ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಮಕೃಷ್ಣ ಹೆಗಡೆ ಮಹಾನ್ ಮೋಸಗಾರ: ಸುಬ್ರಮಣ್ಯನ್ ಸ್ವಾಮಿ (Janata Dal | Ramakrishna Hegde | Jayalalitha | Subramanian Swamy)
Bookmark and Share Feedback Print
 
ರಾಮಕೃಷ್ಣ ಹೆಗಡೆಯವರದ್ದು ಮೇಲೊಂದು ಮುಖ, ಒಳಗೊಂದು ಮುಖ. ವಾಸ್ತವದಲ್ಲಿ ಅವರಷ್ಟು ಮೋಸಗಾರ ಬೇರೊಬ್ಬರಿಲ್ಲ -- ಆದರ್ಶ, ಸಜ್ಜನ ರಾಜಕಾರಣಿ ಎಂದು ಬಹುತೇಕರಿಂದ ಈಗಲೂ ಶ್ಲಾಘಿಸಲ್ಪಡುತ್ತಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಗಡೆಯವರನ್ನು ಜನತಾ ಪಕ್ಷದ ಸುಬ್ರಮಣ್ಯನ್ ಸ್ವಾಮಿ ತೆಗಳಿರುವ ರೀತಿಯಿದು.
PR

ಜನತಾದಳ ನಾಯಕ ರಾಮಕೃಷ್ಣ ಹೆಗಡೆ ಮತ್ತು ಎಐಎಡಿಎಂಕೆ ನಾಯಕಿ ಜಯಲಲಿತಾ ಮುಂತಾದವರ ಜತೆಗೇ ಇದ್ದುಕೊಂಡು, ಅವರ ವಿರುದ್ಧ ಮಸಲತ್ತು ನಡೆಸಿದಂತೆ ಈ ಬಾರಿ ನೀವು 2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿಯೂ ನಡೆದುಕೊಂಡಿರುವಂತಿದೆ ಎಂದು ಮಾಧ್ಯಮವೊಂದು ಸ್ವಾಮಿಯವರನ್ನು ಪ್ರಶ್ನಿಸಿದಾಗ ಅವರು ಮೇಲಿನಂತೆ ಉತ್ತರಿಸಿದರು.

ಇದೊಂದು ಗಂಭೀರ ವಿಚಾರ. ಇತರ ವಿಷಯಗಳಿಗೆ ಅದರದ್ದೇ ಆದ ಕಾರಣಗಳಿದ್ದವು. ರಾಮಕೃಷ್ಣ ಹೆಗಡೆಯವರು ನನ್ನ ಪಕ್ಷದ (ಜನತಾ ಪಕ್ಷ) ಸದಸ್ಯರಾಗಿದ್ದಾಗ, ತಾನು ಪ್ರಾಮಾಣಿಕ ಮತ್ತು ನೇರ ಮನುಷ್ಯ ಎಂಬ ಛಾಪು ಮೂಡಿಸಿದ್ದರು. ಆದರೆ ಇದು ಸೋಗು ಮಾತ್ರ. ಅವರು ದೊಡ್ಡ ಮೋಸಗಾರ. ಎಲ್ಲಾ ರೀತಿಯ ಅಕ್ರಮಗಳನ್ನು ಎಸಗಿದ್ದರು ಎಂದು ಆರೋಪಿಸಿದ್ದಾರೆ.

ರಾಮಕೃಷ್ಣ ಹೆಗಡೆಯವರು ಎಲ್ಲಿಯವರೆಗೆ ಕೆಟ್ಟು ಹೋಗಿದ್ದರೆಂದರೆ, ತನ್ನ ಗರ್ಲ್ ಫ್ರೆಂಡ್‌ಗಳು ಸೇರಿದಂತೆ ತೀರಾ ಆಪ್ತರ ದೂರವಾಣಿಗಳನ್ನು ಕೂಡ ಕದ್ದಾಲಿಕೆ ಮಾಡುತ್ತಿದ್ದರು. ನೈತಿಕತೆಯ ಸೋಗು ಹಾಕಿಕೊಂಡಿದ್ದ ಇಂತಹ ಮನುಷ್ಯನ ಬಣ್ಣ ಬಯಲಾಗಬೇಕಿತ್ತು. ಅದೇ ಹೊತ್ತಿಗೆ ನಮ್ಮದೇ ಪಕ್ಷವು 1998ರಲ್ಲಿ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ತನಿಖೆ ನಡೆಸಲು ಮುಂದಾಯಿತು. ಆಗಲೂ ತಾನಿದರಲ್ಲಿ ಸಿಕ್ಕಿ ಬೀಳಲಾರೆ ಎಂದುಕೊಂಡಿದ್ದ ಹೆಗಡೆ, ತನಿಖೆ ನಿರ್ಧಾರವನ್ನು ಬೆಂಬಲಿಸಿದ್ದರು ಎಂದು ಸ್ವಾಮಿ ಹಿಂದಿನ ನೆನಪುಗಳನ್ನು ಕೆದಕಿದರು.

