ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿ ನಡೆದಿರುವ 1.76 ಲಕ್ಷ ಕೋಟಿ ರೂಪಾಯಿ ಮೊತ್ತದ 2ಜಿ ಹಗರಣದ ಕುರಿತು 'ಪ್ರತಿಪಕ್ಷಗಳು ಒಂದು' ಎಂಬ ತತ್ವಕ್ಕೆ ಜಾತ್ಯತೀತ ಜನತಾದಳ ರಾಷ್ಟ್ರಾಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಎಳ್ಳುನೀರು ಬಿಟ್ಟಿದ್ದಾರೆ. ಕೇಂದ್ರದ ಹಗರಣಕ್ಕಿಂತ ಕರ್ನಾಟಕದ ಹಗರಣ ದೊಡ್ಡದು ಎಂದು ಗುಡುಗಿದ್ದಾರೆ.
ಬಿಜೆಪಿ ಮೇಲೆ ನೇರವಾಗಿ ದಾಳಿ ನಡೆಸಿರುವ ಗೌಡರು, ಮುಂದಿನ ದಿನಗಳಲ್ಲಿ ಸಂಸತ್ ಕಲಾಪ ಸುಗಮವಾಗಿ ನಡೆಯಲು ಸಾಧ್ಯವಾಗದೇ ಇದ್ದರೆ ಲೋಕಸಭೆ ಚುನಾವಣೆ ನಡೆಯುವುದೇ ಉತ್ತಮ ಎಂದಿದ್ದಾರೆ.
NRB
ಕರ್ನಾಟಕದ ಬಿಜೆಪಿ ಸರಕಾರ ಎಸಗಿರುವ ಭೂ ಹಗರಣವು 2ಜಿ ತರಂಗಾಂತರ ಹಂಚಿಕೆ ಹಗರಣಕ್ಕಿಂತ ದೊಡ್ಡದು. ಆದರೆ ಪ್ರಮುಖ ಪ್ರತಿಪಕ್ಷವು ಚಳಿಗಾಲದ ಸಂಸತ್ ಅಧಿವೇಶನವನ್ನು ನಡೆಯಲು ಬಿಡದೆ, ಭೂ ಹಗರಣದ ಚರ್ಚೆಯನ್ನು ತಪ್ಪಿಸಿಕೊಂಡಿದೆ ಎಂದು ಆರೋಪಿಸಿದರು.
ಮುಂಬರುವ ಬಜೆಟ್ ಅಧಿವೇಶನವನ್ನು ಕೂಡ ಇದೇ ರೀತಿ ಮಾಡುವುದಕ್ಕೆ ನಾವು ಬೆಂಬಲ ನೀಡುವುದಿಲ್ಲ. ಇದನ್ನು ನಾನು ಕಳೆದ ವಾರ ನಡೆದ ಎನ್‌ಡಿಎಯೇತರ ಮತ್ತು ಯುಪಿಎಯೇತರ 11 ಪಕ್ಷಗಳ ಸಭೆಯಲ್ಲಿ ಹೇಳಿದ್ದೇನೆ. ನನ್ನ ಮನವಿಯನ್ನು ಎಡಪಕ್ಷಗಳು ಮತ್ತು ಇತರರು ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ನಂಬಿದ್ದೇನೆ ಎಂದರು.
ತನ್ನ ಮಾತಿನುದ್ದಕ್ಕೂ ಬಿಜೆಪಿಯನ್ನೇ ಗೌಡರು ಗುರಿ ಮಾಡಿದರು. 'ಸಂಸತ್ ಕಲಾಪವನ್ನು ಈ ರೀತಿಯಾಗಿ ಕೊನೆಯಿಲ್ಲದಂತೆ ಬಿಕ್ಕಟ್ಟಿಗೆ ಸಿಲುಕಿಸಬಾರದು ಎಂದು ಕೇಂದ್ರದಲ್ಲಿ ಆರು ವರ್ಷಗಳ ಕಾಲ ಆಡಳಿತ ನಡೆಸಿರುವ ಎನ್‌ಡಿಎಗೆ ಗೊತ್ತಿರಬೇಕಿತ್ತು. ಮುಂದೆಯೂ ಇದೇ ರೀತಿ ಮುಂದುವರಿದಲ್ಲಿ ಲೋಕಸಭೆಯನ್ನು ವಿಸರ್ಜಿಸಿ, ಚುನಾವಣೆಗೆ ಹೋಗುವುದು ಉತ್ತಮ' ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ಇಬ್ಬಗೆಯ ನೀತಿ ಪ್ರದರ್ಶಿಸುತ್ತಿದೆ. ಒಂದು ಕಡೆಯಿಂದ 2ಜಿ ಹಗರಣದ ಕುರಿತು ಹುಯಿಲೆಬ್ಬಿಸುತ್ತಾ, ತೀವ್ರ ಪ್ರತಿಭಟನೆ ನಡೆಸುತ್ತಾರೆ. ಅದರ ಜೆಪಿಸಿ ತನಿಖೆ ನಡೆಯಬೇಕು ಎಂದು ಹೇಳುತ್ತಾರೆ. ಆದರೆ ಕರ್ನಾಟಕದಲ್ಲಿನ ಅಕ್ರಮಗಳ ಕುರಿತ ವಿಚಾರ ಬಂದಾಗ ಬೇರೆಯದೇ ಮಾತನಾಡುತ್ತಾರೆ ಎಂದು ಆರೋಪಿಸಿದರು.
2ಜಿ ಹಗರಣಕ್ಕಿಂತ ಕರ್ನಾಟಕದ ಹಗರಣ ದೊಡ್ಡದು. ಬೆಂಗಳೂರು ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರಾಜೆಕ್ಟ್ ಸೇರಿದಂತೆ ಭೂ ಹಗರಣಗಳನ್ನು ನಾನು ಸಾಕಷ್ಟು ಬಾರಿ ಎತ್ತಿದ್ದೇನೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಗೌಡರು ಒತ್ತಾಯಿಸಿದರು.
ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 50,000 ಕೋಟಿ ರೂಪಾಯಿಗಳಿಗೂ ಹೆಚ್ಚು ಅಕ್ರಮಗಳಲ್ಲಿ ಭಾಗಿಯಾಗಿದ್ದು, ಈ ಕುರಿತು ಕೇಂದ್ರದ ಸಂಬಂಧಪಟ್ಟ ಎಲ್ಲಾ ತನಿಖಾ ದಳಗಳು ತನಿಖೆ ನಡೆಸಬೇಕು ಎಂದು ನೇರವಾಗಿ ಆಪಾದಿಸಿದರು.