2ಜಿ ಹಗರಣ ಮೇಲ್ವಿಚಾರಣೆ ಸುಪ್ರೀಂಗೆ; ಕೇಂದ್ರಕ್ಕೆ ಹಿನ್ನಡೆ
ನವದೆಹಲಿ, ಗುರುವಾರ, 16 ಡಿಸೆಂಬರ್ 2010( 12:40 IST )
1.76 ಲಕ್ಷ ಕೋಟಿ ರೂಪಾಯಿ ಮೊತ್ತದ 2ಜಿ ತರಂಗಾಂತರ ಹಂಚಿಕೆ ಹಗರಣದ ತನಿಖೆಯನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯವು ಯಾವುದೇ ಪ್ರಭಾವಕ್ಕೆ ಒಳಗಾಗದೆ ತನಿಖೆ ನಡೆಸಬೇಕು ಎಂದು ನಿರ್ದೇಶನ ನೀಡಿರುವ ಸರ್ವೋಚ್ಚ ನ್ಯಾಯಾಲಯ, ತನಿಖೆಯ ಉಸ್ತುವಾರಿಯನ್ನು ತಾನೇ ನೇರವಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿದೆ.
2001ರಿಂದ 2008ರ ನಡುವಿನ 2ಜಿ ಹಗರಣಕ್ಕೆ ಸಂಬಂಧಪಟ್ಟ ತನಿಖೆಯನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ನಡೆಸಬೇಕು. ಇದಕ್ಕೆ ಸಂಬಂಧಪಟ್ಟ ಎಲ್ಲಾ ವರದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. 2011ರ ಫೆಬ್ರವರಿ 10ರಂದು ಮುಚ್ಚಿದ ಲಕೋಟೆಯಲ್ಲಿ ತನಿಖೆಯ ಸ್ಟೇಟಸ್ ರಿಪೋರ್ಟ್ ಒಪ್ಪಿಸತಕ್ಕದ್ದು ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಇದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಆಗಿರುವ ಹಿನ್ನಡೆ ಎಂದೇ ಭಾವಿಸಲಾಗುತ್ತಿದೆ. ಯಾಕೆಂದರೆ ಕೇಂದ್ರ ಸರಕಾರದ ಮೇಲೆ ನಂಬಿಕೆ ಕಳೆದುಕೊಂಡ ಹೊತ್ತಿನಲ್ಲಿ ಅಥವಾ ಅದು ತನಿಖೆಯ ಮೇಲೆ ಪ್ರಭಾವ ಬೀರಬಹುದು ಎಂಬ ಶಂಕೆಗಳಿರುವಾಗ ಸುಪ್ರೀಂ ಕೋರ್ಟ್ ಈ ರೀತಿಯಾಗಿ ತನಿಖೆಯ ನೇರ ಮೇಲ್ವಿಚಾರಣೆಯನ್ನು ತೆಗೆದುಕೊಳ್ಳುತ್ತದೆ.
ಇಲ್ಲಿ ಮತ್ತೊಂದು ಗಮನಾರ್ಹ ಅಂಶವೆಂದರೆ, ಪಿ.ಜೆ ಥಾಮಸ್ ಪ್ರಕರಣ. ಕೇಂದ್ರ ಜಾಗೃತ ಆಯುಕ್ತರಾಗಿರುವ (ಸಿವಿಸಿ) ಥಾಮಸ್ ಕಳಂಕಿತರೆನ್ನುವ ನಿಟ್ಟಿನಲ್ಲಿ ಕೇಂದ್ರ ಸರಕಾರವನ್ನು ಸುಪ್ರೀಂ ಎರಡೆರಡು ಸುತ್ತು ತರಾಟೆಗೆ ತೆಗೆದುಕೊಂಡಿದ್ದಾಗ, 2ಜಿ ಹಗರಣ ಕುರಿತ ಸಿಬಿಐ ತನಿಖೆಯ ಮೇಲ್ವಿಚಾರಣೆಯನ್ನು ಥಾಮಸ್ ನಡೆಸುವುದಿಲ್ಲ ಎಂದು ಕೇಂದ್ರ ಹೇಳಿತ್ತು.
ವಿಶೇಷ ಎಂದರೆ ಸಿವಿಸಿಯಿಂದಲೂ ಇದನ್ನು ಸುಪ್ರೀಂ ಕಿತ್ತುಕೊಂಡಿರುವುದು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದ ಥಾಮಸ್, ಕೇಂದ್ರದ ಪರ ಕೆಲಸ ಮಾಡಬಹುದು ಎಂಬ ಶಂಕೆಯಿತ್ತು. ಅವರನ್ನು ಬಿಟ್ಟು ಬೇರೆ ಇನ್ಯಾರು ನಡೆಸಿದರೂ, ಅದರ ಮೇಲೆ ಕೇಂದ್ರ ಪ್ರಭಾವ ಬೀರುವ ಸಾಧ್ಯತೆಗಳಿದ್ದವು. ಆದರೆ ಸರಕಾರದ ಯಾವುದೇ ಸಂಸ್ಥೆಗಳಿಗೆ ಮೇಲ್ವಿಚಾರಣೆಯನ್ನು ಬಿಟ್ಟುಕೊಡದೆ, ಸುಪ್ರೀಂ ನೇರವಾಗಿ ವೀಕ್ಷಣೆ ನಡೆಸಲಿದೆ.