯಂಕಾಲ ಆರೂವರೆ-ಆರೂಮುಕ್ಕಾಲರ ವೇಳೆಗೆ ಈ ಸ್ಫೋಟ ಸಂಭವಿಸಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತೀ ಮಂಗಳವಾರ ಸಾಯಂಕಾಲ ಇಲ್ಲಿ ಮಹಾ ಆರತಿ ನಡೆಯುತ್ತಿದ್ದು, ಸಾವಿರಾರು ಭಕ್ತಾದಿಗಳು ಪಾಲ್ಗೊಳ್ಳುತ್ತಾರೆ.

ಇದು ಕೋಮು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಪರಿಹಾರ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