ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಂದು ಭಿಕ್ಷುಕ, ಇಂದೂ ಭಿಕ್ಷುಕನೇ, ಆದರೆ ಗ್ರಾ.ಪಂ. ಅಧ್ಯಕ್ಷ! (Villagers elect beggar | Sahawar Shah | Narayan Nat | Village Panchayath)
Bookmark and Share Feedback Print
 
ಕಳೆದ 40 ವರ್ಷಗಳಿಂದ ಭಿಕ್ಷೆ ಬೇಡುತ್ತಾ ಬಂದವನು ನಾರಾಯಣ ನಾಥ್. ಗ್ರಾಮಸ್ಥರೆಲ್ಲ ಸೇರಿ ಆತನನ್ನೇ ಗ್ರಾಮ ಪಂಚಾಯತ್ ಅಧ್ಯಕ್ಷನನ್ನಾಗಿ ಆರಿಸಿದ್ದಾರೆ. ಆದರೂ ತನ್ನ ವೃತ್ತಿಯನ್ನು ನಾರಾಯಣ ಬಿಟ್ಟಿಲ್ಲ. ಸಮಾಜಸೇವೆ ಸಮಾಜಕ್ಕೆ, ವೃತ್ತಿ ನನ್ನ ಹೊಟ್ಟೆಗೆ ಎನ್ನುವುದು ಆತನ ಮಾತು.

ಇದು ವರದಿಯಾಗಿರುವುದು ಉತ್ತರ ಪ್ರದೇಶದ ಬಡಾನ್ ಜಿಲ್ಲೆಯ ಸಹವಾರ್ ಶಾ ಗ್ರಾಮದಲ್ಲಿ. ಜನಪ್ರಿಯ ವ್ಯಕ್ತಿಗಳನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಆರಿಸುವ ಬದಲು ಅವರು ಭಿಕ್ಷೆ ಬೇಡುತ್ತಿದ್ದ 'ದರಿದ್ರ ನಾರಾಯಣ'ನನ್ನು ಆರಿಸಿದ್ದಾರೆ.

70ರ ಹರೆಯದ ನಾರಾಯಣ್‌ಗೆ ಇತರ ಏಳು ಮಂದಿ ತೀವ್ರ ಸ್ಪರ್ಧೆ ಒಡ್ಡಿದ್ದರು. ಆದರೆ ಗ್ರಾಮದ ಜನತೆ ಹೆಚ್ಚು ಒಲವು ತೋರಿಸಿದ್ದು ಭಿಕ್ಷುಕನತ್ತ. ಗೆಲುವಿನ ನಗೆ ಬೀರಿರುವ ನಾರಾಯಣ ಜನಸೇವೆ ಮಾಡೇ ತೀರುತ್ತೇನೆ ಎಂದು ಶಪಥ ಮಾಡಿದ್ದಾನೆ.

ನಾನು ಯಾವತ್ತೂ ಗ್ರಾಮ ಪ್ರಧಾನನಾಗಬೇಕು ಎಂದು ಕನಸು ಕಂಡವನಲ್ಲ. ಆದರೆ ಗ್ರಾಮಸ್ಥರು ನನ್ನನ್ನು ಹುರಿದುಂಬಿಸಿ, ಆತ್ಮವಿಶ್ವಾಸ ತುಂಬಿದರು. ಅವರ ಕಾರಣದಿಂದ ನಾನು ಇಂದು ಗ್ರಾಮ ಪಂಚಾಯತ್ ಅಧ್ಯಕ್ಷನಾಗಿದ್ದೇನೆ ಎಂದು ಹೇಳಿದ್ದಾನೆ.

