ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಸಬ್‌ಗೆ ಜೀವಾವಧಿ ಸಾಕು, ಗಲ್ಲು ಶಿಕ್ಷೆ ಬೇಡ: ವಕೀಲರು
(Pakistani gunman | Ajmal Kasab | Bombay High Court | Mumbai attacks)
ಮುಂಬೈ ದಾಳಿಯಲ್ಲಿ ಪಾಲ್ಗೊಂಡು ಅಮಾನವೀಯವಾಗಿ ಕ್ರೂರ ಕೃತ್ಯ ಎಸಗಿರುವುದಕ್ಕೆ ಮರಣ ದಂಡನೆಯೇ ಸೂಕ್ತ ಎಂದು ದೇಶಕ್ಕೆ ದೇಶ ಹೇಳುತ್ತಿರುವ ಹೊರತಾಗಿಯೂ ಪಾಕಿಸ್ತಾನಿ ಉಗ್ರ ಅಜ್ಮಲ್ ಕಸಬ್‌ನನ್ನು ಗಲ್ಲಿಗೆ ಹಾಕಬೇಡಿ ಎಂದಿರುವ ಆತನ ವಕೀಲರು, ಹಾಗೆ ಮಾಡಿದಲ್ಲಿ ಆತ ಹುತಾತ್ಮನಾಗುತ್ತಾನೆ. ಜೀವಾವಧಿ ಶಿಕ್ಷೆಯೇ ಸಾಕು ಎಂದು ಒತ್ತಾಯಿಸಿದ್ದಾರೆ.
ದಾಳಿಯ ಹಿಂದಿನ ಪಿತೂರಿದಾರ ಕಸಬ್ ಅಲ್ಲ. ಭಯೋತ್ಪಾದನಾ ದಾಳಿಯ ಮೂಲಕ ಭಾರತವನ್ನು ಅಸ್ಥಿರಗೊಳಿಸುವ ತಂತ್ರದಲ್ಲೂ ಆತ ಸಕ್ರಿಯವಾಗಿ ಪಾಲ್ಗೊಂಡಿಲ್ಲ. ಆತನಿಗೆ ಮರಣ ದಂಡನೆ ವಿಧಿಸಿ ಹುತಾತ್ಮನನ್ನಾಗಿಸುವ ಬದಲು ಜೀವಾವಧಿ ಶಿಕ್ಷೆ ನೀಡುವುದು ಉತ್ತಮ ಎಂದು ಪ್ರತಿವಾದಿ ವಕೀಲರಾದ ಅಮೀನ್ ಸೋಲ್ಕರ್ ಮತ್ತು ಫರ್ಹಾನಾ ಶಾ ಬಾಂಬೆ ಹೈಕೋರ್ಟಿನಲ್ಲಿ ವಾದಿಸಿದರು.
PTI
ಕಸಬ್ ಮುಂಬೈಗೆ ಬಂದಿದ್ದೇ ಸಾಯಲು. ಆತನಿಗೆ ಮರಣ ದಂಡನೆ ವಿಧಿಸಿದರೆ ಈ ಮೂಲಕವಾದರೂ ಆತ ಹುತಾತ್ಮ ಎಂಬ ಪಟ್ಟಕ್ಕೆ ಏರುತ್ತಾನೆ. ಅದಕ್ಕೆ ನ್ಯಾಯಾಲಯವು ಅವಕಾಶ ನೀಡಬಾರದು ಎಂದರು.
ಆದರೆ ಇದನ್ನು ವಿರೋಧಿಸಿದ ಸರಕಾರಿ ವಕೀಲ ಉಜ್ವಲ್ ನಿಕ್ಕಂ, ಅಮಾಯಕ ಜನರನ್ನು ನಿಷ್ಕರುಣೆಯಿಂದ ಕೊಂದು ಹಾಕಿದ ಕಸಬ್‌ಗೆ ಮರಣ ದಂಡನೆಯೇ ಸೂಕ್ತ ಎಂದು ವಾದಿಸಿದರು.
ಮಂಬೈ ದಾಳಿ ಪಿತೂರಿಯ ಪ್ರಮುಖ ಪಾತ್ರಧಾರಿ ಕಸಬ್ ಅಲ್ಲ. ಆತನನ್ನು ಹೆಚ್ಚೆಂದರೆ ಗುತ್ತಿಗೆ ಹಂತಕ ಎಂದು ಕರೆಯಬಹುದು. ಯೋಜನೆ ರೂಪಿಸಿದ್ದು ಆತನಲ್ಲ. ಆತನ ಬ್ರೈನ್‌ವಾಶ್ ಮಾಡಿದ್ದು ಪಿತೂರಿದಾರರು ಎಂದಿರುವ ಕಸಬ್ ವಕೀಲರು, ಆತನನ್ನು ಗಲ್ಲಿಗೆ ಹಾಕಬೇಡಿ; ಜೀವನಪೂರ್ತಿ ಜೈಲಿನಲ್ಲೇ ಕಳೆಯುವಂತೆ ಮಾಡಿ. ಮಾನವ ಬಾಂಬ್‌ಗಳಾಗಲು (ಫಿದಾಯಿನ್) ಸಿದ್ಧತೆ ನಡೆಸುತ್ತಿರುವವರನ್ನು ತಡೆಯಲು ಇದರಿಂದ ಮಾತ್ರ ಸಾಧ್ಯ ಎಂದರು.
ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ರಂಜನಾ ದೇಸಾಯಿ, 'ಕಸಬ್‌ಗೆ ಜೀವಾವಧಿ ಶಿಕ್ಷೆ ನೀಡುವುದರಿಂದ ಮುಂದಿನ ದಿನಗಳಲ್ಲಿ ನಾವು ಭಯೋತ್ಪಾದನಾ ದಾಳಿಗಳನ್ನು ತಡೆಯಲು ಸಾಧ್ಯ ಎಂದು ನೀವು ಯೋಚಿಸುತ್ತಿದ್ದೀರಾ? ಸಮಾಜಕ್ಕೆ ಯಾವ ಸಂದೇಶವನ್ನು ರವಾನಿಸಲು ನೀವು ಬಯಸುತ್ತಿದ್ದೀರಿ?' ಎಂದು ಪ್ರಶ್ನಿಸಿದರು.
ವಿಶೇಷ ನ್ಯಾಯಾಲಯವು ಕಸಬ್‌ಗೆ ಮರಣ ದಂಡನೆ ವಿಧಿಸಿದ್ದು, ಇದನ್ನು ಖಚಿತಪಡಿಸುವ ವಿಚಾರಣೆ ಬಾಂಬೆ ಹೈಕೋರ್ಟಿನಲ್ಲಿ ಪ್ರಸಕ್ತ ನಡೆಯುತ್ತಿದೆ.