ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಧಾನಿ ಸಿಂಗ್, ಚಿದು,ಕರುಣಾನಿಧಿ ಮೇಲೆ ದಾಳಿಗೆ ಎಲ್‌ಟಿಟಿಇ ಸಂಚು (LTTE plans | Chidambaram | M Karunanidhi | Tamil Nadu | Manmohan Singh,)
ಪ್ರಧಾನಿ ಸಿಂಗ್, ಚಿದು,ಕರುಣಾನಿಧಿ ಮೇಲೆ ದಾಳಿಗೆ ಎಲ್‌ಟಿಟಿಇ ಸಂಚು
ನವದೆಹಲಿ, ಗುರುವಾರ, 16 ಡಿಸೆಂಬರ್ 2010( 09:46 IST )
ವೇಲುಪಿಳ್ಳೈ ಪ್ರಭಾಕರನ್ ಹತ್ಯೆಯ ನಂತರ ಎಲ್‌ಟಿಟಿಇ ಅಟ್ಟಹಾಸ ಮುಗಿಯಿತು ಅಂತ ನೀವು ಭಾವಿಸಿಕೊಂಡಿದ್ದರೆ ಅದು ನಿಮ್ಮ ಭ್ರಮೆ...ಯಾಕೆ ಗೊತ್ತಾ? ಮರು ಸಂಘಟನೆಗೊಳ್ಳುತ್ತಿರುವ ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಂ ಪ್ರಧಾನಿ ಡಾ.ಮನಮೋಹನ್ ಸಿಂಗ್, ಗೃಹ ಸಚಿವ ಪಿ.ಚಿದಂಬರಂ, ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಸೇರಿದಂತೆ ಪ್ರಮುಖ ರಾಜಕಾರಣಿಗಳ ಮೇಲೆ ದಾಳಿ ನಡೆಸುವ ಸಂಚು ರೂಪಿಸಿರುವ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಸಿದೆ.
ಪ್ರಧಾನಿ ಮನಮೋಹನ್ ಸಿಂಗ್ ಅವರು 2011ರಲ್ಲಿ ತಮಿಳುನಾಡಿನಲ್ಲಿ ಕೆಲವು ಯೋಜನೆಗಳನ್ನು ಉದ್ಘಾಟಿಸಲು ಭೇಟಿ ನೀಡಿದ ಸಂದರ್ಭದಲ್ಲಿ ಅವರ ಮೇಲೆ ದಾಳಿ ನಡೆಸಲು ಎಲ್‌ಟಿಟಿಇ ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ.
ಪ್ರಸಕ್ತ ಸಾಲಿನಲ್ಲಿ ಶ್ರೀಲಂಕಾ ಮಿಲಿಟರಿ ಪಡೆ ಎಲ್‌ಟಿಟಿಇ ವಿರುದ್ಧ ಮಾಡು ಇಲ್ಲವೇ ಮಡಿ ಎಂಬ ಸಮರ ನಡೆಸಿದ ಸಂದರ್ಭದಲ್ಲಿ ಕೆಲವು ಎಲ್‌ಟಿಟಿಇ ಕಾರ್ಯಕರ್ತರು ತಪ್ಪಿಸಿಕೊಂಡಿದ್ದು, ಅವರೆಲ್ಲ ಇದೀಗ ಭಾರತದಲ್ಲಿ ಮರು ಸಂಘಟನೆಗೊಂಡಿದ್ದಾರೆ. ಅಲ್ಲದೇ ಪ್ರಮುಖ ರಾಜಕಾರಣಿಗಳು ತಮಿಳುನಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಮೇಲೆ ದಾಳಿ ನಡೆಸಲು ಸಂಚು ರೂಪಿಸಿರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಎಲ್‌ಟಿಟಿಇ ಆತ್ಮಹತ್ಯಾ ದಳದ ಸದಸ್ಯರು ಬಲಿತೆಗೆದುಕೊಂಡಿದ್ದು, ಆ ನಿಟ್ಟಿನಲ್ಲಿ ಇದೀಗ ಗುಪ್ತಚರ ಇಲಾಖೆಯ ಮಾಹಿತಿಯನ್ನು ಭದ್ರತಾ ಏಜೆನ್ಸಿ ಗಂಭೀರವಾಗಿ ಪರಿಗಣಿಸಿರುವುದಾಗಿ ತಿಳಿಸಿದೆ.
ಆದರೂ ಎಲ್‌ಟಿಟಿಇ ಈಗ ದುರ್ಬಲಗೊಂಡಿದ್ದು, ಅದರ ಪ್ರಮುಖ ಮುಖಂಡರೆಲ್ಲ ಶ್ರೀಲಂಕಾ ಆರ್ಮಿಯ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಕೆಲವು ಕಾರ್ಯಕರ್ತರು ಮಾತ್ರ ಮರುಸಂಘಟನೆಗೊಂಡು ದಾಳಿ ಸಂಚು ನಡೆಸಲಿದ್ದಾರೆಂಬುದು ಗೊಂದಲಗೊಳಿಸುವ ವರದಿಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.