ವಿದೇಶಿಗರು ಬಂದರೆ ಅವರನ್ನು ಉನ್ನತರೆಂದೇ ಭಾವಿಸಿ ಸತ್ಕರಿಸುವುದು ಮತ್ತು ಅವರದ್ದೇ ನಡೆಗಳನ್ನು ಅನುಸರಿಸಲು ಅವಕಾಶ ನೀಡುವುದು ಭಾರತೀಯರ ಉದಾರ ಗುಣವೋ ಅಥವಾ ದುರ್ಬಲತೆಯೋ ಗೊತ್ತಿಲ್ಲ. ಆದರೆ ಭಾರತೀಯರಿಗಂತೂ ವಿದೇಶಗಳಲ್ಲಿ ಹೆಜ್ಜೆ-ಹೆಜ್ಜೆಗೂ ಅವಮಾನವಾಗುತ್ತಿರುವುದಂತೂ ನಿಜ. ಅದರಲ್ಲೂ ಅಮೆರಿಕಾದಲ್ಲಂತೂ ಭಾರತೀಯರೆಂದರೆ ಎರಡನೇ ದರ್ಜೆಯವರು.
ಈ ಬಾರಿ ಇಂತಹ ಅಪಮಾನಕ್ಕೊಳಗಾಗಿರುವುದು ಅಮೆರಿಕಾದಲ್ಲಿನ ಭಾರತದ ರಾಯಭಾರಿ ಮೀರಾ ಶಂಕರ್. ಸೀರೆ ಉಟ್ಟಿದ್ದರೆಂಬ ಕಾರಣಕ್ಕೆ ಅವರನ್ನು ವಿಮಾನ ನಿಲ್ದಾಣದಲ್ಲಿ ಸುರಕ್ಷತೆಯ ಹೆಸರಿನಲ್ಲಿ ಬಹಿರಂಗವಾಗಿ ತೀವ್ರ ತಪಾಸಣೆಗೊಳಪಡಿಸಿ ಮುಜುಗರ ಸೃಷ್ಟಿಸಲಾಗಿದೆ.
ಇದು ನಡೆದಿರುವುದು ಮಿಸಿಸಿಪ್ಪಿ ರಾಜ್ಯದ ಜಾಕ್ಸನ್-ಎವರ್ಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ. ತಾನು ರಾಯಭಾರಿ ಎಂದು ಹೇಳಿದರೂ ಅಮೆರಿಕಾದ ಭದ್ರತಾ ಸಿಬ್ಬಂದಿಗಳು ತೀವ್ರ ತಪಾಸಣೆಗೊಳಪಡಿಸಿದ್ದಾರೆ.
ಡಿಸೆಂಬರ್ ನಾಲ್ಕರಂದು ಮಿಸಿಸಿಪ್ಪಿ ರಾಜ್ಯ ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಬಾಲ್ಟಿಮೋರ್ ವಿಮಾನ ಏರಲು ಅವರು ನಿಲ್ದಾಣಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಮೀರಾ ಅವರು ಸೀರೆ ಉಟ್ಟುಕೊಂಡು ಬಂದಿದ್ದರು.
ತಾನು ಅಮೆರಿಕಾದಲ್ಲಿನ ಭಾರತ ರಾಯಭಾರಿ ಎಂಬುದನ್ನು ಸಾಬೀತುಪಡಿಸುವ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿದ ಹೊರತಾಗಿಯೂ, ಮಿಸಿಸಿಪ್ಪಿ ಅಭಿವೃದ್ಧಿ ಪ್ರಾಧಿಕಾರದ ಭದ್ರತಾ ಸಿಬ್ಬಂದಿಗಳು ಸುತ್ತುವರಿದು, ಎಲ್ಲರಿಗೆ ಕಾಣುವಂತೆ ಮೀರಾ ಅವರನ್ನು ಮುಟ್ಟಿ ಪರಿಶೀಲನೆ ನಡೆಸಿದರು.
ಮೀರಾ ಅವರನ್ನು ಗಣ್ಯರ ವಿಶ್ರಾಂತಿ ಕೊಠಡಿಗೆ ಕರೆದುಕೊಂಡು ಹೋದ ಅಧಿಕಾರಿಗಳು, ಅಲ್ಲಿ ಮಹಿಳಾ ಅಧಿಕಾರಿಯೊಬ್ಬರಿಂದ ದೈಹಿಕ ತಪಾಸಣೆ ನಡೆಸಿದರು. ಆದರೆ ಇದು ಎಲ್ಲರಿಗೂ ಕಾಣುವಂತಿತ್ತು ಎಂದು ವರದಿಗಳು ಹೇಳಿವೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಮೀರಾ ಅವರು ಸೀರೆ ಧರಿಸಿದ್ದನ್ನೇ ಪ್ರಮುಖವಾಗಿಟ್ಟುಕೊಂಡು ಈ ರೀತಿ ನಡೆದುಕೊಳ್ಳಲಾಗಿದೆ. ಇಡೀ ದೇಹವನ್ನು ಮುಚ್ಚಿಕೊಳ್ಳುವ ಸೀರೆ ಧರಿಸಿದ್ದರಿಂದ ತೀವ್ರ ತಪಾಸಣೆ ಮಾಡಲಾಗಿದೆ. ಆ ಮೂಲಕ ಭಾರತೀಯರಿಗೆ ಅಪಮಾನ ಮಾಡಲಾಗಿದೆ.
"ಮೀರಾ ಅವರು ನಮ್ಮ ವಿಶ್ವವಿದ್ಯಾಲಯಕ್ಕೆ ಮುಖ್ಯ ಅತಿಥಿಯಾಗಿ ಭಾಷಣ ಮಾಡಲು ಬಂದಿದ್ದರು. ನಿಜಕ್ಕೂ ಆ ಕಾರ್ಯಕ್ರಮ ಅದ್ಭುತವಾಗಿತ್ತು. ಆದರೆ ಅದೊಂದು ಮೂರ್ಖತನದ ಘಟನೆ ಎಲ್ಲವನ್ನೂ ಕೆಡಿಸಿತು. 'ಇನ್ಯಾವತ್ತೂ ಇಲ್ಲಿಗೆ ನಾನು ಬರಲಾರೆ' ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಈಗ ನಾವು ಅವರಿಗೆ ಕ್ಷಮಾಪಣೆ ಪತ್ರವನ್ನು ಕಳುಹಿಸುತ್ತಿದ್ದೇವೆ" ಎಂದು ಯುನಿವರ್ಸಿಟಿಯ ಮುಖ್ಯಸ್ಥೆ ಜನೋಸ್ ರದ್ವಾನ್ವಿ ತಿಳಿಸಿದ್ದಾರೆ.