ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹುಟ್ಟುಹಬ್ಬದ ಸಂಭ್ರಮವೊಂದು ತೀವ್ರ ವಿವಾದಕ್ಕೆ ಕಾರಣವಾದ ಪ್ರಸಂಗ ಛತ್ತಿಸ್‌ಗಢದಲ್ಲಿ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಧಿನಾಯಕಿಯ ಹುಟ್ಟುಹಬ್ಬವನ್ನು ಭಾರತದ ರಾಷ್ಟ್ರಧ್ವಜದಲ್ಲಿನ ತ್ರಿವರ್ಣದಂತೆ ತಯಾರಿಸಲಾಗಿದ್ದ ಕೇಕನ್ನು ಕತ್ತರಿಸಿದ್ದೇ ಇದಕ್ಕೆ ಕಾರಣ. ಇದು ರಾಷ್ಟ್ರಧ್ವಜಕ್ಕೆ ಮಾಡಿದ ಅವಮಾನ ಎಂದು ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಮಮದ ಕಾಂಗ್ರೆಸ್ ನಾಯಕ ಸುಭಾಶ್ ಶರ್ಮ ಅವರು ತ್ರಿವರ್ಣದ ಕೇಕ್ ಕತ್ತರಿಸುತ್ತಿರುವ ಛಾಯಾಚಿತ್ರವನ್ನು ಸ್ಥಳೀಯ ಪತ್ರಿಕೆಗಳು ಪ್ರಕಟಿಸಿದ ನಂತರ ಈ ವಿವಾದ ಭಾರೀ ಸುದ್ದಿ ಮಾಡಿದೆ. ಕಾಂಗ್ರೆಸ್ ನಾಯಕನ ಈ ವರ್ತನೆಗೆ ಆಕ್ಷೇಪಿಸಿ ಪ್ರತಿಭಟನೆ ನಡೆಸುತ್ತಿರುವ ರಾಜ್ಯ ಬಿಜೆಪಿ ಘಟಕ, ಕ್ಷಮೆಯಾಚನೆಗೆ ಒತ್ತಾಯಿಸಿದೆ.
ಇದು ರಾಷ್ಟ್ರಧ್ವಜಕ್ಕೆ ಮಾಡಿದ ಅಪಮಾನ ಎಂದಿರುವ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಸಚ್ಚಿದಾನಂದ ಉಪಾಸನೆ, ಸೋನಿಯಾರನ್ನು ಅತಿಯಾಗಿ ಓಲೈಸುವ ಕಾರ್ಯದಲ್ಲಿ ತೊಡಗಿದ್ದ ಕಾಂಗ್ರೆಸ್ ನಾಯಕರು, ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಲು ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಅವರು, ಪೊಲೀಸ್ ಕೇಸು ದಾಖಲಿಸುವುದಾಗಿ ತಿಳಿಸಿದರು.
ಈ ಆರೋಪವನ್ನು ತಳ್ಳಿ ಹಾಕಿರುವ ನಗರ ಕಾಂಗ್ರೆಸ್ ಮುಖ್ಯಸ್ಥ ಇಂದ್ರಚಂದ್ ದಾಡಿವಾಲ, ಅದು ಕೇವಲ ತ್ರಿವರ್ಣದ ಕೇಕ್ ಮಾತ್ರವಾಗಿರದೆ, ಆ ಕೇಕ್‌ನಲ್ಲಿ ಇನ್ನೂ ಇತರ ಬಣ್ಣಗಳನ್ನೂ ಸೇರಿಸಲಾಗಿತ್ತು. ಅಲ್ಲದೆ ಅದರಲ್ಲಿ ಅಶೋಕ ಚಕ್ರದ ಮಾದರಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂಬಂಧ ಹೆಚ್ಚು ಪ್ರತಿಕ್ರಿಯಿಸಲು ಕಾಂಗ್ರೆಸ್ ಪ್ರಮುಖರು ನಿರಾಕರಿಸಿದ್ದಾರೆ.
ಕಾಂಗ್ರೆಸ್ ನಾಯಕರಿಂದಾಗಿರುವ ಪ್ರಮಾದವನ್ನು ಶಿವಸೇನೆ ಕೂಡ ಖಂಡಿಸಿದೆ. ಕ್ಷಮೆ ಯಾಚಿಸದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುವ ಬೆದರಿಕೆಯನ್ನೂ ಹಾಕಲಾಗಿದೆ.
ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಭಾರತವನ್ನು ವಿಭಜಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿರುವ ಶಿವಸೇನಾ ಮುಖ್ಯಸ್ಥ ಸುನಿಲ್ ಕುಕ್ರೇಜಾ, ಈ ಪಕ್ಷವು ಏನೂ ಮಾಡಬಹುದು ಎಂಬುದಕ್ಕೆ ಇದೇ ಸಾಕ್ಷಿ ಎಂದು ಕಿಡಿ ಕಾರಿದ್ದಾರೆ.