ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಬಿಜೆಪಿಗೆ ಜೆಪಿಸಿ ತನಿಖೆಗೆ ಒತ್ತಾಯಿಸುವ ಅನಿವಾರ್ಯತೆ' (JPC | Advani | Parliament | P.J. Thoma)
Bookmark and Share Feedback Print
 
ಲೋಕಸಭೆಯ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಅವರಿಗೆ 2ಜಿ ಹಗರಣದ ಬಗ್ಗೆ ಮಾತನಾಡುವ ಅವಕಾಶ ನಿರಾಕರಣೆ ಮಾಡಿದ್ದರಿಂದಾಗಿ ಜಂಟಿ ಸದನ ಸಮಿತಿಯಿಂದ (ಜೆಪಿಸಿ) ತನಿಖೆಗೆ ಒಳಪಡಿಸಲು ಬಿಜೆಪಿ ಒತ್ತಾಯಿಸಬೇಕಾದ ಅನಿವಾರ್ಯತೆ ಉಂಟಾಯಿತು ಎಂದು ಭಾರತೀಯ ಜನತಾ ಪಕ್ಷದ ವರಿಷ್ಠ ಎಲ್.ಕೆ. ಆಡ್ವಾಣಿ ತಿಳಿಸಿದರು.

ಸಂಸತ್ತಿನ ಎರಡೂ ಸದನದ ಬಿಜೆಪಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಾರಂಭದಲ್ಲಿ ಈ ವಿಷಯವನ್ನು ಈ ಮಟ್ಟಕ್ಕೆ ಏರಿಸುವ ಇರಾದೆ ನಮಗಿರಲಿಲ್ಲ ಎಂದರು.

ಚಳಿಗಾಲ ಅಧಿವೇಶನದ ಪ್ರಾರಂಭದ ಶೂನ್ಯವೇಳೆಯಲ್ಲಿ ಚರ್ಚೆ ಪ್ರಾರಂಭಿಸಿದ ನಾವು, ಶೂನ್ಯವೇಳೆಯಲ್ಲೇ ಚರ್ಚಿಸುವ ಉದ್ದೇಶವಿತ್ತು. ಹಾಗೂ ಆ ದಿನ ಪ್ರಶ್ನೋತ್ತರ ಸಮಯದಲ್ಲಿ ಲೋಕಸಭೆಯ ಅಧಿವೇಶನ ಉತ್ತಮ ರೀತಿಯಲ್ಲೇ ಸಾಗಿತ್ತು ಎಂದು ಬಿಜೆಪಿ ಸಂಸದೀಯ ಪಕ್ಷದ ಮುಖ್ಯಸ್ಥರಾಗಿರುವ ಆಡ್ವಾಣಿ ನುಡಿದರು.

ಸಂಸತ್ತಿನಲ್ಲಿ ವಿರೋಧ ಪಕ್ಷದ ಯಾವುದೇ ಸದಸ್ಯನಿಗೂ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲು ಅವಕಾಶ ಕೊಡದೇ ಇದ್ದುದರಿಂದ, ಜೆಪಿಸಿ ತನಿಖೆಗೆ ಒತ್ತಾಯಿಸುವ ನಿರ್ಧಾರ ಕೈಗೊಳ್ಳಲಾಯಿತು ಎಂದರು.

