ರಾಷ್ಟ್ರ ರಾಜಕಾರಣದಲ್ಲಿ ಕೋಲಾಹಲಹ ಎಬ್ಬಿಸಿದ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಲಾಬಿ ನಡೆಸಿರುವ ಆರೋಪ ಹೊತ್ತಿರುವ ನೀರಾ ರಾಡಿಯಾ ಮನೆ ಹಾಗೂ ಕಚೇರಿ ಸೇರಿದಂತೆ ಬುಧವಾರ ಬೆಳಿಗ್ಗೆ ಸಿಬಿಐ ದಿಢೀರ್ ದಾಳಿ ನಡೆಸಿದೆ.
ಇಂದು ಬೆಳಿಗ್ಗೆ ತಮಿಳುನಾಡು ಸೇರಿದಂತೆ ದೇಶದ 30 ಸ್ಥಳಗಳಲ್ಲಿ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಅಧಿಕಾರಿಗಳು ರಾಡಿಯಾ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸುತ್ತಿದ್ದಾರೆ.
ಚಾಟ್ಟಾರ್‌ಪುರ್‌ದಲ್ಲಿ ಇರುವ ರಾಡಿಯಾ ಫಾರ್ಮ್‌ಹೌಸ್ ಹಾಗೂ ಬಾರಾಕಾಂಬಾ ರಸ್ತೆಯಲ್ಲಿರುವ ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿದೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ. ರಾಡಿಯಾ ಅವರಿಗೆ ಸೇರಿದ ಪಿಆರ್ ಕಂಪನಿ ವೈಷ್ಣವಿ ಕಮ್ಯೂನಿಕೇಷನ್‌ನ ಆರ್ಥಿಕ ಮೂಲದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ನೀರಾ ರಾಡಿಯಾ ಕೆಲವೇ ವರ್ಷಗಳಲ್ಲಿ ಸುಮಾರು 300 ಕೋಟಿ ರೂಪಾಯಿ ವಹಿವಾಟು ನಡೆಸುವ ಹಿಂದಿನ ಮೂಲ ಯಾವುದು ಎಂಬುದರ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ.
ಅಷ್ಟೇ ಅಲ್ಲ ನೀರಾ ರಾಡಿಯಾ ಹವಾಲಾ ಜಾಲದಲ್ಲಿ ಶಾಮೀಲಾಗಿದ್ದಾರೆಯೇ ಎಂಬ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅದೇ ರೀತಿ ಈಗಾಗಲೇ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಟೆಲಿಕಾಂ ಸಚಿವ ಎ.ರಾಜಾ ತಲೆದಂಡವಾಗಿದ್ದು, ರಾಜಾ ಮತ್ತು ರಾಡಿಯಾ ಪಾತ್ರದ ಬಗ್ಗೆಯೂ ಸಿಬಿಐ ಮಾಹಿತಿ ಕಲೆ ಹಾಕುತ್ತಿದೆ.
ಏತನ್ಮಧ್ಯೆ ನೀರಾ ರಾಡಿಯಾ ಹಲವರೊಂದಿಗೆ ಲಾಬಿ ನಡೆಸಿದ ಟೇಪ್‌ಗಳ ತನಿಖೆಯೂ ಕೂಡ ಚುರುಕುಗೊಂಡಿದೆ. ರಾಡಿಯಾ ಗೂಢಾಚಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾಳೆ ಎಂಬ ಆರೋಪವೂ ಕೇಳಿ ಬಂದಿದೆ. ರಾಡಿಯಾ ಅಂತಾರಾಷ್ಟ್ರೀಯ ಗೂಢಚರ್ಯೆ ಏಜೆನ್ಸಿಗಳೊಂದಿಗೆ ಗೂಢಚಾರಿಕೆ ನಡೆಸಿರುವ ಸಾಧ್ಯತೆ ಇದೆ ಎಂದು ಶುಕ್ರವಾರ ಸರ್ಕಾರ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿತ್ತು. ಅದೇ ರೀತಿ ರಾಡಿಯಾ ಮೇಲೆ ಹೊರಿಸಿರುವ ಆರೋಪಗಳೆಲ್ಲ ಸತ್ಯಕ್ಕೆ ದೂರವಾದದ್ದು ಎಂದು ವೈಷ್ಣವಿ ಸಂಸ್ಥೆ ಹೇಳಿದೆ.
2ಜಿ ಹಗರಣದ ಕೇಂದ್ರಬಿಂದುವಾಗಿದ್ದ ನೀರಾ ರಾಡಿಯಾ ಅವರು ಉದ್ಯಮಿಗಳು, ರಾಜಕಾರಣಿಗಳು ಹಾಗೂ ಪತ್ರಕರ್ತರ ಜತೆ ನಡೆಸಿದ 800ಕ್ಕೂ ಹೆಚ್ಚು ಸಂಭಾಷಣೆಯ ಹೊಸ ತುಣುಕುಗಳನ್ನು ಔಟ್‌ಲುಕ್ ಪತ್ರಿಕೆ ಇತ್ತೀಚೆಗೆ ಬಹಿರಂಗಪಡಿಸಿತ್ತು.