2ಜಿ ಹಗರಣದಲ್ಲಿ ದೂರಸಂಪರ್ಕ ಖಾತೆ ಮಾಜಿ ಸಚಿವ ಎ. ರಾಜಾ ವಿರುದ್ಧದ ಆರೋಪ ಸಾಬೀತಾದರೆ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಡಿಎಂಕೆ ವರಿಷ್ಠ, ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ತಿಳಿಸಿದ್ದಾರೆ.
'ರಾಜಾ ಯಾವುದೇ ಅಕ್ರಮ ಎಸಗಿಲ್ಲ ಎಂಬ ವಿಶ್ವಾಸ ನಮಗಿದೆ. ಅಕ್ರಮ ಸಾಬೀತಾಗದ ಹೊರತು ಅವರ ಕೈಬಿಡುವ ಕುರಿತು ನಾವು ಯೋಚಿಸಿಲ್ಲ. ಈ ಕುರಿತು ಹೆಚ್ಚು ಮಾತನಾಡಲು ಬಯಸುವುದಿಲ್ಲ' ಎಂದರು.
ರಾಜಾ ಅವರ ಚೆನ್ನೈ ಮತ್ತು ದೆಹಲಿ ನಿವಾಸಗಳ ಮೇಲೆ ಸಿಬಿಐ ದಾಳಿ ನಡೆಸಿ ಪರಿಶೀಲನೆ ನಡೆಸಿರುವುದರ ಕುರಿತು ಪ್ರಶ್ನಿಸಿದಾಗ, 'ಸಿಬಿಐ ದಾಳಿ ನಡೆಸಿ ಪರಿಶೀಲನೆ ನಡೆಸುವುದನ್ನು ಇಷ್ಟೊಂದು ದೊಡ್ಡದು ಮಾಡುವ ಅಗತ್ಯವಿದೆಯೇ' ಎಂದು ಮರು ಪ್ರಶ್ನೆ ಹಾಕಿದರು.
ಸಿಬಿಐ ದಾಳಿ ಅಪಮಾನ ಎಂದೆನಿಸಿಲ್ಲವೇ ಎಂದಾಗಲೂ ಇದೇ ರೀತಿಯ ಪ್ರತಿಕ್ರಿಯೆ ಕರುಣಾನಿಧಿಯಿಂದ ಬಂದಿದೆ. 'ನಾನು ಹಾಗೆಂದು ಭಾವಿಸಿಲ್ಲ. ಈ ರಾಷ್ಟ್ರದಲ್ಲಿ ಅವಮಾನದಲ್ಲೇ ಮುಳುಗಿ ಹೋದವರು ಕೆಲವರಿದ್ದಾರೆ' ಎಂದರು.
ಕಾಂಗ್ರೆಸ್‌ನ್ನು ಡಿಎಂಕೆ ಬ್ಲ್ಯಾಕ್‌ಮೇಲ್ ಮಾಡುತ್ತಿದೆ, ಸಿಬಿಐ ತನಿಖಾ ವ್ಯಾಪ್ತಿಯನ್ನು ವಿಸ್ತರಿಸಬೇಕು ಎಂಬ ಎಐಎಡಿಎಂಕೆ ನಾಯಕಿ ಜಯಲಲಿತಾ ಆರೋಪಕ್ಕೆ ಮುಖ್ಯಮಂತ್ರಿ ಖಾರವಾಗಿ ಪ್ರತಿಕ್ರಿಯಿಸಿದರು.
ಜಯಾ 'ಬ್ಲ್ಯಾಕ್‌ಮೇಲ್ ಕಲೆ'ಯಲ್ಲಿ ಪಳಗಿದವರು. ಸಿಬಿಐ ತನಿಖಾ ವ್ಯಾಪ್ತಿಯನ್ನು ವಿಸ್ತರಿಸಿ, ಅವರನ್ನು ತನಿಖೆಗೊಳಪಡಿಸಿದರೆ
ಇನ್ನೂ ಹೆಚ್ಚು ವಿಷಯಗಳು ಹೊರ ಬೀಳುತ್ತದೆ. ಈಗಾಗಲೇ ಸಾಕಷ್ಟು ಹೊರ ಬಿದ್ದಿದೆ ಎಂದರು.