ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಹಗರಣ; ಕಾಂಗ್ರೆಸ್-ಡಿಎಂಕೆ ವಿಚ್ಛೇದನ ಸನ್ನಿಹಿತ? (Congress | DMK | 2G scam | A Raja)
Bookmark and Share Feedback Print
 
2ಜಿ ತರಂಗಾಂತರ ಹಂಚಿಕೆ ಹಗರಣ ಸಂಬಂಧ ಮಾಜಿ ಸಚಿವ ಎ. ರಾಜಾ, ಸಂಸದೆ ಕನಿಮೋಳಿಗೆ ಸಂಬಂಧಪಟ್ಟ ಸಂಸ್ಥೆ, ಡಿಎಂಕೆಗೆ ಆಪ್ತವಾಗಿರುವ ಹಿರಿಯ ಪತ್ರಕರ್ತರೊಬ್ಬರ ಮನೆ ಮುಂತಾಡೆದೆ ಸಿಬಿಐ ದಾಳಿ ನಡೆಸಿರುವ ಬೆನ್ನಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಭಾಗವಾಗಿರುವ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿಯವರ ಡಿಎಂಕೆ ಜತೆಗಿನ ಸಂಬಂಧ ಹಳಸುತ್ತಿದೆ.

ಡಿಎಂಕೆ ಮುನಿಸಿಕೊಳ್ಳುವ ಪ್ರಶ್ನೆ ಒಂದು ಕಡೆ ಇರುವಂತೆಯೇ ಮತ್ತೊಂದು ಕಡೆಯಲ್ಲಿ ಕಾಂಗ್ರೆಸ್ ತನ್ನ ಮಾನ ಉಳಿಸಿಕೊಳ್ಳುವ ಸಲುವಾಗಿ ಡಿಎಂಕೆಯಿಂದ ಕಳಚಿಕೊಳ್ಳಬೇಕಾದ ಯೋಚನೆಯನ್ನೂ ಮಾಡುತ್ತಿದೆ. ಚುನಾವಣೆಗಳಲ್ಲಿ ಈಗಾಗಲೇ ಸಾಕಷ್ಟು ಹಿನ್ನಡೆ ಅನುಭವಿಸಿರುವ ಕಾಂಗ್ರೆಸ್, ಮತ್ತಷ್ಟು ಮುಖಭಂಗ ತಪ್ಪಿಸಿಕೊಳ್ಳಲು ಇಂತಹ ನಡೆಗೆ ಮುಂದಾದರೂ ಅಚ್ಚರಿಯಿಲ್ಲ.

ಪ್ರತಿಪಕ್ಷಗಳಿಂದ ತೀವ್ರ ಪ್ರತಿಭಟನೆಯನ್ನು ಎದುರಿಸುತ್ತಿರುವ ಕಾಂಗ್ರೆಸ್, ಪ್ರಸಕ್ತ ಸ್ಥಿತಿಯಲ್ಲಿ ಡಿಎಂಕೆ ಪ್ರತಿಕ್ರಿಯೆಗಾಗಿ ಕಾಯುತ್ತಿದೆ. ಡಿಎಂಕೆಗೆ ಸೇರಿದ ಹಲವು ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಸಂಬಂಧಪಟ್ಟ ಸ್ಥಳಗಳ ಮೇಲೆ ಸಿಬಿಐ ದಾಳಿ ನಡೆಸಿರುವುದರಿಂದ, ಕರುಣಾನಿಧಿ ನಿರೀಕ್ಷಿತವಾಗಿಯೇ ಅಸಮಾಧಾನಗೊಂಡಿರುತ್ತಾರೆ. ಆದರೂ ಆರೋಪಿಗಳನ್ನು ಮತ್ತೆ ಸಮರ್ಥಿಸಿಕೊಳ್ಳುತ್ತಾರೋ ಅಥವಾ ಕ್ರಮಕ್ಕೆ ಮುಂದಾಗಲಿದ್ದಾರೆಯೇ ಎಂಬುದರ ಮೇಲೆ ಕಾಂಗ್ರೆಸ್ ತನ್ನ ಮುಂದಿನ ನಡೆಯನ್ನು ನಿರ್ಧರಿಸಲಿದೆ ಎಂದು ಹೇಳಲಾಗುತ್ತಿದೆ.

