ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಸಬ್ ಸರಿಯಿದ್ದಾನೆ, ಮೆಂಟಲ್ ಅಲ್ಲ: ಬಾಂಬೆ ಹೈಕೋರ್ಟ್ (Ajmal Kasab | Pakistani terrorist | Bombay High Court | Mumbai attacks)
Bookmark and Share Feedback Print
 
ವೈದ್ಯಕೀಯ ಮಂಡಳಿಯೊಂದನ್ನು ರಚಿಸಿ ನಡತೆಯ ಹಿನ್ನೆಲೆ ಮತ್ತು ಮಾನಸಿಕ ಆರೋಗ್ಯವನ್ನು ತಪಾಸಣೆಗೊಳಪಡಿಸಬೇಕು ಎಂಬ ಪಾಕಿಸ್ತಾನಿ ಭಯೋತ್ಪಾದಕ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ಮನವಿಯನ್ನು ತಿರಸ್ಕರಿಸಿರುವ ಬಾಂಬೆ ಹೈಕೋರ್ಟ್, ಆತ ಮಾನಸಿಕವಾಗಿ ಆರೋಗ್ಯವಾಗಿದ್ದಾನೆ ಎಂದು ಹೇಳಿದೆ.

ಆತನ ಮಾನಸಿಕ ಸ್ಥಿತಿ ಮತ್ತು ಅದರ ಹಿನ್ನೆಲೆಯನ್ನು ಪರಿಶೀಲನೆ ನಡೆಸಲು ವೈದ್ಯಕೀಯ ಸಮಿತಿಗೆ ಸೂಚಿಸಬೇಕು ಎಂಬ ಮನವಿಯನ್ನು ತಳ್ಳಿ ಹಾಕಿದ ನ್ಯಾಯಮೂರ್ತಿ ರಂಜನಾ ದೇಸಾಯಿ ಮತ್ತು ಆರ್.ವಿ. ಮೋರೆಯವರನ್ನೊಳಗೊಂಡ ಪೀಠ, ಅದರ ಅಗತ್ಯವಿಲ್ಲ ಎಂದು ಆದೇಶ ನೀಡಿದೆ.

ತಾವು ಈ ಹಿಂದೆ ಕಸಬ್‌ನನ್ನು ಮಾತನಾಡಿಸಿದ್ದು, ಮುಂಬೈ ದಾಳಿಯ ಕುರಿತ ವಿಚಾರಣೆಗಾಗಿ ಆತ ನೇರವಾಗಿ ಹಾಜರಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದ. ಅಲ್ಲದೆ ತನಗೆ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲ ಮತ್ತು ಭಾರತದ ಹೊರಗಡೆ ವಿಚಾರಣೆ ನಡೆಸಬೇಕೆಂದು ಹೇಳಿದ್ದ ಎಂದು ನ್ಯಾಯಮೂರ್ತಿಗಳು ಉಲ್ಲೇಖಿಸಿದರು.

ಇಂತಹ ಹೇಳಿಕೆಗಳು ಆತ ಮಾನಸಿಕವಾಗಿ ಸಮರ್ಥನಾಗಿದ್ದಾನೆ ಮತ್ತು ಆತನ ಮನೋಭಾವ ಸ್ಪಷ್ಟವಾಗಿದೆ ಎಂಬುದನ್ನು ತೋರಿಸುತ್ತವೆ. ಆತನ ಮಾನಸಿಕ ಆರೋಗ್ಯದಲ್ಲಿ ಯಾವುದೇ ದೋಷಗಳು ಕಂಡು ಬಂದಿರಲಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಧೀಶರು ತಿಳಿಸಿದರು.

ವಿಚಾರಣಾ ನ್ಯಾಯಾಲಯವು ಮರಣ ದಂಡನೆ ನೀಡಿರುವ ಶಿಕ್ಷೆಗೆ ಕಾರಣವಾಗಿರುವುದು 2008ರ ಮುಂಬೈ ದಾಳಿ. ಕಸಬ್ ಇಂತಹ ಕೃತ್ಯಕ್ಕಿಳಿಯಬೇಕಾದ ಹಿಂದೆ ಕಾರಣಗಳೇನಿದ್ದವು ಎಂಬುದನ್ನು ತಿಳಿದುಕೊಳ್ಳಬೇಕು. ಆತನ ಕೌಟುಂಬಿಕ ಹಿನ್ನೆಲೆಯನ್ನೂ ಅಧ್ಯಯನ ಮಾಡಬೇಕು. ಅದಕ್ಕಾಗಿ ಭಾರತ ಮತ್ತು ಪಾಕಿಸ್ತಾನ -- ಎರಡೂ ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರಕಾರೇತರ ಸಂಸ್ಥೆಯೊಂದನ್ನು ನೇಮಕ ಮಾಡಬೇಕು ಎಂಬ ಕಸಬ್ ಪರ ವಕೀಲರ ವಾದವನ್ನೂ ಹೈಕೋರ್ಟ್ ತಳ್ಳಿ ಹಾಕಿದೆ.

ಕಸಬ್ ಮಾನಸಿಕವಾಗಿ ಸ್ವಸ್ಥನಿದ್ದಾನೆ ಎಂದು ಸರಕಾರಿ ವಕೀಲ ಉಜ್ವಲ್ ನಿಕ್ಕಂ ಕೂಡ ವಾದಿಸಿದರು.

ವಿಚಾರಣೆ ಸಂದರ್ಭದಲ್ಲಿ ಆತ ತನ್ನನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಸರ್ಕಸ್ ಮಾಡಿದ್ದ. ಎಚ್ಚರಿಕೆಯಿಂದ ಮತ್ತು ಸಕಾರಣಯುತವಾಗಿ ವರ್ತಿಸಿದ್ದ ಆತ ಯಾವತ್ತೂ ತಾನು ಮಾನಸಿಕ ಅನಾರೋಗ್ಯ ಹೊಂದಿದ ವ್ಯಕ್ತಿ ಎಂದು ತೋರಿಸಿಕೊಂಡವನಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