ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಫ್ಜಲ್ ಗುರುವನ್ನು ತಕ್ಷಣವೇ ಗಲ್ಲಿಗೇರಿಸಿ; ಬಿಟ್ಟಾ ಆಗ್ರಹ (Afzal Guru | M S Bitta | Parliament attack | Supreme Court)
ಅಫ್ಜಲ್ ಗುರುವನ್ನು ತಕ್ಷಣವೇ ಗಲ್ಲಿಗೇರಿಸಿ; ಬಿಟ್ಟಾ ಆಗ್ರಹ
ನವದೆಹಲಿ, ಶನಿವಾರ, 11 ಡಿಸೆಂಬರ್ 2010( 17:52 IST )
2001ರಲ್ಲಿ ನಡೆದ ಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರುವನ್ನು ತಕ್ಷಣವೇ ಗಲ್ಲಿಗೇರಿಸಬೇಕು. ಈ ವಿಷಯದ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸಬೇಕು ಎಂದು ಅಖಿಲ ಭಾರತ ಭಯೋತ್ಪಾದನಾ ವಿರೋಧಿ ವೇದಿಕೆಯ ಅಧ್ಯಕ್ಷ ಎಂ.ಎಸ್. ಬಿಟ್ಟಾ ಆಗ್ರಹಿಸಿದ್ದಾರೆ.
13-12-2001ರಂದು ನಡೆದಿದ್ದ ಸಂಸತ್ ದಾಳಿಯಲ್ಲಿ ಹುತಾತ್ಮರಾದ ಕುಟುಂಬದವರು ಭಾಗವಹಿಸಿದ್ದ ಪ್ರತಿಭಟನಾ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ರೀತಿಯಲ್ಲೂ ತಡಮಾಡದೆ ಅಫ್ಜಲ್‌ನನ್ನು ಗಲ್ಲಿಗೇರಿಸುವ ಮೂಲಕ ಸರ್ಕಾರ ತನ್ನ ಜವಾಬ್ದಾರಿಯನ್ನು ತೋರಿಸಬೇಕು ಎಂದರು.
ಭಯೋತ್ಪಾದಕರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, 26/11ರ ಮುಂಬೈ ದಾಳಿ, ವಾರಣಾಸಿ ದಾಳಿಯಂತ ಘಟನೆಗಳು ನಡೆಯುತ್ತಲೇ ಇದೆ. ಆದರೆ ಭಯೋತ್ಪಾದಕರ ವಿರುದ್ಧ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದ ಅವರು, ಇದೇ ತಿಂಗಳ 13ರಂದು ಪಾತಕಿ ಅಫ್ಜಲ್‌ನನ್ನು ಗಲ್ಲಿಗೇರಿಸುವ ಮೂಲಕ ಸುಪ್ರಿಂ ಕೋರ್ಟ್‌ನ ತೀರ್ಪನ್ನು ಸರ್ಕಾರ ಶೀಘ್ರವಾಗಿ ಪಾಲಿಸಬೇಕು ಎಂದರು.
ಸಂಸತ್ ಮೇಲಿನ ದಾಳಿಗೆ ಸಂಬಂಧಿಸಿದಂತೆ, ದೇಶದ ಮೇಲೆ ಯುದ್ಧ ಸಾರಿರುವುದು ಮತ್ತು ಕೊಲೆ ಆರೋಪದಡಿ ಭಯೋತ್ಪಾದಕ ಅಫ್ಜಲ್ ಗುರುವಿಗೆ ದೆಹಲಿಯ ನ್ಯಾಯಾಲಯವೊಂದು 2002ರ ಡಿಸೆಂಬರ್ 18ರಂದು ಗಲ್ಲು ಶಿಕ್ಷೆ ಪ್ರಕಟಿಸಿತ್ತು.
29 ಅಕ್ಟೋಬರ್ 2003ರಂದು ದೆಹಲಿ ಹೈಕೋರ್ಟ್ ಮರಣ ದಂಡನೆ ತೀರ್ಪನ್ನು ಎತ್ತಿಹಿಡಿಯಿತು. ಈ ತೀರ್ಪನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ಆಗಸ್ಟ್ 4, 2005ರಂದು ತಿರಸ್ಕೃತಗೊಂಡಿತು. ಪ್ರಸಕ್ತ ಅಫ್ಜಲ್ ಕುಟುಂಬವು ಸಲ್ಲಿಸಿರುವ ಅರ್ಜಿ ರಾಷ್ಟ್ರಪತಿಯವರ ಬಳಿ ಕ್ಷಮಾದಾನಕ್ಕಾಗಿ ಕಾಯುತ್ತಿದೆ.
ಪಾಕಿಸ್ತಾನ ಮೂಲದ ಭಯೋತ್ಪಾದಕರು ನಡೆಸಿದ ಈ ದಾಳಿಯಲ್ಲಿ ಐವರು ಪೋಲೀಸರು ಸೇರಿದಂತೆ ಒಂಬತ್ತು ಮಂದಿ ರಕ್ಷಣಾ ಸಿಬ್ಬಂದಿ ಬಲಿಯಾಗಿದ್ದರು.