ಆದರ್ಶ ಹೌಸಿಂಗ್ ಹಗರಣದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿಯವರು ಬೇನಾಮಿ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿದ್ದ ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಾಗಿದ್ದು, ಬಾಯಿಬಡುಕ ವಕ್ತಾರ ಎಂದೇ ಖ್ಯಾತರಾಗಿರುವ ತಿವಾರಿ ಸಂಕಟಕ್ಕೆ ಸಿಲುಕಿದ್ದಾರೆ.
ತಿವಾರಿ ತಪ್ಪಿತಸ್ಥ ಎಂದು ಸಾಬೀತಾದರೆ ಎರಡು ವರ್ಷಗಳವರೆಗಿನ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಮುಂಬೈಯ ಕೊಲಾಬದಲ್ಲಿನ ಆದರ್ಶ್ ಹೌಸಿಂಗ್ ಸೊಸೈಟಿ ಹಗರಣದಲ್ಲಿ ಗಡ್ಕರಿಯವರ ಪಾಲು ಕೂಡ ಇದೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಹಾಗೂ ಉದ್ಯಮಿ ಅಜಯ್ ಸಂಚೇಟಿಯವರ ಚಾಲಕನ ಹೆಸರಿನಲ್ಲಿ ಗಡ್ಕರಿಯವರು ಬೇನಾಮಿ ನಿವೇಶನ ಹೊಂದಿದ್ದಾರೆ ಎಂದು ತಿವಾರಿ ಕೆಲ ದಿನಗಳ ಹಿಂದೆ ಆರೋಪಿಸಿದ್ದರು.
ತಿವಾರಿ ವಿರುದ್ಧ ಗಡ್ಕರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಗುರುವಾರ ಮೊಕದ್ದಮೆ ಹೂಡಿದ್ದಾರೆ. ಈ ಪ್ರಕರಣ ಜನವರಿ 24ರಂದು ವಿಚಾರಣೆಗೆ ಬರುವ ಸಾಧ್ಯತೆಗಳಿವೆ.
ತಿವಾರಿಯವರು ಉದ್ದೇಶಪೂರ್ವಕವಾಗಿ, ಸುಳ್ಳೆಂದು ಗೊತ್ತಿದ್ದರೂ ನನ್ನ ವಿರುದ್ಧ ಅಪಮಾನಕಾರಿಯಾದ ಆರೋಪಗಳನ್ನು ಮಾಡಿದ್ದಾರೆ. ನಾನು ಅಥವಾ ನನ್ನ ಯಾವುದೇ ಆಪ್ತರು ಸ್ವಂತ ಅಥವಾ ಬೇನಾಮಿ ಹೆಸರಿನಲ್ಲಿ ಆದರ್ಶದಲ್ಲಿ ಫ್ಲ್ಯಾಟ್ ಹೊಂದಿಲ್ಲ. ಅವರು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನನ್ನ ಘನತೆಯನ್ನು ಮಣ್ಣುಪಾಲು ಮಾಡುವ ಉದ್ದೇಶದಿಂದ ಇಂತಹ ತಲೆಬುಡವಿಲ್ಲದ ಹೇಳಿಕೆ ನೀಡಿದ್ದಾರೆ ಎಂದು ಗಡ್ಕರಿ ತನ್ನ ಅರ್ಜಿಯಲ್ಲಿ ತಿಳಿಸಿದ್ದಾರೆ.
ಆರೋಪಗಳನ್ನು ನಿರಾಕರಿಸಿದ್ದ ಗಡ್ಕರಿಯವರು, 72 ಗಂಟೆಗಳೊಳಗೆ ಬೇಷರತ್ ಕ್ಷಮೆ ಯಾಚಿಸುವಂತೆ ಕಾಂಗ್ರೆಸ್ ನಾಯಕನಿಗೆ ನವೆಂಬರ್ 11ರಂದು ಸೂಚಿಸಿದ್ದರು. ಆದರೆ ತಿವಾರಿ ನಿರಾಕರಿಸಿದ್ದರು.
ನಾನು ತಿವಾರಿಯವರಿಗೆ ನೀಡಿರುವ ಲೀಗಲ್ ನೋಟೀಸಿಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅವರು ಕ್ಷಮೆ ಯಾಚಿಸಿಲ್ಲ. ಹಾಗಾಗಿ ನಾನು ಅವರ ವಿರುದ್ಧ ಮಾನಹಾನಿ ಕ್ರಿಮಿನಲ್ ಕೇಸು ಹಾಕಲು ನಿರ್ಧರಿಸಿದ್ದೇನೆ ಎಂದು ಗಡ್ಕರಿ ತಿಳಿಸಿದ್ದಾರೆ.
ತನ್ನ ಮೇಲೆ ಮಾನನಷ್ಟ ಕೇಸು ಹಾಕಿರುವ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ತಿವಾರಿ, ಬಿಜೆಪಿ ನಾಯಕ ಕಾಂಗ್ರೆಸ್ ನಾಯಕರು ಮತ್ತಿತರರ ವಿರುದ್ಧ ಯಾವ ಹೇಳಿಕೆಗಳನ್ನು ನೀಡಿದರೂ ನಾವು ಸಹಿಸಿಕೊಳ್ಳಬೇಕೇ ಎಂದು ಪ್ರಶ್ನಿಸಿದ್ದಾರೆ.
ಅಫ್ಜಲ್ ಗುರು ಕಾಂಗ್ರೆಸ್‌ನ ಅಳಿಯ ಎಂದರು, ನಂತರ ಲಾಲೂ ಪ್ರಸಾದ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್ ಅವರನ್ನು ನಾಯಿಗೆ ಹೋಲಿಸಿದರು. ಇಂತಹ ಹೇಳಿಕೆ ನೀಡುವ ಗಡ್ಕರಿಯವರು ನನ್ನ ಹೇಳಿಕೆ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದಾರೆ ಎಂದು ಟೀಕಿಸಿದರು.