ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಜೆಪಿ-ಕಾಂಗ್ರೆಸ್ ಪ್ರತಿಷ್ಠೆಯಿಂದ ದೇಶಕ್ಕೆ 146 ಕೋಟಿ ನಷ್ಟ!
(Disruption of Parliament | Winter session | Lok Sabha | Congress)
ಬಿಜೆಪಿ-ಕಾಂಗ್ರೆಸ್ ಪ್ರತಿಷ್ಠೆಯಿಂದ ದೇಶಕ್ಕೆ 146 ಕೋಟಿ ನಷ್ಟ!
ನವದೆಹಲಿ, ಮಂಗಳವಾರ, 14 ಡಿಸೆಂಬರ್ 2010( 11:27 IST )
2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಬಗ್ಗಬೇಕು ಎಂದು ಬಿಜೆಪಿ, ಎನ್‌ಡಿಎ ಮುಂತಾದ ಯುಪಿಎಯೇತರ ಪಕ್ಷಗಳು ಸೋಲಬೇಕು ಎಂದು ಕೇಂದ್ರ ಸರಕಾರ -- ಇವೆರಡರಲ್ಲಿ ಯಾರೂ ಸೋಲಲಿಲ್ಲ. ಸೋತವರು ಜನತೆ. 24 ದಿನಗಳ ಕಾಲ ನಡೆಯಬೇಕಿದ್ದ ಸಂಸತ್ತಿನ ಚಳಿಗಾಲದ ಅಧಿವೇಶನ ಒಂದು ದಿನವೂ ಸರಿಯಾಗಿ ನಡೆಯದ ಪರಿಣಾಮ 147 ಕೋಟಿ ರೂಪಾಯಿಗಳ ನಷ್ಟ.
ನವೆಂಬರ್ ಒಂಬತ್ತರಂದು ಆರಂಭವಾಗಿದ್ದ ಸಂಸತ್ತಿನ ಚಳಿಗಾಲದ ಅಧಿವೇಶನ ನಿನ್ನೆ (ಡಿಸೆಂಬರ್ 13) ಕೊನೆಗೊಂಡಿದೆ. ಈ ಸಂದರ್ಭದಲ್ಲಿ ಸಂಸತ್ ಕಾರ್ಯನಿರ್ವಹಿಸಬೇಕಾಗಿದ್ದ ಒಟ್ಟು ದಿನಗಳು 24. ಆದರೆ ಆರಂಭಿಕ ದಿನವೊಂದನ್ನು ಹೊರತುಪಡಿಸಿ, ಉಳಿದ ಯಾವುದೇ ದಿನ ಸಂಸತ್ತಿನ ಉಭಯ ಸದನಗಳಲ್ಲಿ ಕಲಾಪ ಸಮರ್ಪಕವಾಗಿ ನಡೆದಿಲ್ಲ.
ಅಂದರೆ ಒಟ್ಟು 23 ದಿನಗಳ ಕಲಾಪ ವ್ಯರ್ಥವಾಗಿದೆ. ಸರಕಾರ ಪ್ರತಿದಿನ ಉಭಯ ಸದನಗಳ ಕಲಾಪಕ್ಕೆ ಮಾಡುವ ಸರಾಸರಿ ವೆಚ್ಚ 6.35 ಕೋಟಿ ರೂಪಾಯಿಗಳು. ಅಂದರೆ ಒಟ್ಟು 146.05 ಕೋಟಿ ರೂಪಾಯಿ ನೀರಲ್ಲಿಟ್ಟ ಹೋಮವಾಗಿದೆ.
ಅಧಿಕೃತ ಮಾಹಿತಿಗಳ ಪ್ರಕಾರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಲೋಕಸಭೆಯ ಕಲಾಪಕ್ಕೆ 347.65 ಕೋಟಿ ರೂ. ಹಾಗೂ ರಾಜ್ಯಸಭೆಯ ಕಲಾಪಕ್ಕೆ 172.33 ಕೋಟಿ ರೂ.ಗಳನ್ನು ಸರಕಾರ ಮೀಸಲಿಟ್ಟಿದೆ.
ಜತೆಗೆ ಸಂಸತ್ತು ಸಮರ್ಪಕವಾಗಿ ಕಾರ್ಯನಿರ್ವಹಿಸುವುದನ್ನು ಖಾತ್ರಿಪಡಿಸುವ ಹೊಣೆಗಾರಿಕೆ ಹೊಂದಿರುವ ಸಂಸದೀಯ ವ್ಯವಹಾರಗಳ ಖಾತೆಗೆ 7.47 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಅಂದರೆ ಒಟ್ಟು 527.45 ಕೋಟಿ ರೂಪಾಯಿಗಳನ್ನು ಕೇವಲ ಅಧಿವೇಶನಗಳಿಗಾಗಿಯೇ ಭಾರತ ವಾರ್ಷಿಕವಾಗಿ ಮೀಸಲಿಡುತ್ತಿದೆ.
ಇದರಲ್ಲಿ ಸಂಸದರು, ರಾಜ್ಯಸಭಾ ಸದಸ್ಯರು ಮತ್ತು ಉಭಯ ಸದನಗಳ ಸ್ಪೀಕರುಗಳ ವೇತನ, ಇತರ ಭತ್ಯೆಗಳು, ಸದಸ್ಯರ ವಿದೇಶ ಪ್ರಯಾಣದ ವೆಚ್ಚಗಳು, ವಿದೇಶಿ ನಿಯೋಗಗಳೊಂದಿಗಿನ ಮಾತುಕತೆಯ ವೆಚ್ಚಗಳೂ ಸೇರಿವೆ.
ವರ್ಷದಲ್ಲಿ ಸಂಸತ್ತು ಸೇರುವುದು ಒಟ್ಟು ಮೂರು ಬಾರಿ. ಬಜೆಟ್ ಅಧಿವೇಶನ, ಮಳೆಗಾಲದ ಅಧಿವೇಶನ ಮತ್ತು ಚಳಿಗಾಲದ ಅಧಿವೇಶ ಎಂಬ ಮೂರು ಹೆಸರಿನಲ್ಲಿ ಅಧಿವೇಶನ ನಡೆಯುತ್ತದೆ. ಒಂದು ಆರ್ಥಿಕ ವರ್ಷದಲ್ಲಿ ಉಭಯ ಸದನಗಳು ಒಟ್ಟು 83 ದಿನಗಳ ಕಲಾಪಗಳನ್ನು ನಡೆಸಬೇಕು. ಇದರಲ್ಲಿ ಬಜೆಟ್ ಅಧಿವೇಶನಕ್ಕೆ 35 ದಿನಗಳು, ಮಳೆಗಾಲದ ಅಧಿವೇಶನಕ್ಕೆ ಮತ್ತು ಚಳಿಗಾಲದ ಅಧಿವೇಶನಕ್ಕೆ ತಲಾ 24 ದಿನಗಳನ್ನು ಮೀಸಲಿಡಲಾಗುತ್ತದೆ.
2ಜಿ ಹಗರಣದಲ್ಲಿ 1.76 ಲಕ್ಷ ಕೋಟಿ ರೂಪಾಯಿಗಳ ನಷ್ಟವಾಗಿದೆ ಎಂಬುದನ್ನು ತನಿಖೆಗೆ ಒಳಪಡಿಸುವ ನಿಟ್ಟಿನಲ್ಲಿ ಬೊಕ್ಕಸಕ್ಕೆ 146 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ ಎಂದರೆ, ಹಗರಣಗಳ ಕಥೆಯೇನಿರಬಹುದು? ನೀವೇ ಯೋಚಿಸಿ?