ಯುಪಿಎ ಸರಕಾರದ ಪ್ರಮುಖ ಪಾಲುದಾರನಾಗಿರುವ ಡಿಎಂಕೆ ಪ್ರಸಕ್ತ ಸ್ಥಿತಿಯಲ್ಲಿ ಕಳಚಿಕೊಂಡರೂ, ಅತ್ತ ಜಯಲಲಿತಾ ಅವರ ಎಐಡಿಎಂಕೆ ಬೆಂಬಲ ನೀಡುವುದು ಖಚಿತವಾಗಿರುವುದರಿಂದ ಸರಕಾರಕ್ಕೆ ಅಂತಹ ತೊಂದರೆ ಎದುರಾಗದು. ಆದರೂ ಇದನ್ನು ಅಪಮಾನ ಎಂದು ಕಾಂಗ್ರೆಸ್ ಪರಿಗಣಿಸಿರುವುದರಿಂದ ಸೋನಿಯಾ ಗಾಂಧಿ ನಿರ್ಧಾರದ ಮೇಲೆ ಎಲ್ಲವೂ ನಿಂತಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಡಿಎಂಕೆ ಆಸ್ಥಾನಕ್ಕೆ ದಾಳಿ...
ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯವರ ಪುತ್ರಿ ಮತ್ತು ಸಂಸದೆ ಕನಿಮೋಳಿ ನಿರ್ದೇಶಕಿಯರಲ್ಲೊಬ್ಬರಾಗಿರುವ ಸರಕಾರೇತರ ಸಂಸ್ಥೆ 'ತಮಿಳ್ ಮಯ್ಯಂ', ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಅವರ ಲೆಕ್ಕಪತ್ರಾಧಿಕಾರಿಯ ಕಚೇರಿ, ರಾಜಾ ಅವರ ಸಂಬಂಧಿಕರ ಮನೆಗಳಿಗೆ ಸಿಬಿಐ ಬುಧವಾರ ದಾಳಿ ನಡೆಸಿ, ದಾಖಲೆಗಳನ್ನು ಕಲೆ ಹಾಕಿದೆ.

ರಾಜಾ ಅವರ ಈ ಹಿಂದಿನ ಲೋಕಸಭಾ ಕ್ಷೇತ್ರ, ಪೆರಂಬಲೂರಿನ ವೆಲೂರ್ ಗ್ರಾಮದಲ್ಲಿನ ಮನೆ ಮೇಲೂ ದಾಳಿ ನಡೆಸಲಾಗಿದೆ.

ಹಿರಿಯ ಪತ್ರಕರ್ತ ಹಾಗೂ ತಮಿಳು ನಿಯತಕಾಲಿಕ 'ನಕ್ಕೀರನ್' ಸಹಾಯಕ ಸಂಪಾದಕ ಕಾಮರಾಜ್, ರಾಜಾ ಅವರ ಲೆಕ್ಕಪತ್ರಾಧಿಕಾರಿ ಸುಬ್ರಮಣ್ಯಂ, ತಿರುಚನಾಪಳ್ಳಿಯಲ್ಲಿರುವ ರಾಜಾ ಅವರ ಸಹೋದರರು ಹಾಗೂ ಚೆನ್ನೈ, ತಿರುಚನಾಪಳ್ಳಿ, ಪೆರಂಬಲೂರುಗಳಲ್ಲಿನ ಆಪ್ತ ಸಹಾಯಕ ಕಚೇರಿ-ಮನೆಗಳಲ್ಲಿಯೂ ಸಿಬಿಐ ಹುಡುಕಾಟ ನಡೆಸಿದೆ.

