ತಿರುವನಂತಪುರಂ, ಮಂಗಳವಾರ, 14 ಡಿಸೆಂಬರ್ 2010( 13:22 IST )
ಶಬರಿಮಲೆ ಅಯ್ಯಪ್ಪ ದೇವಳದ ವಿವಾದಿತ ಪ್ರವೇಶಕ್ಕೆ ಸಂಬಂಧಪಟ್ಟಂತೆ ಚಿತ್ರನಟಿ ಜಯಮಾಲಾ ಅವರ ನೈಜ ಸಂಕಟದ ದಿನಗಳು ಆರಂಭವಾಗಿವೆ. ಪ್ರಕರಣದಲ್ಲಿ ಮೂರನೇ ಆರೋಪಿ ಎಂದು ಹಬ್ಬಿದ್ದ ಸುದ್ದಿ ನಿಜವಾಗಿದೆ.
ಇಲ್ಲಿನ ಪಟ್ಟನಂತಿಟ್ಟ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪೊಲೀಸರು ಆರೋಪಪಟ್ಟಿ ದಾಖಲಿಸಿದ್ದಾರೆ. ಇದರಲ್ಲಿ ಜಯಮಾಲಾ ಅರನ್ನು ಮೂರನೇ ಆರೋಪಿ ಎಂದು ಹೆಸರಿಸಲಾಗಿದೆ.
MOKSHA
ನಾಲ್ಕು ವರ್ಷಗಳ ಹಿಂದೆ ಬೆಳಕಿಗೆ ಬಂದಿದ್ದ ದೇಗುಲ ಅಕ್ರಮ ಪ್ರವೇಶ ಪ್ರಕರಣದಲ್ಲಿ ಜಯಮಾಲಾರನ್ನು ಮೂರನೇ ಆರೋಪಿಯನ್ನಾಗಿ ಮಾಡಿ ದೋಷಾರೋಪ ಪಟ್ಟಿಯನ್ನು ಕೇರಳ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎಂದು ಕಳೆದೊಂದು ತಿಂಗಳಿನಿಂದ ಸುದ್ದಿ ಹಬ್ಬಿತ್ತು. ಈ ಸಂಬಂಧ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದ ಜಯಮಾಲಾ, ಪ್ರಯಾಣ ಕಾಲದ ಅರ್ಜಿ (ಬಂಧಿಸದಂತೆ ತಡೆ) ಸಲ್ಲಿಸಿದ್ದರು.
ಆದರೆ ತಾವು ಜಯಮಾಲಾ ಅವರನ್ನು ಬಂಧಿಸುವುದಿಲ್ಲ ಎಂದು ಕೇರಳ ಪೊಲೀಸರು ಪ್ರಮಾಣಪತ್ರ ಸಲ್ಲಿಸಿದ್ದರಿಂದ, ಪ್ರಯಾಣ ಕಾಲದ ಅರ್ಜಿಯ ಅಗತ್ಯವಿಲ್ಲ ಎಂದು ಕೋರ್ಟ್ ಹೇಳಿತ್ತು.
ಅಕ್ರಮ ಪ್ರವೇಶ ಪ್ರಕರಣವಿದು... 2006ರ ಜೂನ್ ತಿಂಗಳಲ್ಲಿ ಶಬರಿಮಲೆಯಲ್ಲಿ ಜ್ಯೋತಿಷಿ ಉಣ್ಣಿಕೃಷ್ಣನ್ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆ ಕೇಳಲಾಗಿತ್ತು. ಅಯ್ಯಪ್ಪ ವಿಗ್ರಹವನ್ನು ಮಹಿಳೆಯೊಬ್ಬಳು ಸ್ಪರ್ಶಿಸಿದ್ದಾರೆ, ಹಾಗಾಗಿ ದೇಗುಲ ಅಪವಿತ್ರಗೊಂಡಿದೆ ಎಂದು ಈ ಸಂದರ್ಭದಲ್ಲಿ ತಿಳಿದು ಬಂದಿತ್ತು.
ಕೆಲ ಸಮಯದ ನಂತರದ ಶಬರಿಮಲೆಗೆ ಪತ್ರ ಬರೆದಿದ್ದ ಜಯಮಾಲಾ, ಅಯ್ಯಪ್ಪ ವಿಗ್ರಹವನ್ನು ಸ್ಪರ್ಶಿಸಿದ್ದು ತಾನೇ ಎಂದು ತಪ್ಪೊಪ್ಪಿಗೆ ನೀಡಿದ್ದರು. ಅಲ್ಲದೆ ಕ್ಷಮೆ ಯಾಚಿಸಿದ್ದರು. ಬಳಿಕ ಪ್ರಕರಣ ಭಾರೀ ಸುದ್ದಿ ಮಾಡಿತ್ತು.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಎಸಗಲಾಗಿದೆ ಎಂದು ಕೊಚ್ಚಿ ಪೊಲೀಸರು ಜಯಮಾಲಾ ಸೇರಿದಂತೆ ಇತರ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದರು. ಇದೀಗ ಜಯಮಾಲಾ ಸೇರಿದಂತೆ ಇತರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.