ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಶಿ ಸ್ಫೋಟ; ಹಿಂದೂಯೇತರರಿಗೆ ನಿಷೇಧ ಹೇರಿ: ವಿಎಚ್‌ಪಿ (Varanasi blast | Swastika Sharma | Dasaswamedh Ghat | Praveen Togadia)
Bookmark and Share Feedback Print
 
ಮಂಗಳವಾರ ವಾರಣಾಸಿಯಲ್ಲಿ ನಡೆದ ಉಗ್ರರ ಬಾಂಬ್ ದಾಳಿಗೆ ಓರ್ವ ಬಾಲಕಿ ಬಲಿಯಾಗಿ, 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಪ್ರಕರಣಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ವಿಶ್ವ ಹಿಂದೂ ಪರಿಷತ್, ಪವಿತ್ರ ಕಾಶಿಗೆ ಹಿಂದೂಯೆತರರ ಪ್ರವೇಶವನ್ನು ನಿಷೇಧ ಮಾಡಬೇಕು ಎಂದು ಆಗ್ರಹಿಸಿದೆ.

ನಿನ್ನೆ ವಾರಣಾಸಿಯ ಗಂಗಾ ನದಿ ತಡದಲ್ಲಿನ ದಶಾಶ್ವಮೇಧ ಘಾಟ್ ಸಮೀಪ ಆರತಿ ಆರಂಭವಾದ ಹೊತ್ತಿಗೆ ಸಂಜೆ 6.40ಕ್ಕೆ ಕಚ್ಚಾ ಬಾಂಬೊಂದು ಸ್ಫೋಟಗೊಂಡಿತ್ತು. ಘಟನೆಯಲ್ಲಿ ಸ್ವಸ್ತಿಕಾ ಶರ್ಮಾ ಎಂಬ ಒಂದು ವರ್ಷದ ಹಸುಳೆ ಬಲಿಯಾಗಿದ್ದಳು. ಗಾಯಗೊಂಡವರಲ್ಲಿ ನಾಲ್ವರು ವಿದೇಶೀಯರೂ ಸೇರಿದ್ದಾರೆ.

ವಾರಣಾಸಿಯಲ್ಲಿ ನಡೆದಿರುವ ಸ್ಫೋಟ ಜಿಹಾದಿ ಭಯೋತ್ಪಾದಕರ ಕ್ರೂರ ಕೃತ್ಯ ಎಂದು ಬಣ್ಣಿಸಿರುವ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ, ಪವಿತ್ರ ನಗರ ಕಾಶಿಯನ್ನು ಪಾರಂಪರಿಕ ಸ್ಥಳವೆಂದು ಘೋಷಿಸಬೇಕು ಮತ್ತು ಅಲ್ಲಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಗೊಳಿಸಬೇಕು ಎಂದು ಆಗ್ರಹಿಸಿದರು.

ಪವಿತ್ರ ನಗರ ವಾರಣಾಸಿಯಲ್ಲಿ ಇಂತಹ ಜಿಹಾದಿ ಭಯೋತ್ಪಾದನೆ ನಡೆಯುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ ಸಂಕಟಮೋಚನ ದೇವಸ್ಥಾನದ ಮೇಲೆ ಬಾಂಬ್ ಎಸೆದದ್ದು ಕೂಡ ಮಂಗಳವಾರ. ಈಗ ಗಂಗಾ ಆರತಿ ನಡೆಯುತ್ತಿದ್ದಾಗ ಪವಿತ್ರ ದಿನದಂದು ಮತ್ತೆ ಸ್ಫೋಟ ಸಂಭವಿಸಿದೆ ಎಂದು ತೊಗಾಡಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂ ಭಯೋತ್ಪಾದನೆ ಎಂದು ಹೊಸ ವ್ಯಾಖ್ಯಾನ ಮಾಡುವ ಮೂಲಕ ಹಿಂದೂಗಳನ್ನು ಅವಮಾನಿಸುತ್ತಿರುವ ಸರಕಾರವು ಈಗ ಮುನ್ನುಗ್ಗುವ ಧೈರ್ಯ ಮಾಡಬೇಕು. ಇಲ್ಲಿಗೆ ಸಮೀಪದ ಎಎಲ್ಲಾ ಮಸೀದಿಗಳಿಗೆ ದಾಳಿ ಮಾಡಿ, ಅಲ್ಲಿ ಆಶ್ರಯ ಪಡೆದುಕೊಂಡಿರುವ ಜಿಹಾದಿಗಳನ್ನು ಬಂಧಿಸಬೇಕು ಎಂದರು.

