2ಜಿ ತರಂಗಾಂತರ ಹಂಚಿಕೆ ಆರೋಪ ಎದುರಿಸುತ್ತಿರುವ ದೂರಸಂಪರ್ಕ ಖಾತೆ ಮಾಜಿ ಸಚಿವ ಎ. ರಾಜಾ ಅವರ ದೆಹಲಿ ಮತ್ತು ಚೆನ್ನೈ ನಿವಾಸಗಳು ಹಾಗೂ ದೂರಸಂಪರ್ಕ ಇಲಾಖೆಯ ನಾಲ್ಕು ಅಧಿಕಾರಿಗಳ ಮನೆಗಳಿಗೆ ಬುಧವಾರ ಬೆಳಿಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇದರೊಂದಿಗೆ ರಾಜಾ ಕತ್ತು ಕುಣಿಕೆಯಲ್ಲಿ ನಿಧಾನವಾಗಿ ಬಿಗಿಯಾಗುತ್ತಿರುವ ಮುನ್ಸೂಚನೆಗಳು ಲಭಿಸಿವೆ.
ರಾಜಾ ಅವರ ಆಪ್ತ ಕಾರ್ಯದರ್ಶಿ ಆರ್.ಕೆ. ಚಂಡೋಲಿಯಾ ಮನೆ ಮೇಲೂ ದಾಳಿ ನಡೆಸಲಾಗಿದೆ. 2ಜಿ ಹಗರಣದ 22,000 ಕೋಟಿ ರೂಪಾಯಿ ಅವ್ಯವಹಾರದಲ್ಲಿ ಚಂಡೋಲಿಯಾ ಹೆಸರು ಕೇಳಿ ಬಂದಿತ್ತು.
ರಾಜಾ ಅವರ ಚೆನ್ನೈ ಮತ್ತು ದೆಹಲಿ ನಿವಾಸಗಳಿಗೆ ಬೆಳ್ಳಂಬೆಳಗ್ಗೆಯೇ ಸಿಬಿಐ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ತಮಿಳುನಾಡಿನಲ್ಲಿನ ಅವರ ಸಹೋದರ ಮತ್ತು ಅತ್ತೆಯ ಮನೆಗಳಿಗೂ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಸಿಬಿಐ ಮೂಲಗಳು ಹೇಳಿವೆ.
ಕೇಂದ್ರ ದೂರಸಂಪರ್ಕ ಸಚಿವರಾಗಿದ್ದ ಡಿಎಂಕೆ ಸಂಸದ ಎ. ರಾಜಾ, 2008ರಲ್ಲಿ 2ಜಿ ತರಂಗಾಂತರ ಹಂಚಿಕೆಯನ್ನು ಹರಾಜು ಹಾಕದೆ ಮನಬಂದಂತೆ ಲಂಚ ಪಡೆದುಕೊಂಡು ವಿತರಿಸಿದ ಪರಿಣಾಮ ಸರಕಾರದ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರೂಪಾಯಿ ನಷ್ಟ ಉಂಟಾಗಿತ್ತು. ಸಿಎಜಿ ವರದಿಯಲ್ಲಿ ಇದು ಬಹಿರಂಗಗೊಂಡ ನಂತರ ಅವರು ರಾಜೀನಾಮೆ ನೀಡಿದ್ದರು.
ದೂರಸಂಪರ್ಕ ಇಲಾಖೆಯ ಮಾಜಿ ಕಾರ್ಯದರ್ಶಿ ಸಿದ್ಧಾರ್ಥ್ ಬೆಹೂರಾ, ಚಂಡೋಲಿಯಾ, ದೂರಸಂಪರ್ಕ ಆಯೋಗದ ಸದಸ್ಯ ಕೆ. ಶ್ರೀಧರ್, ದೂರಸಂಪರ್ಕ ಇಲಾಖೆಯ ಉಪ ಮಹಾನಿರ್ದೇಶಕ ಎ.ಕೆ. ಶ್ರೀವಾತ್ಸವ ಅವರ ಮನೆಗಳಿಗೆ ದಾಳಿ ನಡೆಸಲಾಗಿದೆ ಎಂದು ಸಿಬಿಐ ಹೇಳಿದೆ.
ನಾನು ಯಾವುದೇ ತಪ್ಪು ಮಾಡಿಲ್ಲ. ಸಿಬಿಐ ವಿಚಾರಣೆಗೆ ಸಿದ್ಧನಿದ್ದೇನೆ. ನಿಯಮಾವಳಿಗಳ ಪ್ರಕಾರ ನಡೆದುಕೊಂಡಿರುವ ನನಗೆ ಯಾವುದೇ ಭಯವಿಲ್ಲ ಎಂದು ಈ ನಡುವೆ ರಾಜಾ ಪ್ರತಿಕ್ರಿಯೆ ನೀಡಿದ್ದಾರೆ.
ಸಿಬಿಐ ದಾಳಿಯನ್ನು ಸ್ವಾಗತಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿಯವರ ಡಿಎಂಕೆ, ಯಾವುದೇ ತನಿಖೆಗೆ ಸಹಕರಿಸಲು ನಾವು ಸಿದ್ಧರಿದ್ದೇವೆ ಎಂದಿದೆ.