ಆದರೆ ನಮ್ಮ ತನಿಖೆಯಲ್ಲಿ ಸ್ವತಃ ಹೆಗಡೆಯವರು ಸಿಕ್ಕಿ ಬಿದ್ದರು. ಅವರು ದೂರವಾಣಿ ಕದ್ದಾಲಿಕೆ ಮಾಡಿದ್ದು ಖಚಿತವಾಗಿತ್ತು. ಇದೇ ವಿಚಾರದಲ್ಲಿ ನನ್ನ ಮೇಲೆ ಮಾನಹಾನಿ ಪ್ರಕರಣ ದಾಖಲಿಸಿದರು. ಮತ್ತೆ ಹಿಂದಕ್ಕೂ ಪಡೆದರು. ಇದೇ ಪ್ರಕರಣ ಹೆಗಡೆಯವರು ರಾಜಕೀಯದಲ್ಲಿ ಮೂಲೆಗುಂಪಾಗಲು ಕಾರಣವಾಯಿತು ಎಂದು ತಿಳಿಸಿದ್ದಾರೆ.

ಜತೆಗೆ ಜಯಲಲಿತಾ ಪ್ರಕರಣವನ್ನೂ ಸುಬ್ರಮಣ್ಯನ್ ಸ್ವಾಮಿ ವಿವರಿಸಿದ್ದಾರೆ.

ಆಕೆ ಮುಖ್ಯಮಂತ್ರಿಯಾಗಲು ನಾನು ಚುನಾವಣೆಯಲ್ಲಿ ಸಾಕಷ್ಟು ಸಹಕಾರ ನೀಡಿದ್ದೆ. ಎಲ್‌ಟಿಟಿಇ ಜತೆ ಆಪ್ತ ಸಂಬಂಧ ಹೊಂದಿದ ಕಾರಣಕ್ಕೆ ವಜಾಗೊಂಡ ಡಿಎಂಕೆ ಸರಕಾರವು ಆಕೆಗೆ ಸೂಕ್ತ ಭದ್ರತೆ ಒದಗಿಸದೇ ಇದ್ದಾಗಲೂ ನೆರವಾಗಿದ್ದವನು ನಾನು. ಆದರೆ ಆಕೆ ಚುನಾವಣೆಯಲ್ಲಿ ಗೆದ್ದ ನಂತರ ಡಿಎಂಕೆ ಮಾಡುತ್ತಿದ್ದ ಎಲ್ಲಾ ರೀತಿಯ ದುಷ್ಟ ಕಾರ್ಯಗಳನ್ನು ಮಾಡಿದರು.

ಆದರೆ ಇದನ್ನು ಪ್ರಶ್ನಿಸುವಂತಿರಲಿಲ್ಲ. ನಾನು ಪ್ರಶ್ನಿಸಿದಾಗ ನನ್ನ ಮೇಲೆ ಭಾರೀ ಕೋಪ ಮಾಡಿಕೊಂಡರು. ಇದೇ ಕಾರಣದಿಂದ ನನ್ನ ವಿರುದ್ಧ ಷಡ್ಯಂತ್ರಗಳನ್ನು ಮಾಡಲು ಜಯಲಲಿತಾ ಮುಂದಾದರು. ನಿಮಗೆ ತಕ್ಕ ಪಾಠ ಕಲಿಸದೆ ಬಿಡುವುದಿಲ್ಲ ಎಂದ ನಾನು, ತಮಿಳುನಾಡನ್ನೇ ನೆಲೆಯನ್ನಾಗಿ ಮಾಡಿಕೊಂಡು ಆಕೆಯನ್ನು ಅಧಿಕಾರದಿಂದ ಕೆಳಕ್ಕಿಳಿಸಿದೆ ಎಂದು ಸ್ವಾಮಿ ಬೆನ್ನು ತಟ್ಟಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