ತನ್ನದೇ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯರ ವಿಕೃತ ಸಂತೋಷಕ್ಕೆ ಕಿರಿಯ ವಿದ್ಯಾರ್ಥಿನಿಯೊಬ್ಬಳು ಬಲಿಯಾಗಿರುವ, ಲಕ್ಷ್ಮಿ ಅಭಿನಯದ 'ಗಾಳಿಮಾತು' ಚಿತ್ರದ ಅಂತ್ಯವನ್ನು ನೆನಪಿಸುವ ಪ್ರಸಂಗವಿದು. ಇದಕ್ಕೆ ಕಾರಣರಾದ ಮೂವರೂ ವಿದ್ಯಾರ್ಥಿನಿಯರೀಗ ಜೈಲು ಸೇರಿದ್ದಾರೆ.
ನಡೆಯಬಾರದ ಈ ಘಟನೆ ನಡೆದಿರುವುದು ಪಶ್ಚಿಮ ಬಂಗಾಲದ ಬರ್ದ್ವಾನ್ ಜಿಲ್ಲೆಯ ನ್ಯಾಷನಲ್ ಪವರ್ ಟ್ರೈನಿಂಗ್ ಇನ್ಸ್‌ಟಿಟ್ಯೂಟ್ ಕಾಲೇಜಿನಲ್ಲಿ. ತೃತೀಯ ವರ್ಷದ ಮೂವರು ವಿದ್ಯಾರ್ಥಿನಿಯರು ಜೂನಿಯರ್ ವಿದ್ಯಾರ್ಥಿನಿಯನ್ನು ರ‌್ಯಾಗಿಂಗ್‌ಗೆ ಒಳಪಡಿಸಿ, ಆಕೆಯ ಬಟ್ಟೆ ಬಿಚ್ಚಿ ಬೆತ್ತಲೆ ಚಿತ್ರಗಳನ್ನು ತೆಗೆದಿದ್ದಲ್ಲದೆ, ಅದನ್ನು ಇತರರಿಗೆ ಮೊಬೈಲ್ ಎಂಎಂಎಸ್ ಮೂಲಕ ಹಂಚಿದ್ದರು.
ಇದರಿಂದ ತೀವ್ರ ಅಪಮಾನಕ್ಕೊಳಾಗದ ವಿದ್ಯಾರ್ಥಿನಿ ನರಗಳನ್ನು ಕುಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಬಂಧಿತ ವಿದ್ಯಾರ್ಥಿನಿಯರನ್ನು ಅರ್ಪಿತಾ ದಾಸ್, ಡೆಬ್ಲಿನಾ ಹಲ್ದಾರ್ ಮತ್ತು ಶುಭಶ್ರೀ ಧಾರ್ ಎಂದು ಗುರುತಿಸಲಾಗಿದೆ. ಕೇಂದ್ರ ಸರಕಾರದಿಂದ ನಡೆಸಲ್ಪಡುತ್ತಿರುವ ಇಂಜಿನಿಯರಿಂಗ್ ಕಾಲೇಜಿನ ಬಿ.ಟೆಕ್ ವಿದ್ಯಾರ್ಥಿನಿಯರಿವರು.
ಬೆತ್ತಲೆ ಮಾಡಿದ್ದರು... ನವೆಂಬರ್ 15ರಂದು ರಾತ್ರಿ ಬಲಿಪಶು ವಿದ್ಯಾರ್ಥಿನಿಯನ್ನು ಹಾಸ್ಟೆಲ್‌ನ ಖಾಲಿ ಕೋಣೆಯೊಂದಕ್ಕೆ ಕರೆಸಿದ್ದ ಹಿರಿಯ ವಿದ್ಯಾರ್ಥಿನಿಯರು, ಕಠಿಣ ಪ್ರಶ್ನೆಗಳನ್ನು ಕೇಳಲಾರಂಭಿಸಿದ್ದರು. ಕಾಲೇಜಿಗೆ ಹೊಸಬಳಾಗಿದ್ದ ವಿದ್ಯಾರ್ಥಿನಿ ಅದಕ್ಕೆಲ್ಲ ಉತ್ತರಿಸಲು ಸಾಧ್ಯವಾಗಿರಲಿಲ್ಲ.
