ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಗ್ರೆಸ್ ಧರ್ಮ ರಾಜಕಾರಣಕ್ಕೆ ಇನ್ನೇನು ಸಾಕ್ಷಿ ಬೇಕು?
(Congress | religious politics | Mumbai attacks | David Mulford)
ಬಿಜೆಪಿಯವರನ್ನು ಕೋಮುವಾದಿಗಳು, ಕೇಸರಿ ಹೊದ್ದುಕೊಂಡವರನ್ನು ಭಯೋತ್ಪಾದಕರು ಎಂದು ಕಾಂಗ್ರೆಸ್ ಶಂಕಿಸುತ್ತಾ ಬಂದಿರುವುದು ಗೊತ್ತೇ ಇದೆ. ಇದು ಮತ್ತೊಮ್ಮೆ ಖಚಿತವಾಗಿದೆ. ಸ್ವತಃ ಅಮೆರಿಕಾದ ರಾಯಭಾರಿಯೊಬ್ಬರು ಈ ಬಗ್ಗೆ ತನ್ನ ದೇಶಕ್ಕೆ ರವಾನಿಸಿರುವ ರಹಸ್ಯ ದಾಖಲೆಯಲ್ಲಿ ಇದನ್ನು ತಿಳಿಸಿದ್ದಾರೆ. ಮುಂಬೈ ದಾಳಿಯನ್ನು ಕಾಂಗ್ರೆಸ್ ಧರ್ಮಾಧರಿತ ರಾಜಕೀಯಕ್ಕೆ ಬಳಸಿಕೊಂಡಿತ್ತು ಎಂದು ಅವರು ಹೇಳಿದ್ದಾರೆ.
ಇದು ಬಹಿರಂಗವಾಗಿರುವುದು ವಿಕಿಲೀಕ್ಸ್ ರಹಸ್ಯ ದಾಖಲೆಗಳಲ್ಲಿ. ಭಾರತದಲ್ಲಿನ ಅಮೆರಿಕಾದ ಆಗಿನ ರಾಯಭಾರಿ ಡೇವಿಡ್ ಮುಲ್ಫೋರ್ಡ್ ಮುಂಬೈ ದಾಳಿ ಬಳಿಕದ ಪರಿಸ್ಥಿತಿಯನ್ನು ತನ್ನ ದೇಶಕ್ಕೆ ವಿವರಿಸಿದ್ದರು. ಸಂಸತ್ ಚುನಾವಣೆ ಹಿನ್ನೆಲೆಯಲ್ಲಿ ಮುಂಬೈ ದಾಳಿಯನ್ನು ಕಾಂಗ್ರೆಸ್ ಪಕ್ಷವು ರಾಜಕೀಯ ಉದ್ದೇಶಕ್ಕೆ (ಕೋಮುವಾದ) ಬಳಸಿಕೊಳ್ಳುತ್ತಿದೆ ಎಂದು ತಿಳಿಸಿದ್ದರು.
ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಹಿಂದುತ್ವ ಶಕ್ತಿಗಳು ಭಾಗಿಯಾಗಿರುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ಮುಂದಾಳುತ್ವದ ಒಂದು ಗುಂಪಿನ ನಾಯಕರಲ್ಲೊಬ್ಬರಾಗಿದ್ದ ಎ.ಆರ್. ಅಂತುಲೆ ಆರೋಪಿಸಿದ್ದರು. ಇದರ ಹಿಂದಿನ ಉದ್ದೇಶ ರಾಜಕೀಯ ಲಾಭ ಪಡೆಯುವುದಾಗಿತ್ತು ಎಂದು ಡೇವಿಡ್ ತನ್ನ ವರದಿಯಲ್ಲಿ ಅಮೆರಿಕಾಕ್ಕೆ ತಿಳಿಸಿದ್ದರು.
ಆಗಿನ ಅಲ್ಪಸಂಖ್ಯಾತ ಸಚಿವರಾಗಿದ್ದ ಅಂತುಲೆ ಹೇಳಿಕೆ ನೀಡಿದ್ದ ಎರಡು ದಿನಗಳ ಬಳಿಕ, ಅದರಿಂದ ಹಿಂದಕ್ಕೆ ಸರಿದಿದ್ದ ಕಾಂಗ್ರೆಸ್ ತದ್ವಿರುದ್ಧ ಹೇಳಿಕೆ ನೀಡಿತ್ತು. ಮುಂಬೈ ದಾಳಿ ವ್ಯವಸ್ಥಿತಿ ಪಿತೂರಿ ಎಂಬುದರಲ್ಲಿ ತನಗೆ ಯಾವುದೇ ಸಂಶಯವಿಲ್ಲ ಎಂದಿತ್ತು. ಯಾವುದೇ ಪುರಾವೆಗಳಿಲ್ಲದೆ ಹೇಳಿಕೆ ನೀಡಿದ್ದ ಅಂತುಲೆಯವರು ಈ ಸಂದರ್ಭದಲ್ಲಿ ಭಾರತದ ಮುಸ್ಲಿಂ ಸಮುದಾಯದಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದ್ದರು ಎಂದು 2008ರ ಡಿಸೆಂಬರ್ 23ರಂದು ವಿದೇಶಾಂಗ ಇಲಾಖೆಗೆ ಕಳುಹಿಸಿರುವ ದಾಖಲೆಯಲ್ಲಿ ಡೇವಿಡ್ ಹೇಳಿದ್ದರು.
