ರಾಹುಲ್‌ರದ್ದು ಕಸಬ್ ಭಾಷೆ: ಬಿಜೆಪಿ | ಪಿತೂರಿ: ಕಾಂಗ್ರೆಸ್
ನವದೆಹಲಿ, ಶುಕ್ರವಾರ, 17 ಡಿಸೆಂಬರ್ 2010( 12:51 IST )
ಲಷ್ಕರ್ ಭಯೋತ್ಪಾದಕರಿಗಿಂತ ಹಿಂದೂ ತೀವ್ರವಾದಿಗಳೇ ಅಪಾಯಕಾರಿ ಎಂದು ಹೇಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯದ್ದು ಉಗ್ರ ಅಜ್ಮಲ್ ಕಸಬ್‌ನ ಭಾಷೆ. ಅವರು ತಾನೊಬ್ಬ ಪಾಕಿಸ್ತಾನಿ ಎಂಬಂತೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದ್ದರೆ, ಇದರ ಹಿಂದೆ ಪಿತೂರಿಯಿದೆ ಎಂದು ಕಾಂಗ್ರೆಸ್ ಶಂಕೆ ವ್ಯಕ್ತಪಡಿಸಿದೆ.
ಲಷ್ಕರ್ ಇ ತೋಯ್ಬಾ, ಇಂಡಿಯನ್ ಮುಜಾಹಿದೀನ್ ಮೊದಲಾದ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆಗಳಿಗಿಂತಲೂ ಹಿಂದೂ ಉಗ್ರಗಾಮಿಗಳೇ ಭಾರತಕ್ಕೆ ಅತಿದೊಡ್ಡ ಬೆದರಿಕೆ ಎಂದು ರಾಹುಲ್ ಹೇಳಿರುವುದು ಖಂಡನಾರ್ಹ. ಉಗ್ರವಾದಕ್ಕೆ ಜಾತಿ-ಧರ್ಮವಿಲ್ಲ. ಅವರ ಹೇಳಿಕೆ ಭಾರತದ ಬಗ್ಗೆ ಅವರಿಗಿರುವ ಅಜ್ಞಾನವನ್ನು ತೋರಿಸುತ್ತದೆ ಎಂದು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.
ಕೆಲ ಸಮಯದ ಹಿಂದಷ್ಟೇ ಆರೆಸ್ಸೆಸ್ ಮೂಲಭೂತವಾದಿ ಸಂಘಟನೆ ಎಂದು ಟೀಕಿಸಿ ರಾಷ್ಟ್ರವ್ಯಾಪಿ ವಿರೋಧ ಎದುರಿಸಿದ್ದ ರಾಹುಲ್ ಗಾಂಧಿ ಮುಸ್ಲಿಮರ ಓಲೈಕೆಗೆ ಇಂತಹ ಹೇಳಿಕೆ ನೀಡುತ್ತಿರುವುದು ಸ್ಪಷ್ಟ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಗ್ರವಾದದ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ರಾಹುಲ್ ಹೇಳಿಕೆ ಹಿನ್ನಡೆಯನ್ನೊದಗಿಸಿದೆ. ಕಾಂಗ್ರೆಸ್ ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸುತ್ತಿದೆ. ಈ ಸಂಬಂಧ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ರಾಹುಲ್‌ರದ್ದು ಕಸಬ್ ಭಾಷೆ... ಅತ್ತ ಬಿಜೆಪಿಯ ಮತ್ತೊಬ್ಬ ವಕ್ತಾರ ತರುಣ್ ವಿಜಯ್ ಕೂಡ ಕಾಂಗ್ರೆಸ್ ನಾಯಕನ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ರಾಹುಲ್ ಮತ್ತು ದಿಗ್ವಿಜಯ್ ಸಿಂಗ್ ಪಾಕಿಸ್ತಾನ ಮತ್ತು ಕಸಬ್ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಆ ಮೂಲಕ ಲಷ್ಕರ್ ಇ ತೋಯ್ಬಾಕ್ಕೆ ಸಹಕಾರ ನೀಡುತ್ತಿದ್ದಾರೆ. ಅವರು ಪಾಕಿಸ್ತಾನವನ್ನು ಖುಷಿಪಡಿಸಲು ಹೊರಟಂತೆ ಕಾಣುತ್ತಿದೆ ಎಂದು ವಿಜಯ್ ತರಾಟೆಗೆ ತೆಗೆದುಕೊಂಡರು.
