ಚೀನಾ ಪ್ರಧಾನಿ ವೆನ್ ಜಿಯಾಬಾವೊ ಅವರಿಗೆ ಏರ್ಪಡಿಸಲಾಗಿದ್ದ ಭಾರೀ ಭದ್ರತೆ ಸ್ವತಃ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗೂ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅದು ಎಷ್ಟರ ಮಟ್ಟಿಗಿತ್ತೆಂದರೆ, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ನಿವಾಸಕ್ಕೆ ಕಾರಿನಲ್ಲಿ ಹೋಗುವ ಬದಲು, ನಡೆದುಕೊಂಡೇ ಹೋಗುವಷ್ಟು!
ಇದು ನಡೆದಿರುವುದು ಬುಧವಾರ ರಾತ್ರಿ. ಪ್ರಧಾನಿ ಸಿಂಗ್ ಅಧಿಕೃತ ನಿವಾಸದಲ್ಲಿ ಜಿಯಾಬಾವೊಗೆ ಖಾಸಗಿ ಔತಣ ಕೂಟ ಏರ್ಪಡಿಸಲಾಗಿತ್ತು. ಇದಕ್ಕೆ ತೆರಳಬೇಕಿದ್ದ ಸೋನಿಯಾ ಕಾರಿನಲ್ಲಿ ಹೋಗಲು ಸಾಧ್ಯವಾಗಲಿಲ್ಲ. ಜಿಯಾಬಾವೊ ಆಗಮನದ ಹಿನ್ನೆಲೆಯಲ್ಲಿ ಇತರೆಲ್ಲ ವಾಹನಗಳ ಪ್ರವೇಶವನ್ನು ಇಲ್ಲಿ ನಿರ್ಬಂಧಿಸಲಾಗಿತ್ತು.
ಅನಿವಾರ್ಯವಾಗಿ ಸೋನಿಯಾ ನಡೆದುಕೊಂಡೇ ಹೋಗಬೇಕಾಯಿತು. 7 ರೇಸ್ ಕೋರ್ಸ್ ರಸ್ತೆಯಲ್ಲಿನ ಪ್ರಧಾನಿ ನಿವಾಸಕ್ಕೆ ಸುಮಾರು ಅರ್ಧ ಕಿಲೋ ಮೀಟರ್ ದೂರದಿಂದಲೇ ಆಕೆ ಕಾಲ್ನಡಿಗೆಯಲ್ಲೇ ಸಾಗಿದರು.
ಈ ಔತಣ ಕೂಟಕ್ಕೆ ಕೆಲವೇ ಕೆಲವು ಆಯ್ದ ಗಣ್ಯರನ್ನು ಮಾತ್ರ ಆಹ್ವಾನಿಸಲಾಗಿತ್ತು. ಸೋನಿಯಾ ಗಾಂಧಿ, ಲೋಕಸಭೆಯ ಸ್ಪೀಕರ್ ಮೀರಾ ಕುಮಾರ್, ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ರಾಜ್ಯಸಭೆ ವಿಪಕ್ಷ ನಾಯಕ ಅರುಣ್ ಜೇಟ್ಲಿ, ಸಿಪಿಐ ನಾಯಕ ಸೀತಾರಾಮ್ ಯೆಚೂರಿ, ಬಿಜೆಪಿ ನಾಯಕ ಜಯಪಂಡಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದರು.
ಏಷಿಯಾದ ಎರಡು ಅತಿದೊಡ್ಡ ರಾಷ್ಟ್ರಗಳ ನಡುವಿನ ಬಾಂಧವ್ಯ ವೃದ್ಧಿ ಮತ್ತು ಸಹಕಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ಚೀನಾ ಪ್ರಧಾನಿಯ ಜತೆಗೆ ಹಿಂದೆಂದೂ ಕಂಡಿರದ 400ರಷ್ಟು ಉದ್ಯಮಿಗಳ ಬೃಹತ್ ನಿಯೋಗ ಆಗಮಿಸಿದೆ. ಇವರಲ್ಲಿ ಹಿರಿಯ ಅಧಿಕಾರಿಗಳು ಮತ್ತು ಸಚಿವರುಗಳು ಕೂಡ ಸೇರಿದ್ದಾರೆ.