ಮುಂಬರುವ ರಾಷ್ಟ್ರೀಯ ಚುನಾವಣೆಗಳಲ್ಲಿ ಬೆಂಬಲ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಇಂತಹ ತಂತ್ರಕ್ಕೆ ಮುಂದಾಗಿತ್ತು. ಆದರೆ ಬಳಿಕ ತನ್ನ ಮೂಲ ಹೇಳಿಕೆಯಿಂದ ಹಿಂದಕ್ಕೆ ಸರಿದು, ಪಿತೂರಿ ಎಂಬ ನೆಲೆಗೆ ಅಂಟಿಕೊಂಡಿತು. ಅಂತುಲೆಯವರ ಹೇಳಿಕೆಯನ್ನು ಗೃಹಸಚಿವ ಪಿ. ಚಿದಂಬರಂ ಸಂಪೂರ್ಣವಾಗಿ ಅಲ್ಲಗಳೆದ ಹೊರತಾಗಿಯೂ, ಭಾರತದ ಮುಸ್ಲಿಂ ಸಮುದಾಯವು ಅಸಮಾಧಾನಕ್ಕೊಳಗಾಗುತ್ತಿದೆ. ಕಾನೂನು ತಮ್ಮನ್ನು ಅನ್ಯಾಯವಾಗಿ ಗುರಿ ಮಾಡುತ್ತಿದೆ ಮತ್ತು ಸತ್ಯವನ್ನು ಮರೆ ಮಾಚಲಾಗುತ್ತಿದೆ ಎಂದು ನಂಬುತ್ತಿದ್ದಾರೆ ಎಂದು ವಿವರಣೆ ನೀಡಿದ್ದರು.
ಕಾಂಗ್ರೆಸ್ ಪಕ್ಷವು ತನ್ನ ಹಳೆಯ ಜಾತಿ-ಧರ್ಮಾಧರಿತ ರಾಜಕೀಯವನ್ನು ತನಗೆ ಲಾಭವಾಗುತ್ತದೆ ಎಂಬುದಾದರೆ ಬಳಸಿಕೊಳ್ಳಲು ಸಿದ್ಧವಿದೆ ಎನ್ನುವುದು ಈ ಒಟ್ಟಾರೆ ಪ್ರಸಂಗವು ತೋರಿಸಿದೆ ಎಂದು ರಾಯಭಾರಿ ಡೇವಿಡ್ ಆರೋಪಿಸಿದ್ದರು ಎಂದು ವಿಕಿಲೀಕ್ಸ್ ಬಹಿರಂಗಪಡಿಸಿರುವ ದಾಖಲೆ ತಿಳಿಸಿದೆ.
ಮುಂಬೈ ದಾಳಿಯಲ್ಲಿ ಹುತಾತ್ಮರಾದ ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆಯವರು, ದಾಳಿಗೆ ಎರಡು ಗಂಟೆ ಮೊದಲು ನನಗೆ ಕರೆ ಮಾಡಿದ್ದರು. ಅವರಿಗೆ ಹಿಂದೂ ಭಯೋತ್ಪಾದಕರಿಂದ ಜೀವ ಬೆದರಿಕೆ ಇದೆ ಎಂದು ಹೇಳಿದ್ದರು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಶನಿವಾರ ಹೇಳಿಕೆ ನೀಡಿರುವ ಹೊತ್ತಿಗೆ ವಿಕಿಲೀಕ್ಸ್ ದಾಖಲೆಗಳು ಬಹಿರಂಗವಾಗಿರುವುದು ಭಾರೀ ಮಹತ್ವ ಪಡೆದುಕೊಂಡಿವೆ.
ಈ ಬಗ್ಗೆಯೂ ರಾಯಭಾರಿ ಡೇವಿಡ್ ದಾಖಲೆಯಲ್ಲಿ ಪ್ರಸ್ತಾಪಿಸಿದ್ದಾರೆ. 'ಹೇಮಂತ್ ಕರ್ಕರೆ ಮತ್ತು ಇತರ ಉನ್ನತ ಅಧಿಕಾರಿಗಳು ದಾಳಿಯಲ್ಲಿ ಆಕಸ್ಮಿಕವಾಗಿ ಬಲಿಯಾದರೂ, ಕಾಂಗ್ರೆಸ್ ಪಕ್ಷವು ಅಂತುಲೆಯವರ ಹೀನ ಹೇಳಿಕೆಯನ್ನು ಆರಂಭದಲ್ಲಿ ಸರಿ ಎಂದು ಸಮರ್ಥಿಸಿಕೊಂಡಿತ್ತು' ಎಂದಿದ್ದಾರೆ.