ಕರ್ನಾಟಕ ರಾಜ್ಯ ರಾಜಕಾರಣದ ಬಗ್ಗೆ ಏನೂ ಪ್ರತಿಕ್ರಿಯೆ ನೀಡಲಾರೆ ಎಂದಿದ್ದ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಇದೀಗ, ಬಹುಕೋಟಿ ರೂಪಾಯಿ ಮೌಲ್ಯದ ನಿವೇಶನವನ್ನು ತಮ್ಮ ಕುಟುಂಬ ವರ್ಗಗಳಿಗೆ ಹಂಚಿ ಸ್ವಜನಪಕ್ಷಪಾತ ಮಾಡಿರುವ ಪ್ರಕರಣವನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಪಕ್ಷ ಪರಿಣಾಮಕಾರಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಪಕ್ಷ ಸೂಕ್ಷ್ಮವಾಗಿ ಗಮನಿಸುತ್ತಿದೆ. ಅಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅವರು ಮಂಗಳವಾರ 2ಜಿ ಸ್ಪೆಕ್ಟ್ರಂ ಹಗರಣದ ತನಿಖೆಗೆ ಜೆಪಿಸಿ ರಚಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ತಿಳಿಸಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ನನ್ನ ವಿಶ್ವಾಸಾರ್ಹತೆ ಬಗ್ಗೆ ನಾನು ಚಿಂತಿತನಾಗಿದ್ದೇನೆ. ಅದನ್ನು ಉಳಿಸಿಕೊಳ್ಳಲು ಭ್ರಷ್ಟಾಚಾರ ಪ್ರಕರಣವನ್ನು ಪರಿಣಾಮಕಾರಿಯಾಗಿ ನಿಭಾಯಿಸಲಾಗುತ್ತದೆ ಎಂದು ಅಡ್ವಾಣಿ ಹೇಳಿದರು.
ಇತ್ತೀಚೆಗಷ್ಟೇ ಉಡುಪಿಗೆ ಆಗಮಿಸಿದ್ದ ಸಂದರ್ಭದಲ್ಲಿ, ರಾಜ್ಯ ರಾಜಕಾರಣದ ಬಗ್ಗೆ ಹಾಗೂ ಲೋಕಾಯುಕ್ತ ಸಂತೋಷ್ ಹೆಗ್ಡೆ ಕುರಿತು ಪ್ರತಿಕ್ರಿಯೆಗೆ ನಿರಾಕರಿಸಿದ್ದರು. ಈಗಾಗಲೇ ಪಕ್ಷದ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಪರಾಮರ್ಶಿಸಿದ್ದಾರೆ. ಹಾಗಾಗಿ ಆ ಬಗ್ಗೆ ಮಾತನಾಡಲಾರೆ ಎಂದು ಅಡ್ವಾಣಿ ಉತ್ತರ ನೀಡದೆ ಜಾರಿಕೊಂಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಅದೇ ರೀತಿ ಪಕ್ಷದ ರಾಷ್ಟ್ರೀಯ ನಿತಿನ್ ಗಡ್ಕರಿ ಅವರು ಕರ್ನಾಟಕಕ್ಕೆ ಭೇಟಿ ನೀಡಿ ಪಕ್ಷದ ಮುಖಂಡರ ಜತೆ ಮಾತುಕತೆ ನಡೆಸಿ, ಬೆಂಗಳೂರಿನಲ್ಲಿ ಕೆಲವು ಕಾಮಗಾರಿ ಪರಿಶೀಲಿಸಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ತುಂಬಾ ಅಭಿವೃದ್ಧಿಯಾಗಿರುವುದಾಗಿ ಶ್ಲಾಘಿಸಿ ಶಬ್ಬಾಸ್‌ಗಿರಿ ಕೊಟ್ಟು ಹೋಗಿದ್ದರು.