ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೈಕೋರ್ಟ್ ಭ್ರಷ್ಟ ನ್ಯಾಯಮೂರ್ತಿಗಳ ಬಗ್ಗೆ ಸುಪ್ರೀಂ ಗರಂ (Supreme Court | Allahabad High Court | Markandey Katju | Gyan Sudha Mishra)
ರಾಜಕೀಯ ರಂಗದಲ್ಲಿ ಆರೋಪ-ಪ್ರತ್ಯಾರೋಪಗಳನ್ನು ಪ್ರತಿದಿನ ನೋಡುತ್ತಿರುವವರಿಗೆ ಇದು ಹೊಸತು. ಭಾರತದ ಇತಿಹಾಸದಲ್ಲಿಯೇ ಉನ್ನತ ನ್ಯಾಯಾಧೀಶರ ವಿರುದ್ಧ ನ್ಯಾಯಾಧೀಶರೇ ಟೀಕಿಸಿರುವುದು ಅಪರೂಪ. ಇದು ನಡೆಯುತ್ತಿರುವುದು ಸರ್ವೋಚ್ಚ ನ್ಯಾಯಾಲಯ ಮತ್ತು ಅಲಹಾಬಾದ್ ಉಚ್ಚ ನ್ಯಾಯಾಲಯಗಳ ನಡುವೆ.
ಅಲಹಾಬಾದ್ ಹೈಕೋರ್ಟ್ ನ್ಯಾಯಾಂಗದ ಪಾವಿತ್ರ್ಯತೆಗೆ ಧಕ್ಕೆ ತರುತ್ತಿದೆ. ನ್ಯಾಯಾಲಯದಲ್ಲಿ ಕೊಳೆತ ನಾರು ವಾಸನೆ ಬರುತ್ತಿದೆ. ಅಲ್ಲಿ ಎಲ್ಲವೂ ಸರಿಯಾಗಿಲ್ಲ. ನ್ಯಾಯಾಧೀಶರು ಸ್ವಜನ ಪಕ್ಷಪಾತದಿಂದ ನರಳುತ್ತಿದ್ದಾರೆ. ಅವರನ್ನು ರಿಪೇರಿ ಮಾಡಬೇಕು, ಇಲ್ಲವೇ ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಕೆಲ ದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್ ಹೇಳಿತ್ತು.
ಇದರಿಂದ ತೀವ್ರ ಮುಖಭಂಗಕ್ಕೀಡಾಗಿದ್ದ ಅಲಹಾಬಾದ್ ಹೈಕೋರ್ಟ್, ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿತ್ತು. ಸುಪ್ರೀಂ ಹೇಳಿಕೆಯಲ್ಲಿನ ಆಕ್ಷೇಪಾರ್ಹ ಪದಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಹೈಕೋರ್ಟ್ ಒತ್ತಾಯಿಸಿತ್ತು.
ಶುಕ್ರವಾರ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಸುಪ್ರೀಂ, ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧದ ತನ್ನ ಹೇಳಿಕೆಯನ್ನು ಬದಲಾಯಿಸಲು ನಿರಾಕರಿಸಿದೆ. ಇದು ಆತ್ಮವಿಮರ್ಶೆಯ ಕಾಲವೇ ಹೊರತು ಪ್ರತಿಕ್ರಿಯೆ ಅಗತ್ಯವಿಲ್ಲ. ಎಲ್ಲಾ ನ್ಯಾಯಾಧೀಶರೂ ಕೆಟ್ಟವರೆಂದು ನಾವು ಹೇಳುತ್ತಿಲ್ಲ, ಅತ್ಯುತ್ತಮ ನ್ಯಾಯಾಧೀಶರೂ ಅಲ್ಲಿದ್ದಾರೆ ಎಂದು ದ್ವಿಸದಸ್ಯ ಪೀಠವು ಹೇಳಿದೆ.
ಅಲಹಾಬಾದ್ ಹೈಕೋರ್ಟ್ ಪರ ಹಿರಿಯ ವಕೀಲ ಪಿ.ಆರ್. ರಾವ್ ವಾದ ಮಂಡಿಸಿದ್ದರು. ಸುಪ್ರೀಂ ಕೋರ್ಟ್ ನೀಡಿರುವ ಹೇಳಿಕೆಯನ್ನು ಅಳಿಸಿ ಹಾಕಬೇಕು ಎನ್ನುವುದು ಅವರ ಮನವಿಯಾಗಿತ್ತು.
