ಕರ್ಕರೆ, ಕಾಮ್ಟೆ, ಸಾಲಸ್ಕರ್‌ರನ್ನು ನಾನು ಕೊಂದಿಲ್ಲ: ಕಸಬ್
ಮುಂಬೈ, ಬುಧವಾರ, 8 ಡಿಸೆಂಬರ್ 2010( 17:47 IST )
ಮುಂಬೈ ದಾಳಿಯ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳಾದ ಹೇಮಂತ್ ಕರ್ಕರೆ, ಅಶೋಕ್ ಕಾಮ್ಟೆ ಮತ್ತು ವಿಜಯ್ ಸಾಲಸ್ಕರ್ ಅವರನ್ನು ನಾನು ಹತ್ಯೆ ಮಾಡಿಲ್ಲ ಎಂದಿರುವ ಪಾಕಿಸ್ತಾನಿ ಭಯೋತ್ಪಾದಕ ಅಜ್ಮಲ್ ಕಸಬ್, ಈ ಸಂಬಂಧ ಹುತಾತ್ಮ ಅಧಿಕಾರಿಗಳ ಚಟುವಟಿಕೆಗಳ ಕುರಿತು ನಿಸ್ತಂತು ಸಂದೇಶಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಬೇಕು ಎಂದು ಬಾಂಬೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾನೆ.
ದಾಳಿಯ ಸಂದರ್ಭದಲ್ಲಿ ಎಟಿಎಸ್ ಮುಖ್ಯಸ್ಥ ಕರ್ಕರೆ ಪೊಲೀಸ್ ನಿಯಂತ್ರಣ ಕಛೇರಿಯೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ಉಗ್ರರು ಕಾಮಾ ಹಾಸ್ಪಿಟಲ್ ಮೇಲೆ ದಾಳಿ ನಡೆಸಿದ್ದಾರೆ ಎಂಬ ಮಾಹಿತಿಯನ್ನು ರವಾನಿಸಿರುವ ಕುರಿತು ಫಿರ್ಯಾದುದಾರರು ಸಾಕ್ಷಿ ನೀಡಿದ್ದಾರೆ ಎಂದು ಕಸಬ್ ಪರ ವಕೀಲ ಅಮಿನ್ ಸೋಲ್ಕರ್ ತಿಳಿಸಿದ್ದಾರೆ.
ಕಾಮಾ ಆಸ್ಪತ್ರೆಗೆ ಹತ್ತಿರದ ಮಾರ್ಗವಿದ್ದರೂ, ಕರ್ಕರೆ ಮತ್ತಿತರರು ಸುತ್ತು ಬಳಸಿ ದೂರದ ಮಾರ್ಗದಿಂದಲೇ ಯಾಕೆ ಬಂದರು ಎಂದು ಅವರು ಪ್ರಶ್ನಿಸಿದರು.
ಕರ್ಕರೆ ಮತ್ತಿತರರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಾ ಮುಂದುವರಿಯುತ್ತಿದ್ದಾಗ, ಅದೇ ದಿಕ್ಕಿನಿಂದ ಎರಡು ಉಗ್ರರು ಕಾರಿನ ಮರೆಯಲ್ಲಿ ನಿಂತು ಗುಂಡು ಹಾರಾಟದಲ್ಲಿ ತೊಡಗಿದ್ದಾರೆ ಎಂದು ನಿಯಂತ್ರಣಾ ಕೊಠಡಿ ನಿರ್ದೇಶನ ನೀಡಿದ್ದರೂ, ಅದೇ ದಿಕ್ಕಿನೆಡೆಗೆ ಏಕೆ ಹೋಗಬೇಕಿತ್ತು ಎಂದು ಪ್ರಶ್ನೆ ಹಾಕಿದರು.
ಇವೆಲ್ಲ ಪ್ರಶ್ನೆಗಳಿಗೆ ಸೂಕ್ತ ಉತ್ತರ ದೊರೆಯುವ ಅಗತ್ಯವಿದ್ದು, ಅದಕ್ಕಾಗಿ ನಿಸ್ತಂತು ಸಂದೇಶ ದಾಖಲೆಗಳು ಮತ್ತು ವಿಚಾರಣಾ ನ್ಯಾಯಾಲಯಕ್ಕೆ ಒಪ್ಪಿಸದ ಕರ್ಕರೆಯವರ ಮೊಬೈಲ್ ಕರೆ ದಾಖಲೆಗಳ ಫ್ರಿಂಟ್ ಔಟ್‌ಗಳನ್ನು ಪರಿಶೀಲನೆ ನಡೆಸಬೇಕಿದೆ ಎಂದು ಸೋಲ್ಕರ್ ವಾದಿಸಿದರು.
166 ಮಂದಿ ಅಮಾಯಕರ ಸಾವಿಗೆ ಕಾರಣವಾದ ಮುಂಬೈ ದಾಳಿಯಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿರುವ ಕಸಬ್‌ಗೆ ವಿಚಾರಣಾ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿತ್ತು. ಇದನ್ನು ಖಚಿತಪಡಿಸುವ ವಿಚಾರಣೆ ಪ್ರಸಕ್ತ ಬಾಂಬೆ ಹೈಕೋರ್ಟಿನಲ್ಲಿ ನಡೆಯುತ್ತಿದೆ.
ಕಾಮಾ ಹಾಸ್ಪಿಟಲ್ ಮತ್ತು ಅದರ ಸಮೀಪ ಕಸಬ್ ಇದ್ದ ಎಂಬ ವಾದವನ್ನು ಸೋಲ್ಕರ್ ಸಹಾಯಕ ವಕೀಲರಾದ ಫರ್ಹಾನಾ ಶಾ ಮತ್ತು ಸಂತೋಷ್ ದೇಶಪಾಂಡೆ ತಳ್ಳಿ ಹಾಕಿದ್ದಾರೆ.