ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದ್ವೇಷ ಭಾಷಣ; ವರುಣ್ ವಿರುದ್ಧ ಕ್ರಮಕ್ಕೆ ಮಾಯಾ ಸಿಗ್ನಲ್ (Uttar Pradesh | BJP | Pilibhit | Varun Gandhi)
Bookmark and Share Feedback Print
 
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮುಸ್ಲಿಮರ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿರುವ ಫಿಲಿಬಿಟ್ ಸಂಸದ ಹಾಗೂ ಬಿಜೆಪಿ ನಾಯಕ ವರುಣ್ ಗಾಂಧಿ ವಿರುದ್ಧ ಕ್ರಮಕ್ಕೆ ಉತ್ತರ ಪ್ರದೇಶದ ಮಾಯಾವತಿ ಸರಕಾರ ಒಪ್ಪಿಗೆ ಸೂಚಿಸಿದೆ.

ಕಳೆದ ವರ್ಷ ಫಿಲಿಬಿಟ್ ಜಿಲ್ಲೆಯ ಕೊಟವಾಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್‌ಗೆ ಸಂಬಂಧಪಟ್ಟಂತೆ ಬಿಜೆಪಿ ಸಂಸದ ವರುಣ್ ಗಾಂಧಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಸರಕಾರವು ಅನುಮತಿ ನೀಡಿದೆ ಎಂದು ಗೃಹ ಇಲಾಖೆ ಕಾರ್ಯದರ್ಶಿ ದೀಪಕ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ವರುಣ್ ಗಾಂಧಿ ಅಂದು ಹೇಳಿದ್ದೇನು ಗೊತ್ತೇ?

ಭಾರತೀಯ ದಂಡ ಸಂಹಿತೆ ಮತ್ತು ಜನತಾ ಪ್ರತಿನಿಧಿ ಕಾಯ್ದೆಯ ವಿವಿಧ ಅಧಿನಿಯಮಗಳ ಅಡಿಯಲ್ಲಿ ಕಾನೂನು ಕ್ರಮ ಜರಗಿಸಲು ಸರಕಾರ ಅನುಮತಿ ನೀಡಿದೆ. ಧರ್ಮದ ನೆಲೆಯಲ್ಲಿ ವಿವಿಧ ಸಮುದಾಯಗಳ ನಡುವೆ ದ್ವೇಷ ಸೃಷ್ಟಿ, ಧಾರ್ಮಿಕ ಭಾವನೆಗಳನ್ನು ಕೆರಳಿಸಲು ಉದ್ದೇಶಪೂರ್ವಕ ದ್ವೇಷ ಸಾಧನೆ ಮತ್ತು ಸಾರ್ವಜನಿಕರಿಗೆ ಹಾನಿಯನ್ನುಂಟು ಮಾಡುವ ಹೇಳಿಕೆ ನೀಡಿರುವ ಆರೋಪಗಳನ್ನು ಅವರ ಮೇಲೆ ಹೊರಿಸಲಾಗಿತ್ತು.

2009ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಫಿಲಿಬಿಟ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ವರುಣ್ ಗಾಂಧಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ದ್ವೇಷಪೂರಿತ ಭಾಷಣ ಮಾಡಿದ್ದರು ಎಂದು ಆರೋಪಿಸಲಾಗಿತ್ತು.

ಮೊಹಲ್ಲಾ ದಾಲ್ಚಂದ್ ಮತ್ತು ಬರ್ಕೇರಾ ನಗರಗಳಲ್ಲಿ 2009ರ ಮಾರ್ಚ್ ಏಳು ಮತ್ತು ಎಂಟರಂದು ಅವರು ಓತಪ್ರೋತವಾಗಿ ಭಾಷಣ ಬಿಗಿದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಚುನಾವಣಾ ಆಯೋಗವು, ದೂರು ದಾಖಲಿಸಿಕೊಂಡಿತ್ತು. ಬಳಿಕ ಬಿಜೆಪಿ ನಾಯಕನನ್ನು ಬಂಧಿಸಲಾಗಿತ್ತು.

ತನ್ನ ಭಾಷಣದುದ್ದಕ್ಕೂ ಮುಸ್ಲಿಮರ ವಿರುದ್ಧ ಕಿಡಿ ಕಾರಿದ್ದ ವರುಣ್ ಗಾಂಧಿ, ಅವರನ್ನು ಪಾಕಿಸ್ತಾನಕ್ಕೆ ಓಡಿಸಬೇಕು, ಹಿಂದೂಗಳ ಮೇಲೆ ದಾಳಿ ಮಾಡುವವರ ಅಥವಾ ಅವರನ್ನು ಗುರಿ ಮಾಡುವವರ ಕೈ ಕತ್ತರಿಸುತ್ತೇನೆ ಎಂದೆಲ್ಲ ತನ್ನ ಭಾಷಣದಲ್ಲಿ ಹೇಳಿದ್ದರು.

ಆದರೆ ಇದು ಮಾಧ್ಯಮಗಳ ಮೂಲಕ ಬಹಿರಂಗವಾಗುತ್ತಿದ್ದಂತೆ ವರುಣ್ ನಿರಾಕರಿಸಿದ್ದರು. ತಾನು ಹಾಗೆ ಹೇಳಿಯೇ ಇಲ್ಲ. ವೀಡಿಯೋವನ್ನು ತಿರುಚಲಾಗಿದೆ ಎಂದು ಸ್ಪಷ್ಟನೆ ನೀಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