ಭ್ರಷ್ಟಾಚಾರದ ಬಗ್ಗೆ ಸುಷ್ಮಾ ಸ್ವರಾಜ್ ದನಿ ಎತ್ತಲು ಪ್ರಾರಂಭಿಸಿದ ಸಂದರ್ಭದಲ್ಲಿ, ಆಡಳಿತ ಮತ್ತು ಮಿತ್ರ ಪಕ್ಷಗಳು ವಿರೋಧಿಸಿದವು. ಮಂತ್ರಿಗಳು ಕೂಡ ಆಕೆಗೆ ಮಾತನಾಡಲು ಅವಕಾಶ ಮಾಡಲಿಲ್ಲ. ಜತೆಗೆ, ಭ್ರಷ್ಟಾಚಾರ ವಿರುದ್ಧ ಮಾತನಾಡಲು ಮುಲಾಯಂ ಸಿಂಗ್ ಯಾದವ್, ವಾಸುದೇವ ಆಚಾರ್ಯ ಮತ್ತು ಗುರುದಾಸ್ ದಾಸ್‌‌‌‌ಗುಪ್ತ ಅವರಿಗೂ ಅವಕಾಶ ಕೊಡಲಿಲ್ಲ. ಚರ್ಚೆಗೆ ಅವಕಾಶ ಕೊಡದಿರುವುದಕ್ಕೇ ಆಡಳಿತ ಪಕ್ಷವು ಹಠ ಹಿಡಿದರೆ, ಜೆಪಿಸಿ ತನಿಖೆಯಾಗಲಿ ಎಂಬ ನಿರ್ಧಾರಕ್ಕೆ ನಾವು ಬಂದೆವು ಎಂಬ ಆಡ್ವಾಣಿ ಹೇಳಿಕೆಯನ್ನು ರಾಜ್ಯಸಭೆಯ ಬಿಜೆಪಿ ಉಪ ನಾಯಕ ಎಸ್.ಎಸ್.ಅಹ್ಲುವಾಲಿಯಾ ಉಲ್ಲೇಖಿಸಿದರು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಹ್ಲುವಾಲಿಯಾ, ರಾಜಕೀಯವಾಗಿ ಮತ್ತು ಸೈದ್ಧಾಂತಿಕವಾಗಿ ವಿರೋಧ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳಿದ್ದರೂ, ಎಲ್ಲಾ ವಿರೋಧ ಪಕ್ಷಗಳೂ ಜೆಪಿಸಿ ತನಿಖೆಗೆ ಒಕ್ಕೊರಳಲ್ಲಿ ಒತ್ತಾಯಿಸುತ್ತಿವೆ ಎಂದರು.

ನಾವು ಕಾಂಗ್ರೆಸ್‌ನ ಹಗರಣಗಳನ್ನು ಬಯಲಿಗೆಳೆದಾಗ, ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸುವ ಬದಲು, ಹಕ್ಕು ಚ್ಯುತಿ ಸಮಿತಿ ಸೇರಿದಂತೆ ಎಲ್ಲವನ್ನೂ ತಮಗೆ ಬೇಕಾದಂತೆ ಅವರು ಬಳಸಿಕೊಂಡರು. ಈಗ ಸಿವಿಸಿ ಆಯುಕ್ತ ಪಿ.ಜೆ.ಥಾಮಸ್ ಅವರ ನೇಮಕಾತಿಯಲ್ಲಾಗಿರುವಂತೆ, ಎಲ್ಲವನ್ನೂ ಮುಚ್ಚಿಹಾಕಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಸಂಸದ ಅಹ್ಲುವಾಲಿಯಾ ಆರೋಪಿಸಿದರು.

ಎಲ್ಲಾ ರಾಜಕೀಯ ಪಕ್ಷಗಳು ಜೆಪಿಸಿಗೆ ಒತ್ತಾಯಿಸುತ್ತಿದೆ. ಮತ್ತು ಜೆಪಿಸಿ ತನಿಖೆಗೆ ಸಮ್ಮತಿಸುವವರೆಗೂ ಸಂಸತ್ ಕಲಾಪಕ್ಕೆ ಸಹಕಾರ ನೀಡುವುದಿಲ್ಲ. 2ಜಿ ಹಗರಣದ ಎಲ್ಲ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳುವಷ್ಟು ಅಧಿಕಾರ ಪಿಎಸಿ (ಸಾರ್ವಜನಿಕ ಲೆಕ್ಕಪತ್ರ ಸಮಿತಿ)ಗೆ ಇಲ್ಲ ಎಂದರು.

