2ಜಿ ತರಂಗಾಂತರ ಹಂಚಿಕೆ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ದಿನದಿಂದ ದಿನಕ್ಕೆ ತನ್ನ ಕುಣಿಕೆಯನ್ನು ಬಿಗಿಗೊಳಿಸುತ್ತಿದ್ದು, ದೂರಸಂಪರ್ಕ ಖಾತೆಯ ಮಾಜಿ ಸಚಿವ ಎ. ರಾಜಾ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾಜಾ ಮತ್ತು ಅವರ ಕುಟುಂಬ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿರುವ 2008ರ ತರಂಗಾಂತರ ಹಂಚಿಕೆ ಹಗರಣ ಸಂಬಂಧ ಸಿಬಿಐ ಶೀಘ್ರದಲ್ಲೇ ನೋಟೀಸು ಜಾರಿ ಮಾಡಲಿದೆ. ಅವರ ವಿಚಾರಣೆಯೂ ಸಮೀಪಿಸುತ್ತಿರುವ ಲಕ್ಷಣಗಳು ಕಾಣಿಸಿಕೊಂಡಿವೆ.
ಗುರುವಾರ ಅವರ ದೆಹಲಿ ಮತ್ತು ಚೆನ್ನೈನ ನಿವಾಸಗಳ ಮೇಲೆ ಸಿಬಿಐ ದಾಳಿ ನಡೆಸಿದ ನಂತರ ಈ ಬೆಳವಣಿಗೆಗಳು ನಡೆದಿವೆ.
ಸಿಆರ್‌ಪಿಸಿ ಸೆಕ್ಷನ್ 160ರಡಿಯಲ್ಲಿ ರಾಜಾ ಅವರಿಗೆ ವಿಚಾರಣೆಗೆ ಹಾಜರಾಗಲು ನೋಟೀಸು ಜಾರಿ ಮಾಡಲಿದೆ. ತನಿಖೆಗೆ ಸಹಕಾರ ಹಾಗೂ ಅಗತ್ಯವಿದ್ದರೆ ಸಾಮಾನ್ಯ ಪ್ರಶ್ನೆಗಳಿಗೆ ಡಿಎಂಕೆ ಸಂಸದ ಉತ್ತರಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕುಟುಂಬ ಸದಸ್ಯರನ್ನೂ ಪ್ರಶ್ನಿಸಬಹುದಾಗಿದೆ.
ರಾಜಾ ಸೇರಿದಂತೆ ದೂರಸಂಪರ್ಕ ಇಲಾಖೆ ಮಾಜಿ ಕಾರ್ಯದರ್ಶಿ ಸಿದ್ಧಾರ್ಥ್ ಬೇಹುರಾ, ಹಗರಣದ ಮುಖ್ಯ ಪಾತ್ರಧಾರಿ ಚಂದೋಲಿಯಾ ಮತ್ತಿತರ ದೂರಸಂಪರ್ಕ ಅಧಿಕಾರಿಗಳ ನಿವಾಸದ ಮೇಲೂ ಸಿಬಿಐ ದಾಳಿ ನಡೆದಿತ್ತು. ಈ ಸಂದರ್ಭದಲ್ಲಿ ತನಿಖಾ ದಳಕ್ಕೆ ಅಮೂಲ್ಯ ದಾಖಲೆಗಳು ಸಿಕ್ಕಿವೆ ಎಂದು ಮೂಲಗಳು ಹೇಳಿವೆ.
ಸ್ವತಂತ್ರ ಭಾರತದ ಅತಿ ದೊಡ್ಡ ಹಗರಣ ಎಂದು ಹೇಳಲಾಗಿರುವ ಇದರಲ್ಲಿ ಸರಕಾರದ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರೂಪಾಯಿಗಳ ನಷ್ಟವಾಗಿದೆ ಎಂದು ಸಿಎಜಿ ವರದಿ ಹೇಳಿದ ನಂತರ ರಾಜಾ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಸಂಬಂಧ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನೆ ಕುಳಿತಿದ್ದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಕೂಡ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.