ರಾಜ್ಯದಲ್ಲಿ ತೀವ್ರ ವಿವಾದಕ್ಕೊಳಗಾಗಿದ್ದ ಮಡೆಸ್ನಾನ ಸೇವೆ (ಉರುಳು ಸೇವೆ) ವಿರುದ್ಧ ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಧ್ವನಿ ಎತ್ತಿದ್ದು, ಕರ್ನಾಟಕದ ವಿವಿಧ ದೇವಸ್ಥಾನಗಳಲ್ಲಿ ಚಾಲ್ತಿಯಲ್ಲಿರುವ ಮಡೆಸ್ನಾನ ನಿಷೇಧಿಸುವಂತೆ ಆಗ್ರಹಿಸಿದ್ದಾರೆ.
ಬೇಡಿಕೆ ಈಡೇರಿಕೆಗಾಗಿ ಹರಕೆ ಹೊತ್ತು ಮಡೆಸ್ನಾನ ಮಾಡುವ ಪದ್ಧತಿ ಅಮಾನವೀಯ ಹಾಗೂ ಅವಮಾನಕರ ಎಂದು ತಿಳಿಸಿರುವ ಅವರು, ಮಡೆಸ್ನಾನ ಪದ್ಧತಿಯಲ್ಲಿ ಉಂಡ ಎಲೆಗಳ ಮೇಲೆ ದಲಿತರು ಉರುಳುತ್ತಾರೆ. ಇದರಿಂದ ಅವರಿಗೆ ಚರ್ಮ ರೋಗ ಬರುವ ಭೀತಿ ಇದೆ ಎಂದು ಖಾಸಗಿ ಸುದ್ದಿವಾಹಿನಿ ಜತೆ ಮಾತನಾಡಿದ ಸಂದರ್ಭದಲ್ಲಿ ತಿಳಿಸಿದ್ದಾರೆ.
ದಲಿತರು ದೇವಸ್ಥಾನದ ಹೊರಗೆ ಮಡೆಸ್ನಾನ ಮಾಡುತ್ತಿರುವುದು ಕರ್ನಾಟಕದಲ್ಲಿ ಕಂಡುಬರುತ್ತಿದೆ. ಈ ಪದ್ಧತಿಯು ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂಬುದಾಗಿಯೂ ಮಾಯಾ ಆರೋಪಿಸಿದ್ದಾರೆ.
ಕೆಲವು ಪ್ರತಿಭಟನೆ ನಡೆವೆಯೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಡೆಸ್ನಾನ ಸೇವೆ ಸಾಂಗವಾಗಿ ನೆರವೇರಿತ್ತು. ಅದೂ ನಿವೃತ್ತ ನ್ಯಾಯಾಧೀಶ, ವೈದ್ಯ, ಎಂಜಿನಿಯರ್, ಪೊಲೀಸರೂ ಸೇವೆ ಸಲ್ಲಿಸಿದ್ದು, ಪ್ರತಿಭಟನೆಗೆ ಭಕ್ತರಿಂದಲೇ ವಿರೋಧ ವ್ಯಕ್ತವಾಗಿತ್ತು. ನಾವು ಇದನ್ನು ನಮ್ಮ ಮನಶಾಂತಿಗಾಗಿ ಮಾಡುತ್ತಿದ್ದೇವೆ. ಯಾರ ಒತ್ತಾಯಕ್ಕೊಳಗಾಗಿ ಮಾಡುವುದಿಲ್ಲ ಎಂದು ಭಕ್ತರು ಪ್ರತಿಭಟನಾಕಾರರ ಮೇಲೆ ಹರಿಹಾಯ್ದಿದ್ದರು.