ನಕ್ಕೀರನ್ ಸಂಪಾದಕ ಕಾಮರಾಜ್ ಡಿಎಂಕೆ ವಲಯದಲ್ಲಿ ಚಿರಪರಿಚಿತ ಹೆಸರು. ಅವರು ಪಕ್ಷದ ಜತೆ ಆಪ್ತ ಸಂಬಂಧ ಹೊಂದಿದವರು. ಕನಿಮೋಳಿ ನಿರ್ದೇಶಕಿಯಾಗಿರುವ ಎನ್‌ಜಿಒ ಕೂಡ ಸರಕಾರಿ ವಲಯದಲ್ಲಿ ಪ್ರಭಾವಿಯಾಗಿತ್ತು. ಪಾದ್ರಿ ಜೆಗತ್ ಗಾಸ್ಪರ್ ರಾಜ್ ಅವರ ಮನೆ ಮೇಲೆ ಕೂಡ ದಾಳಿ ನಡೆಸಿ ಪರಿಶೋಧನೆ ಮಾಡಲಾಗಿದೆ.

ರಾಜಾ ಅವರ ಆಪ್ತ ಎಂದು ಹೇಳಲಾಗಿರುವ ತಮಿಳು ಸುದ್ದಿವಾಹಿನಿಯೊಂದರ ವರದಿಗಾರ ಜಿ.ಎಲ್. ನರಸಿಂಹನ್ ಮನೆಗೂ ದಾಳಿ ಮಾಡಿರುವ ಸಿಬಿಐ, ಇದೇ ರೀತಿಯ ದಾಳಿಗಳನ್ನು ದೆಹಲಿಯಲ್ಲೂ ನಡೆಸಿದೆ.

ದೆಹಲಿಯಲ್ಲಿ ಲಾಬಿಗಾರ್ತಿ ನೀರಾ ರಾಡಿಯಾ ಮತ್ತು ಟ್ರಾಯ್ ಮಾಜಿ ಅಧ್ಯಕ್ಷ ಪ್ರದೀಪ್ ಬೈಜಾಲ್ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಸಿಬಿಐನ ಸುಮಾರು 150ಕ್ಕೂ ಹೆಚ್ಚು ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಕಣ್ಣೊರೆಸುವ ತಂತ್ರ: ಬಿಜೆಪಿ
2ಜಿ ಹಗರಣ ಸಂಬಂಧ ಸಿಬಿಐ ನಡೆಸಿರುವ ದಾಳಿಗಳು ಕೇವಲ ಕಣ್ಣೊರೆಸುವ ತಂತ್ರ. ಅಲ್ಲದೆ ಇದು ತುಂಬಾ ವಿಳಂಬವಾಯಿತು ಎಂದು ಪ್ರಮುಖ ಪ್ರತಿಪಕ್ಷ ಬಿಜೆಪಿ ಅಭಿಪ್ರಾಯಪಟ್ಟಿದೆ.

ಸಿಬಿಐ ನಡೆಸಿರುವ ದಾಳಿ ಅಲ್ಪವಾದುದು ಮತ್ತು ವಿಳಂಬವಾದುದು. ಆರೋಪಿಗಳಿಗೆ ತಮಗೆ ಸಂಬಂಧಪಟ್ಟ ದಾಖಲೆಗಳನ್ನು ಮರೆ ಮಾಚಲು ಸಾಕಷ್ಟು ಸಮಯವನ್ನು ಒದಗಿಸಲಾಗಿತ್ತು ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಇಂತಹ ಪ್ರಕರಣಗಳನ್ನು ಕೇವಲ ಜಂಟಿ ಸಂಸದೀಯ ಸಮಿತಿ ಮಾತ್ರ ನಿಭಾಯಿಸಬಹುದಾಗಿದೆ. ಅದೇ ನಮ್ಮ ಬೇಡಿಕೆ. ಅದೇ ಸೂಕ್ತವಾದುದು. ಆದರೆ ಸರಕಾರ ಇದಕ್ಕೆ ಒಪ್ಪಿಕೊಳ್ಳುತ್ತಿಲ್ಲ. ಪ್ರಸಕ್ತ ಸಿಬಿಐ ನಡೆಸುತ್ತಿರುವ ದಾಳಿಗಳು ಕೇವಲ ಕಣ್ಣೊರೆಸುವ ತಂತ್ರವೇ ಹೊರತು ಅಂತಿಮವಾಗಿ ಇದರಿಂದ ಯಾವ ವಿಚಾರವೂ ಹೊರಗೆ ಬರುವುದು ಸಂಶಯ ಎಂದರು.
ಸಂಬಂಧಿತ ಮಾಹಿತಿ ಹುಡುಕಿ