2ಜಿ ತರಂಗಾಂತರ ಹಗರಣದ ಜಂಟಿ ಸಂಸದೀಯ ಸಮಿತಿ ತನಿಖೆಗೆ ಸರಕಾರ ಒಪ್ಪದೇ ಇದ್ದರೆ ಪ್ರತಿಪಕ್ಷಗಳು ತಮ್ಮ ಹಠವನ್ನು ತ್ಯಜಿಸುವುದು ಉತ್ತಮ ಎಂದು ಸಂಸತ್ತಿನ ಚಳಿಗಾಲದ ಅಧಿವೇಶನ ಕಲಾಪ ನಡೆಯದೇ ಪೋಲಾಗುತ್ತಿರುವುದನ್ನು ಕಂಡು ಮರುಗಿರುವ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸಾಕಪ್ಪಾ ಸಾಕು ಎಂದಿದ್ದಾರೆ.
ಪ್ರಸಕ್ತ ಅಧಿವೇಶನದಲ್ಲಿ ಸರಕಾರವು ಜೆಪಿಸಿ ತನಿಖೆಗೆ ಬಗ್ಗದಿದ್ದರೆ, ಮುಂದಿನ ಅಧಿವೇಶನದಲ್ಲೂ ಇದೇ ರೀತಿಯ ಅಸಹಕಾರವನ್ನು ಮುಂದುವರಿಸುವ ಕುರಿತು ಬಿಜೆಪಿ ನಾಯಕರು ಮಾತುಕತೆ ನಡೆಸುತ್ತಿದ್ದಾರೆ. ಆದರೆ ನಾನು ಇದಕ್ಕೆ ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತಿದ್ದೇನೆ. ಗದ್ದಲ ಸಾಕು ಸಾಕಾಗಿ ಹೋಗಿದೆ ಎಂದು ಗೌಡರು ಹೇಳಿದರು.
NRB
ಸ್ವತಂತ್ರ ಭಾರತದ ಇತಿಹಾಸದಲ್ಲಿನ ಅತಿದೊಡ್ಡ ಹಗರಣಗಳಲ್ಲಿ 2ಜಿ ಕೂಡ ಒಂದು ಎಂಬುದನ್ನು ಒಪ್ಪಿಕೊಂಡಿರುವ ಅವರು, ಎನ್‌ಡಿಎಯೇತರ ಪಕ್ಷಗಳು ಕೂಡ ಜೆಪಿಸಿ ತನಿಖೆ ನಡೆಯಬೇಕೆಂದು ಬಯಸುತ್ತಿವೆ; ಆದರೆ ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ ಮುಂದಿನ ಅಧಿವೇಶವನ್ನು ಸುಗಮವಾಗಿ ನಡೆಯಲು ಅವಕಾಶ ನೀಡಬೇಕು ಎಂದರು.
ಪ್ರತಿ ಅಧಿವೇಶನವನ್ನೂ ಗದ್ದಲಗಳಿಂದ ಮುಂದಕ್ಕೆ ಹಾಕುವುದಾದರೆ, ಸಂಸತ್ ಇರುವುದಾದರೂ ಯಾಕಾಗಿ? ಸಂಸತ್ ಸದಸ್ಯರಾಗಿರುವ ನಮಗೆ ಕೊಂಚವಾದರೂ ಜವಾಬ್ದಾರಿಗಳಿಲ್ಲವೇ ಎಂದು ಪ್ರಶ್ನಿಸಿದರು.
ಜೆಪಿಸಿ ತನಿಖೆ ಕುರಿತು ಸರಕಾರವು ತನ್ನದೇ ನಿಲುವಿಗೆ ಅಂಟಿಕೊಳ್ಳಲು ನಿರ್ಧರಿಸಿದೆ. ಸಮ್ಮಿಶ್ರ ಸರಕಾರ ಎಂದ ಮೇಲೆ ಅಲ್ಲಿ ಕೆಲವೊಂದು ಸಮಸ್ಯೆಗಳು ಇದ್ದೇ ಇರುತ್ತವೆ. ಅಲ್ಲಿ ಒತ್ತಡಗಳು ಸಾಮಾನ್ಯ ಎಂದು ಮಾಜಿ ಪ್ರಧಾನಿ ಅಭಿಪ್ರಾಯಪಟ್ಟರು.
ಸಂಸತ್ತಿನ ಮುಂದಿನ ಅಧಿವೇಶನವನ್ನು ನಡೆಯಲು ಬಿಡದೇ ಇರುವುದಕ್ಕೆ ಜೆಡಿಎಸ್ ಬೆಂಬಲ ಸೂಚಿಸುವುದಿಲ್ಲ ಎಂದು ನಾನು ಈಗಾಗಲೇ ಎನ್‌ಡಿಎಯೇತರ ಪಕ್ಷಗಳಿಗೆ ನನ್ನ ವೈಯಕ್ತಿಕ ನಿಲುವನ್ನು ತಿಳಿಸಿದ್ದೇನೆ. ಇನ್ನು ಉಳಿದ ನಿರ್ಧಾರ ಅವರಿಗೆ ಬಿಟ್ಟದ್ದು ಎಂದರು.
ಎಲ್ಲರೂ 2ಜಿ ಹಗರಣವನ್ನೇ ಕೇಂದ್ರ ಮಾಡಿಕೊಂಡಿದ್ದಾರೆ. ಇದರಿಂದಾಗಿ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಭೂ ಹಗರಣಗಳು ಮುಚ್ಚಿ ಹೋಗುತ್ತಿವೆ. ಒಟ್ಟಾರೆ ಲಾಭವಾಗಿರುವುದು ಬಿಜೆಪಿಗೆ. ಕರ್ನಾಟಕದ ಬಿಜೆಪಿ ಸರಕಾರದ ಹಗರಣಗಳನ್ನು ಮರೆಯಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಗೌಡರು ಅಸಮಾಧಾನ ವ್ಯಕ್ತಪಡಿಸಿದರು.