ಉದಾಹರಣೆಗೆ, ನೀರಾ ರಾಡಿಯಾ ಟೇಪ್ ಪ್ರಕರಣ. ಸಿಎಜಿ ಸಲ್ಲಿಸಿದ ವರದಿಯಲ್ಲಿ ರಾಡಿಯಾ ಟೇಪ್‌ನ ಉಲ್ಲೇಖವೇ ಇಲ್ಲದಿರುವುದರಿಂದ, ಪಿಎಸಿ ಆ ಟೇಪ್ ಬಗ್ಗೆ ತನಿಖೆ ನಡೆಸಬಹುದೇ ಅಥವಾ ಚರ್ಚಿಸಬಹುದೇ? ಆದರೆ, ಸಿಬಿಐ ಸಲ್ಲಿಸಿರುವ 2ಜಿ ಹಗರಣದ ಅಫಿಡವಿಟ್‌ನಲ್ಲಿ ರಾಡಿಯಾ ಟೇಪ್‌ನ ಉಲ್ಲೇಖ ಇದ್ದು, ಇದರಲ್ಲಿ 5,811 ಸಂಭಾಷಣೆಯ ತುಣುಕುಗಳಿವೆ ಎಂದು ಹೇಳಲಾಗಿದೆ. ಸುಮಾರು 2,000 ಗಂಟೆಗಳ ಈ ಸಂಭಾಷಣೆಯ ತುಣುಕುಗಳಲ್ಲಿ, ಕೇಂದ್ರ ಮಂತ್ರಿಮಂಡಲ ಹೇಗೆ ರೂಪುಗೊಂಡಿತು ಮತ್ತು ಖಾತೆ ಹಂಚಿಕೆ ಹೇಗೆ ನಡೆಯಿತು ಎಂಬ ವಿವರಗಳು ಅಡಕವಾಗಿದೆ ಎಂದರು.

ಪ್ರಧಾನಿಯ ಸಲಹೆಯಂತೆ ಸಚಿವ ಸಂಪುಟವನ್ನು ರಚಿಸಲಾಗುತ್ತದೆ. ಆದರೆ ಪ್ರಧಾನಿಗೆ ಸಲಹೆ ಮಾಡುತ್ತಿದ್ದವರು ಯಾರು? ನೀವು ರಾಡಿಯಾ ಟೇಪ್ ಸಂಭಾಷಣೆಯನ್ನು ಆಲಿಸಿದರೆ, ಯಾರು ದೂರ ಸಂಪರ್ಕ ಇಲಾಖೆಯ ಮಂತ್ರಿಯಾಗಬಹುದು, ಯಾರಿಂದ ಯಾರಿಗೆ ಲಾಭ ಮುಂತಾದ ವಿಚಾರಗಳು ತಿಳಿಯುತ್ತವೆ. ಇಲ್ಲಿ ಲಾಬಿಗಳು ನಡೆಯುತ್ತಿದ್ದು, ಮಂತ್ರಿಮಂಡಲ ರಚನೆಗೆ ನಾವು ಲಾಬಿಗಳಿಗೆ ಅವಕಾಶ ಕಲ್ಪಿಸುತ್ತಿದ್ದೇವೆಯೇ? ಇವೆಲ್ಲದರ ತನಿಖೆ ನಡೆಯಬೇಕಿದೆ. ಅದು ಪ್ರಾಮಾಣಿಕವಾಗಿ ನಡೆಯಬೇಕಿದ್ದರೆ ಜೆಪಿಸಿಯಿಂದ ಹೊರತು, ಪಿಎಸಿಯಿಂದ ಸಾಧ್ಯವಿಲ್ಲ ಎಂದ ಅಹ್ಲುವಾಲಿಯಾ, ಅವಶ್ಯಕತೆ ಬಂದಲ್ಲಿ ಪ್ರಧಾನಿಯೂ ಸೇರಿದಂತೆ ಯಾರನ್ನೂ ವಿಚಾರಣೆಗೆ ಒಳಪಡಿಸುವ ಅವಕಾಶ ಜೆಪಿಸಿಗೆ ಇರುತ್ತದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