2ಜಿ ತರಂಗಾಂತರ ಹಂಚಿಕೆ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ನಡೆಸಿರುವ ದಾಳಿಗಳಿಂದಾಗಿ ಕಾಂಗ್ರೆಸ್ ಮತ್ತು ಡಿಎಂಕೆ ಸಂಬಂಧಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ನಮ್ಮ ಪಕ್ಷವು ಶೀಘ್ರದಲ್ಲೇ ಪರಿಶುದ್ಧವಾಗಿ ಹೊರಗೆ ಬರಲಿದೆ ಎಂದು ಡಿಎಂಕೆ ಸಂಸದೆ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಪುತ್ರಿ ಕನಿಮೋಳಿ ತಿಳಿಸಿದ್ದಾರೆ.
PTI
ಕಾನೂನು ತನ್ನದೇ ಆದ ಕ್ರಮವನ್ನು ತೆಗೆದುಕೊಳ್ಳಲಿದೆ. ನಾವು ತಪ್ಪಿತಸ್ಥರು ಅಲ್ಲವೆಂದು ಸಾಬೀತುಪಡಿಸುವ ಪ್ರಕ್ರಿಯೆಯಿದು. ಖಂಡಿತವಾಗಿಯೂ ನಾವು ಪರಿಶುದ್ಧರಾಗಿ, ಶುದ್ಧ ಚಾರಿತ್ರ್ಯವಂತರಾಗಿ ಹೊರ ಹೊಮ್ಮಲಿದ್ದೇವೆ ಎಂದು ಆಶಾವಾದ ವ್ಯಕ್ತಪಡಿಸಿದರು.
ದೂರಸಂಪರ್ಕ ಮಾಜಿ ಸಚಿವ ಎ. ರಾಜಾ ಮನೆ, ಅವರ ಆಪ್ತರ ನಿವಾಸಗಳು, ಕಚೇರಿಗಳು ಹಾಗೂ ಕನಿಮೋಳಿಗೆ ಸಂಬಂಧಪಟ್ಟ ಸಂಸ್ಥೆಗಳ ಮೇಲೂ ಸಿಬಿಐ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ನಡೆಸಿತ್ತು.
ಆದರೆ ಇದರಿಂದ ಯಾವುದೇ ಸಮಸ್ಯೆಯಾಗಿದೆ ಎಂಬುದನ್ನು ಕನಿಮೋಳಿ ಒಪ್ಪಿಕೊಂಡಿಲ್ಲ. ಪ್ರಸಕ್ತ ನಡೆಯುತ್ತಿರುವ ತನಿಖೆಯು ಕಾಂಗ್ರೆಸ್ ಪಕ್ಷದ ಜತೆಗಿನ ನಮ್ಮ ಮೈತ್ರಿಗೆ ಯಾವುದೇ ತೊಂದರೆಯನ್ನುಂಟು ಮಾಡುವುದಿಲ್ಲ ಎಂದರು.
ಅದೇ ಹೊತ್ತಿಗೆ ರಾಯಲ್ ಎಂಟರ್‌ಪ್ರೈಸಸ್ ಪೀಠೋಪಕರಣಗಳ ಮಳಿಗೆಯ ಮಾಲಕಿ, ತನ್ನ ತಾಯಿ ರಾಜಾಧಿ ಅಮ್ಮಾಳ್ ಅಣ್ಣಾ ರಸ್ತೆಯಲ್ಲಿರುವ ಪ್ರಮುಖ ಜಮೀನನ್ನು ಖರೀದಿಸಿದ್ದಾರೆ ಎಂಬ ವರದಿಗಳನ್ನು ಕನಿಮೋಳಿ ತಳ್ಳಿ ಹಾಕಿದ್ದಾರೆ.
ನಮ್ಮ ಕುಟುಂಬಕ್ಕೂ ಆ ವ್ಯವಹಾರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ನಮ್ಮ ಸಂಸ್ಥೆಯ ಮಾಜಿ ಉದ್ಯೋಗಿ ಶರವಣನ್ ಇಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದರು. ಆ ಜಮೀನನ್ನು ಖರೀದಿಸಿದ್ದು ಮಲೇಷಿಯಾದ ಉದ್ಯಮಿ ಎಂದು ಅವರು ಸ್ಪಷ್ಟಪಡಿಸಿದರು.
2ಜಿ ಹಗರಣ ಭೇದಿಸುವ ನಿಟ್ಟಿನಲ್ಲಿ ಲಾಬಿಗಾರ್ತಿ ನೀರಾ ರಾಡಿಯಾ, ಟ್ರಾಯ್ ಮಾಜಿ ಅಧ್ಯಕ್ಷ ಪ್ರದೀಪ್ ಬೈಜಾಲ್, ರಾಜಾ ಸಹೋದರರು ಮತ್ತು ಆಪ್ತರು ಹಾಗೂ ಕನಿಮೋಳಿಗೆ ಸಂಬಂಧಪಟ್ಟ ಸರಕಾರೇತರ ಸಂಸ್ಥೆಗಳು ಸೇರಿದಂತೆ ಒಟ್ಟು 34 ಕಚೇರಿ-ನಿವಾಸಗಳ ಮೇಲೆ ಸಿಬಿಐ ನಿನ್ನೆ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿತ್ತು.