ಅದು ಸಾಧ್ಯವಿಲ್ಲ ಎಂದು ಹೇಳಿದ ಹೊರತಾಗಿಯೂ ರಾವ್ ವಾದ ಮುಂದುವರಿಸಿದಾಗ ಕೋಪಗೊಂಡ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು, 'ಅವೆಲ್ಲವನ್ನೂ ನಮಗೆ ನೀವು ಹೇಳಬೇಕಾದ ಅಗತ್ಯವಿಲ್ಲ. ಅಲಹಾಬಾದ್ ಹೈಕೋರ್ಟಿನೊಂದಿಗೆ ನಾನು ಮತ್ತು ನನ್ನ ಕುಟುಂಬವು 100ಕ್ಕೂ ಹೆಚ್ಚು ವರ್ಷಗಳಿಂದ ಸಂಬಂಧ ಹೊಂದಿದೆ. ಯಾವ ನ್ಯಾಯಮೂರ್ತಿಗಳು ಭ್ರಷ್ಟರು, ಯಾರು ಒಳ್ಳೆಯವರು ಎನ್ನುವುದು ಜನರಿಗೆ ಗೊತ್ತು. ಹಾಗಾಗಿ ಅವೆಲ್ಲವನ್ನೂ ನೀವು ನಮಗೆ ವಿವರಿಸುವ ಅಗತ್ಯವಿಲ್ಲ' ಎಂದರು.
ನಾಳೆ ಮಾರ್ಕಂಡೇಯ ಕಟ್ಜು ಲಂಚ ಸ್ವೀಕರಿಸಲು ಆರಂಭಿಸಿದರೆ, ಅದು ಇಡೀ ದೇಶಕ್ಕೆ ತಿಳಿಯುತ್ತದೆ. ಹಾಗಾಗಿ ಯಾರು ಪ್ರಾಮಾಣಿಕರು ಮತ್ತು ಯಾರು ಭ್ರಷ್ಟರು ಎಂದು ನೀವು ನಮಗೆ ಹೇಳಬೇಡಿ ಎಂದು ನ್ಯಾಯಮೂರ್ತಿ ಕಟ್ಜು ಆಕ್ರೋಶದಿಂದ ನುಡಿದರು.
ಅಲಹಾಬಾದ್ ಹೈಕೋರ್ಟಿನಲ್ಲಿ ಸ್ವಜನ ಪಕ್ಷಪಾತ ಹೆಚ್ಚುತ್ತಿದೆ. ತಮ್ಮ ಪರಿಚಿತ ವಕೀಲರ ಕಕ್ಷಿಗಾರರ ಪರವಾಗಿ ತೀರ್ಪುಗಳು ಬರುತ್ತಿವೆ. ಈ ಪ್ರವೃತ್ತಿ ಕೊನೆಗೊಳ್ಳಬೇಕು. ಕೋರ್ಟಿನ ನ್ಯಾಯಮೂರ್ತಿಗಳ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಬಹಳ ದೂರುಗಳು ಬರುತ್ತಿವೆ. ಕೆಲವು ಜಡ್ಜ್‌ಗಳ ಬಂಧುಗಳೇ ಅಲ್ಲಿ ನ್ಯಾಯವಾದಿಗಳಾಗಿರುವುದು ಕಂಡು ಬಂದಿದೆ. ಇವರು ಕೆಲವೇ ವರ್ಷಗಳಲ್ಲಿ ಕೋಟ್ಯಧಿಪತಿಗಳಾಗುತ್ತಿರುವುದು ಹೇಗೆ ಎಂದು ಪ್ರಶ್ನಿಸಿದ್ದ ಸುಪ್ರೀಂ, ಇವೆಲ್ಲಕ್ಕೂ ಶೀಘ್ರದಲ್ಲೇ ಕಡಿವಾಣ ಹಾಕುವ ಅಗತ್ಯವಿದೆ ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಹೇಳಿತ್ತು.
ಅಲಹಾಬಾದ್ ಹೈಕೋರ್ಟ್ ಬಗ್ಗೆ ಸುಪ್ರೀಂ ಕೋರ್ಟ್ ಈ ರೀತಿಯಾಗಿ ಹೇಳಿರುವುದರಿಂದ ಹೈಕೋರ್ಟ್ ಘನತೆಗೆ ಧಕ್ಕೆಯಾಗುತ್ತದೆ. ಇದರಿಂದಾಗಿ ಪ್ರಾಮಾಣಿಕ ಮತ್ತು ಭ್ರಷ್ಟ ನ್ಯಾಯಾಧೀಶರ ನಡುವಿನ ಅಂತರವೇ ಇಲ್ಲದಂತಾಗಿದೆ. ಹಾಗಾಗಿ ನ್ಯಾಯಾಲಯವು ಅದನ್ನು ಅಳಿಸಿ ಹಾಕಬೇಕು ಎಂದು ಹೈಕೋರ್ಟ್ ಪರವಾಗಿ ವಾದ ಮಂಡಿಸಲಾಗಿತ್ತು.