ಈ ನಾರಾಯಣ ನಿರ್ಗತಿಕನಲ್ಲ. ನಾಲ್ವರು ಮಕ್ಕಳ ತಂದೆ. ಈಗ 14 ಮೊಮ್ಮಕ್ಕಳೂ ಇದ್ದಾರೆ. ಆದರೆ ಈಗಲೂ ಭಿಕ್ಷೆ ಬೇಡುವುದನ್ನು ಮಾತ್ರ ಬಿಟ್ಟಿಲ್ಲ. ಅದನ್ನು ಮುಂದೆಯೂ ಬಿಡುವುದಿಲ್ಲ ಎಂದಿರುವ ಆತ, ಗ್ರಾಮದ ಅಭಿವೃದ್ಧಿಗಾಗಿ ಸರಕಾರ ಬಿಡುಗಡೆ ಮಾಡುವ ಎಲ್ಲಾ ಹಣವನ್ನು ವಿನಿಯೋಗಿಸುತ್ತೇನೆ ಎಂದು ಭರವಸೆ ನೀಡಿದ್ದಾನೆ.

ಗ್ರಾಮದಲ್ಲಿ ಮಹಿಳೆಯರಿಗೆ ಶೌಚಾಲಯ ನಿರ್ಮಿಸುವುದು ನನ್ನ ಅಭಿವೃದ್ಧಿ ಕಾರ್ಯಗಳ ಪಟ್ಟಿಯಲ್ಲಿ ಮೊದಲ ಆದ್ಯತೆ ಎಂದಿರುವ ನಾರಾಯಣ್, ಚುನಾವಣೆಗಾಗಿ ಬಿಡಿಗಾಸು ಕೂಡ ಬಿಚ್ಚಿಲ್ಲವಂತೆ. ಆದರೂ ಗ್ರಾಮದ ಪರಿಸ್ಥಿತಿಯನ್ನೇ ಬದಲಾಯಿಸುವ ಕನಸು ಆತನಲ್ಲಿದೆ.

ಜನ ನನ್ನನ್ನು ಈ ಪರಿಯಾಗಿ ಬೆಂಬಲಿಸಿ, ಗೌರವಿಸುತ್ತಾರೆ, ಒಬ್ಬ ರಾಜಕೀಯ ವ್ಯಕ್ತಿಯೆಂದು ನೋಡುತ್ತಾರೆ ಎಂದು ನಾನು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಇದು ನಂಬಲಸಾಧ್ಯವಾದುದು. ನನ್ನ ಮೇಲೆ ಭಾರೀ ಜವಾಬ್ದಾರಿಗಳಿವೆ. ಪ್ರಾಮಾಣಿಕ ಪ್ರಯತ್ನದಿಂದ ಅಭಿವೃದ್ಧಿಗೆ ಯತ್ನಿಸುತ್ತೇನೆ ಎಂದು ಗ್ರಾಮಸ್ಥರೇ ಕೊಟ್ಟಿರುವ ಮೊಬೈಲ್ ಫೋನ್ ತೋರಿಸುತ್ತಾ ನಾರಾಯಣ್ ಹೇಳುತ್ತಾರೆ.

ನನಗೆ ಸರಕಾರದಿಂದ 1,500 ರೂಪಾಯಿ ಮಾಸಿಕ ವೇತನ ಸಿಗುತ್ತದೆ ಎಂದು ಹೇಳಿದ್ದಾರೆ. ಇದರ ಜತೆ ಇತರೆ ಯಾವುದೇ ಭತ್ಯೆಗಳು ಸಿಗುವುದಿಲ್ಲ. ಸರಕಾರದ ಅನುದಾನಗಳಿಗೆ ನನ್ನ ವೇತನವನ್ನೂ ಸೇರಿಸುತ್ತೇನೆ. ನನಗೆ ನನ್ನ ಮತ್ತು ನನ್ನ ಕುಟುಂಬ ಭಿಕ್ಷೆಯ ಹಣವೇ ಸಾಕು ಎನ್ನುವ ನಾರಾಯಣ, ಖಂಡಿತಾ ಲಂಚಕ್ಕಾಗಿ ಕೈಯೊಡ್ಡುವುದಿಲ್ಲ ಎಂದಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