ಹಿಂದೂಗಳು ಪವಿತ್ರ ಸ್ಥಳ ಎಂದು ಹೇಳುವ ಕಾಶಿ ಘಾಟ್‌ಗಳು ಮತ್ತು ಇತರ ಕಡೆಗಳಲ್ಲಿ ಹಿಂದೂಗಳಲ್ಲದವರಿಗೆ ಏನು ಕೆಲಸವಿದೆ? ಹಜ್ ಹೌಸ್‌ಗಳು ಮತ್ತು ಮಸೀದಿಗಳಿಗೆ ಹಿಂದೂಗಳಿಗೆ ಪ್ರವೇಶ ನಿಷಿದ್ಧವಿರುವಾಗ, ದೇವಾಲಯಗಳಲ್ಲಿ ಯಾಕೆ ಇತರ ಧರ್ಮೀಯರನ್ನು ಪ್ರವೇಶಿಸಲು ಅವಕಾಶ ನೀಡಬೇಕು? ಕೇವಲ ಮುಸ್ಲಿಮರನ್ನು ಓಲೈಸಬೇಕೆಂಬ ಕಾರಣಕ್ಕೆ ಸರಕಾರ ಇಂತಹ ನೀತಿಗಳನ್ನು ಅನುಸರಿಸುತ್ತಾ ಅವಕಾಶ ನೀಡುತ್ತಿದೆ ಎಂದು ತೊಗಾಡಿಯಾ ಕಿಡಿ ಕಾರಿದರು.

ಕಾಶಿಯಲ್ಲಿರುವ ಎಲ್ಲಾ ಮದ್ರಸಾಗಳಿಗೆ ಬೀಗ ಜಡಿಯಬೇಕು ಮತ್ತು ಅಲ್ಲಿನ ಮಸೀದಿಗಳನ್ನು ಸಂಪೂರ್ಣವಾಗಿ ತಪಾಸಣೆ ನಡೆಸಬೇಕು. ಕಾಶಿಯನ್ನು ಪಾರಂಪರಿಕ ಸ್ಥಳವೆಂದು ಘೋಷಿಸಿ, ಹಿಂದೂಯೇತರರಿಗೆ ಪ್ರವೇಶ ನಿಷಿದ್ಧಗೊಳಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸುತ್ತದೆ ಎಂದು ತನ್ನ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.

ಸರಕಾರ ಗಂಭೀರವಾಗಿಲ್ಲ: ಬಿಜೆಪಿ
ವಾರಣಾಸಿ ಸ್ಫೋಟವನ್ನು ಖಂಡಿಸಿರುವ ಬಿಜೆಪಿ, ಕೇಂದ್ರ ಗೃಹ ಸಚಿವಾಲಯವು ಭಯೋತ್ಪದನಾ ಚಟುವಟಿಕೆಗಳನ್ನು ಸಾಮಾನ್ಯ ಎಂದು ಪರಿಗಣಿಸುತ್ತಿದೆ, ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಆಪಾದಿಸಿದೆ.

ಪಿ. ಚಿದಂಬರಂ ಈ ದೇಶದ ಅತಿ ಸಾಮಾನ್ಯ ಮತ್ತು ಗೊಂದಕ್ಕೀಡಾಗಿರುವ ಗೃಹಸಚಿವ. ಕಳೆದ ಹಲವು ಸಮಯದಿಂದ ಪ್ರತಿ ಎರಡು ತಿಂಗಳಿಗೊಮ್ಮೆ ಗಂಭೀರ ಭಯೋತ್ಪಾದನಾ ಚಟುವಟಿಕೆಗಳು ಕಂಡು ಬರುತ್ತಿದ್ದರೂ, ಅದನ್ನು ಗೃಹಸಚಿವರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಬಿಜೆಪಿ ಉಪಾಧ್ಯಕ್ಷ ಮುಖ್ತಾರ್ ಅಬ್ಬಾಸ್ ನಖ್ವಿ ಆರೋಪಿಸಿದರು.

ಬಾಬ್ರಿ ಮಸೀದಿ ಧ್ವಂಸಕ್ಕೆ 18 ವರ್ಷ ತುಂಬಿದ ಸಂದರ್ಭದಲ್ಲೂ ಅವರು ಪರಿಸ್ಥಿತಿಯನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಗೃಹಸಚಿವಾಲಯವು ಸಾಮಾನ್ಯ ಸಲಹೆಗಳನ್ನಷ್ಟೇ ಕಳುಹಿಸಿದೆ. ಸಚಿವಾಲಯವು ನಿರ್ದಿಷ್ಟ ಸೂಚನೆಗಳನ್ನು ಸ್ಪಷ್ಟವಾಗಿ ತಿಳಿಸುತ್ತಿದ್ದರೆ ವಾರಣಾಸಿಯಲ್ಲಿ ಇಂತಹ ಘಟನೆ ನಡೆಯುತ್ತಿರಲಿಲ್ಲ ಎಂದರು.

ಇಂಡಿಯನ್ ಮುಜಾಹಿದೀನ್ ಹೊಣೆ...
ಘಟನೆ ನಡೆದ ಬೆನ್ನಿಗೆ ಇಂಡಿಯನ್ ಮುಜಾಹಿದೀನ್ ಹೆಸರಿನಲ್ಲಿ ಮಾಧ್ಯಮ ಕೇಂದ್ರಗಳಿಗೆ ಇ-ಮೇಲ್ ರವಾನೆಯಾಗಿದೆ. ಮುಂಬೈಯ ಪಶ್ಚಿಮ ಮಲಾಡ್‌ನ ಲಿಂಕ್ ರೋಡಿನಿಂದ ಮೇಲ್‌ಗಳನ್ನು ರವಾನಿಸಲಾಗಿದೆ.

ಬಾಬ್ರಿ ಮಸೀದಿ ಧ್ವಂಸಕ್ಕೆ ತೆಗೆದುಕೊಳ್ಳಲಾಗಿರುವ ಪ್ರತೀಕಾರ ಎಂದು ಮುಜಾಹಿದೀನ್ ಹೇಳಿದ್ದು, ಅಯೋಧ್ಯೆ ವಿವಾದದ ಕುರಿತು ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪಿಗೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಮುಂಬೈಯಿಂದ ಬಂದಿರುವ ಇ-ಮೇಲ್‌ಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಘಟನೆ ನಡೆದ ಕೇವಲ 30 ನಿಮಿಷಗಳ ಅಂತರದಲ್ಲಿ ಇ-ಮೇಲ್ ರವಾನೆಯಾಗಿದೆ. ಈ ಹಿಂದೆ ಇಷ್ಟು ತ್ವರಿತವಾಗಿ ಇ-ಮೇಲ್ ಬಂದಿರಲಿಲ್ಲ. ಕಡಿಮೆ ತೀವ್ರತೆಯ ಸ್ಫೋಟ ನಡೆದಿರುವುದರಿಂದ ದುಷ್ಕರ್ಮಿಗಳ ಉದ್ದೇಶ ಹೆಚ್ಚು ಪ್ರಾಣ ಹಾನಿ ಮಾಡುವುದರ ಬದಲಾಗಿ ದ್ವೇಷ ಹುಟ್ಟಿಸುವುದಾಗಿರಬಹುದು ಎಂದು ತನಿಖಾ ದಳಗಳು ಅಂದಾಜಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