ಇದನ್ನೇ ಮುಂದಿಟ್ಟುಕೊಂಡ ಅರ್ಪಿತಾ, ಡೆಬ್ಲಿನಾ ಮತ್ತು ಶುಭಶ್ರೀ, ಕಿರಿಯ ವಿದ್ಯಾರ್ಥಿನಿಯನ್ನು ಮನಬಂದಂತೆ ಥಳಿಸಿದ್ದರು. ನಂತರ ಆಕೆಯ ಬಟ್ಟೆ ಬಿಚ್ಚಿ ಬೆತ್ತಲೆಗೊಳಿಸಿ ತಮ್ಮ ಮೊಬೈಲುಗಳಲ್ಲಿ ಫೋಟೋಗಳನ್ನು ತೆಗೆದಿದ್ದರು.
ಇಷ್ಟಕ್ಕೆ ಕೊನೆಗೊಳ್ಳದ ವಿದ್ಯಾರ್ಥಿನಿಯರ ವಿಕೃತಿ, ಫೋಟೋಗಳನ್ನು ಇತರರ ಮೊಬೈಲುಗಳಿಗೆ ರವಾನಿಸುವುದನ್ನು ಮಾಡಿದ್ದರು. ಜತೆಗೆ ಇಂಟರ್ನೆಟ್ಟಿನಲ್ಲಿ ಕೂಡ ಹಾಕಿದ್ದರು.
ಇದರಿಂದ ತೀವ್ರ ಅಪಮಾನಿತಳಾದ ವಿದ್ಯಾರ್ಥಿನಿ ನವೆಂಬರ್ 17ರಂದು ಆತ್ಮಹತ್ಯೆಗೆ ಯತ್ನಿಸಿದ್ದಳು. ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ, ಮೂರು ದಿನಗಳ ನಂತರ ಪ್ರಾಣ ತ್ಯಜಿಸಿದ್ದಳು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ, ಪ್ರಸಕ್ತ ಕರ್ನಾಟಕದಲ್ಲಿರುವ ಕಾಲೇಜಿನ ನಿರ್ದೇಶಕ ಎಂ. ಅರುಣಾಚಲಂ, 'ಕಾಲೇಜಿನ ನಿಯಮಾವಳಿಗಳ ಪ್ರಕಾರ ವಿದ್ಯಾರ್ಥಿನಿಯರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ರ‌್ಯಾಗಿಂಗ್ ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸುವುದು ಕಡ್ಡಾಯ ಎಂಬ ನಿಯಮವನ್ನು ಸುಪ್ರೀಂ ಕೋರ್ಟ್ ಕಡ್ಡಾಯ ಮಾಡಿದೆ' ಎಂದಿದ್ದಾರೆ.
ವಿದ್ಯಾರ್ಥಿನಿಯರ ಮೇಲೆ ತೀವ್ರ ಹಲ್ಲೆ, ಕೊಲೆ ಯತ್ನ ಸೇರಿದಂತೆ ಜಾಮೀನು ರಹಿತ ಹಲವು ಆರೋಪಗಳ ಮೇಲೆ ಭಾರತೀಯ ದಂಡಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯ ಹೆತ್ತವರ ದೂರಿನ ಆಧಾರದ ಮೇಲೆ ಮೂವರು ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಲಾಗಿದೆ. ಈ ಕುರಿತು ತನಿಖೆ ನಡೆಸಲು ಕಾಲೇಜು ಆಂತರಿಕ ಸಮಿತಿಯೊಂದನ್ನು ಕೂಡ ರಚಿಸಿದೆ.