ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಗ್ರೆಸ್ ತೊರೆದ ಜಗನ್ ಭಾರೀ ಆಸ್ತಿ ಮೇಲೆ ಐಟಿ ಕಣ್ಣು
(Andhra Pradesh | Jagan Mohan Reddy | IT department | Congress)
ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಪುತ್ರ ಜಗನ್ ಮೋಹನ್ ರೆಡ್ಡಿಯನ್ನು ಕೇಂದ್ರ ಸರಕಾರ ಗುರಿ ಮಾಡುತ್ತಿದೆಯೇ? ಗೊತ್ತಿಲ್ಲ, ಆದರೆ ಆದಾಯ ತೆರಿಗೆ ಇಲಾಖೆಯಂತೂ ಅವರ ಬೆನ್ನು ಬಿದ್ದಿರುವುದು ಹೌದು. ಜಗನ್ ಆಸ್ತಿ ಶೇ.1200ರಷ್ಟು ಜಿಗಿದಿರುವುದನ್ನು ಆದಾಯ ತೆರಿಗೆ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
ವೈಎಸ್ಆರ್ ಕುಟುಂಬದ ಒಡೆತನದಲ್ಲಿದ್ದ ಭಾರತಿ ಸಿಮೆಂಟ್ ಕಂಪನಿಯಲ್ಲಿನ ತನ್ನ ಶೇರುಗಳನ್ನು ಜಗನ್ ಮಾರಾಟ ಮಾಡಿದ್ದು, ಸೆಪ್ಟೆಂಬರ್ ತಿಂಗಳವರೆಗಿನ ಆರು ತಿಂಗಳ ಅವಧಿಯ ತೆರಿಗೆಯೆಂದು 84 ಕೋಟಿ ರೂಪಾಯಿಗಳನ್ನು ಪಾವತಿಸಿದ್ದಾರೆ. ತನ್ನ ಶೇರುಗಳ ಮಾರಾಟದಿಂದ ಜಗನ್ 416 ಕೋಟಿ ರೂಪಾಯಿ ಗಳಿಸಿದ್ದರು. ಪ್ರಸಕ್ತ ಈ ಕಂಪನಿ ಫ್ರೆಂಚ್ ಕಂಪನಿಯೊಂದರ ಪಾಲಾಗಿದೆ. ಆದರೆ ಈಗಲೂ ಜಗನ್ ಅದರಲ್ಲಿ 2,600 ಕೋಟಿ ರೂಪಾಯಿ ಮೌಲ್ಯದ ಶೇರುಗಳನ್ನು ಹೊಂದಿದ್ದಾರೆ.
ಪ್ರಸಕ್ತ ಭಾರತಿ ಸಿಮೆಂಟ್ ಕಂಪನಿಯಲ್ಲಿ ಫ್ರೆಂಚ್ ಕಂಪನಿ ಶೇ.51ರ ಶೇರುಗಳನ್ನು ಹೊಂದಿದೆ. ಜಗನ್ ಪತ್ನಿ ಹೆಸರಿನಲ್ಲಿ ಶೇ.49ರ ಶೇರುಗಳಿವೆ.
ಜತೆಗೆ ಜಗನ್ ಕುಟುಂಬವು ಕನಿಷ್ಠ 15 ಕಂಪನಿಗಳ ಮಾಲಕತ್ವ ಹೊಂದಿರುವುದು ಕೂಡ ಬೆಳಕಿಗೆ ಬಂದಿದೆ. ಜಗತಿ ಪಬ್ಲಿಕೇಷನ್ಸ್, ಸಂಡೂರ್ ಪವರ್ ಕಾರ್ಪೊರೇಷನ್ ಲಿಮಿಟೆಡ್, ಸರಸ್ವತಿ ಪವರ್ ಮತ್ತು ಕೆಲವು ರಿಯಲ್ ಎಸ್ಟೇಟ್ ಸಂಸ್ಥೆಗಳು ಇದರಲ್ಲಿ ಸೇರಿವೆ. ಈ ಎಲ್ಲಾ ಕಂಪನಿಗಳ ಶೇರು ಮೌಲ್ಯದಲ್ಲೂ ದಿಢೀರ್ ಏರಿಕೆ ಕಂಡಿದೆ. ಇದನ್ನು ಆದಾಯ ತೆರಿಗೆ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ದಾಖಲೆಗಳ ಸಂಗ್ರಹದಲ್ಲಿ ತೊಡಗಿದೆ.
ಜಗನ್ ಅವರ ವೈಯಕ್ತಿಕ ಆದಾಯವನ್ನು ಕಳೆದ ವರ್ಷದ ಆದಾಯಕ್ಕೆ ಹೋಲಿಸಿದಾಗ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಅವರು 2008-09ರ ಆರ್ಥಿಕ ವರ್ಷದಲ್ಲಿ ಒಟ್ಟಾರೆ ತೆರಿಗೆ ಪಾವತಿಸಿರುವುದು ಕೇವಲ 2.92 ಲಕ್ಷ ರೂಪಾಯಿಗಳು. ಇದು 2009-10ರ ಸಾಲಿಗೆ 6.72 ಕೋಟಿ ರೂಪಾಯಿಗಳಾಗಿದ್ದವು. ಆದರೆ 2010-11ರ ಸಾಲಿನಲ್ಲಿ ಮೊದಲ ಆರು ತಿಂಗಳ ಅವಧಿಯಲ್ಲೇ 84 ಕೋಟಿ ರೂಪಾಯಿಗಳ ತೆರಿಗೆಯನ್ನು ಜಗನ್ ಪಾವತಿ ಮಾಡಿದ್ದಾರೆ.
ಒಟ್ಟಾರೆ ಅಂದಾಜಿನ ಪ್ರಕಾರ ಜಗನ್ ಒಟ್ಟು ಆಸ್ತಿ ಪ್ರಮಾಣ ಶೇ.1200ರಷ್ಟು ದಿಢೀರ್ ಏರಿಕೆ ಕಂಡಿದೆ. ಎರಡು ವರ್ಷಗಳ ಹಿಂದೆ ಏನೇನೂ ಅಲ್ಲದ ಜಗನ್ ಇಂದು ಈ ಮಟ್ಟದ ಆಸ್ತಿ ಮಾಡಿರುವುದು ಆದಾಯ ತೆರಿಗೆ ಇಲಾಖೆಗೆ ಅಚ್ಚರಿ ತಂದಿದ್ದು, ಶೀಘ್ರದಲ್ಲೇ ದಾಳಿಗಳನ್ನು ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.