ಹಿಂದೂಗಳ ವಿರುದ್ಧ ಮಾತನಾಡಿದರೆ ಮುಸ್ಲಿಮರು ಉತ್ತರ ಪ್ರದೇಶದಲ್ಲಿ ಮತ ಹಾಕಬಹುದು ಎಂದು ಅವರು ಯೋಚಿಸಿದ್ದರೆ, ಅದು ಈ ದೇಶದ ಭವಿಷ್ಯಕ್ಕೆ ದುರದೃಷ್ಟಕರವಾದ ಅಂಶ. ಉತ್ತರ ಪ್ರದೇಶದಲ್ಲಿ ಚುನಾವಣೆಗಳನ್ನು ಗೆಲ್ಲಲು ಅವರು ಕಸಬ್‌ಗೆ ಸಹಾಯ ಮಾಡಲು ಯತ್ನಿಸುತ್ತಿದ್ದಾರೆ ಎಂದೇ ಇದನ್ನು ಹೇಳಬೇಕಾಗುತ್ತದೆ. ಇದಕ್ಕೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡುವ ಅಗತ್ಯವಿದೆ ಎಂದರು.
ಹಿಂದೂ ಸಂಘಟನೆಗಳ ಬಗ್ಗೆ ಮುಸ್ಲಿಮರಲ್ಲಿ ಭೀತಿಯನ್ನು ಸೃಷ್ಟಿಸಿ, ಅವರಿಗೆ ಕಾಂಗ್ರೆಸ್ ಮಾತ್ರ ಸಹಕಾರವಾಗಬಹುದು ಎಂಬ ಭಾವನೆಯನ್ನು ಮೂಡಿಸುತ್ತಿರುವ ಕಾಂಗ್ರೆಸ್, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಅವಧಿಯಿಂದಲೇ ಹಿಂದೂಗಳು ಮತ್ತು ಮುಸ್ಲಿಮರನ್ನು ವಿಭಜಿಸುವ ತಂತ್ರವನ್ನು ಬಳಸಿಕೊಂಡು ಬಂದಿದೆ ಎಂದೂ ವಿಜಯ್ ಆರೋಪಿಸಿದರು.
ಬಿಜೆಪಿ ಹಿರಿಯ ನಾಯಕ ವೆಂಕಯ್ಯ ನಾಯ್ಡು ಕೂಡ ರಾಹುಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸುತ್ತಿದೆ. ಕಾಂಗ್ರೆಸ್ ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಭಯೋತ್ಪಾದನೆಗೆ ಧರ್ಮ ಅಥವಾ ಬಣ್ಣವಿಲ್ಲ. ಎಲ್ಲಾ ರೀತಿಯ ಭಯೋತ್ಪಾದನೆಗಳು ಖಂಡಿಸಲ್ಪಡಬೇಕು ಎಂದರು.
ಕಾಂಗ್ರೆಸ್‌ಗೆ ಮಂಡೆ ಬಿಸಿ... ರಾಹುಲ್ ಗಾಂಧಿ ನೀಡಿರುವ ಹೇಳಿಕೆಯ ಹಿಂದೆ ಏನೋ ಪಿತೂರಿ ಇರಬಹುದು ಎಂದು ಕಾಂಗ್ರೆಸ್ ಶಂಕೆ ವ್ಯಕ್ತಪಡಿಸಿದೆ. ಜತೆಗೆ ಪಕ್ಷವು ಈ ಬಗ್ಗೆ ಸೂಕ್ತ ನಿರ್ಧಾರಕ್ಕೆ ಬರುವ ತನಕ ವಕ್ತಾರರು ಯಾವುದೇ ಹೇಳಿಕೆಯನ್ನು ನೀಡದಂತೆ ಕಾಂಗ್ರೆಸ್ ಹೈಕಮಾಂಡ್ ಆದೇಶ ಹೊರಡಿಸಿದೆ.
ಮೊದಲು ಆ ಹೇಳಿಕೆಯ ಸತ್ಯಾಸತ್ಯತೆ ಪರಿಶೀಲನೆ ನಡೆಸೋಣ. ಇದರ ಹಿಂದೆ ಯಾವುದಾದರೂ ಪಿತೂರಿ ಅಡಗಿರುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಪ್ರತಿಕ್ರಿಯಿಸಿದರು.