ಭಾರತದ ರಾಜಕಾರಣವು ಅತ್ತೆ-ಗಂಡನನ್ನು ಬಲಿ ತೆಗೆದುಕೊಂಡ ಹೊರತಾಗಿಯೂ ಸೋನಿಯಾ ಗಾಂಧಿ ರಾಜಕೀಯಕ್ಕೆ ಬಂದದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಬಿಜೆಪಿ ಮತ್ತು ಬಲಪಂಥೀಯ ರಾಜಕಾರಣವು ದೇಶದಲ್ಲಿ ಬಲಿಷ್ಠವಾಗುತ್ತಿದ್ದುದೇ ಇದಕ್ಕೆ ಕಾರಣವಂತೆ.
ಹೀಗೆಂದು ಹೇಳಿರುವುದು ಅಮೆರಿಕಾದ 2006ರ ದಾಖಲೆ. ಭಾರೀ ಸುದ್ದಿಯಲ್ಲಿರುವ ವಿಕಿಲೀಕ್ಸ್ ಇದನ್ನು ಬಹಿರಂಗಪಡಿಸಿದೆ.
ತನ್ನ ವೈಯಕ್ತಿಕ ರಾಜಕೀಯ ನಿಲುವಿನ ಕುರಿತು ಸೋನಿಯಾ ಗಾಂಧಿ ಬಿಚ್ಚು ಮನಸ್ಸಿನಿಂದ ಈ ರೀತಿಯಾಗಿ ಮಾತನಾಡಿದ್ದು ಕ್ಯಾಲಿಫೋರ್ನಿಯಾ ಗವರ್ನರ್-ಚಿತ್ರನಟ ಅರ್ನಾಲ್ಡ್ ಸ್ವಾಜ್ನಿಗರ್ ಪತ್ನಿ ಮರಿಯಾ ಶ್ರಿವರ್ ಜತೆ.
ಭಾರತದಲ್ಲಿ ಬಲಪಂಥೀಯರು ಪ್ರಬಲರಾಗುತ್ತಿದ್ದರು ಮತ್ತು ಕಾಂಗ್ರೆಸ್ ದುರ್ಬಲವಾಗುತ್ತಿತ್ತು. ಆ ಕಾರಣದಿಂದ ಗಾಂಧಿ ಕುಟುಂಬ ರಕ್ಷಿಸಿಕೊಂಡು ಬಂದಿದ್ದುದನ್ನು ಉಳಿಸುವ ನಿಟ್ಟಿನಲ್ಲಿ ರಾಜಕೀಯಕ್ಕೆ ಬಂದೆ ಎಂದು ಸೋನಿಯಾ ಹೇಳಿದ್ದರು.
ತನ್ನ ಈ ನಿರ್ಧಾರದ ಬಗ್ಗೆ ಮಕ್ಕಳು (ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ) ಯಾವುದೇ ಆಸಕ್ತಿಯನ್ನು ಹೊಂದಿರಲಿಲ್ಲ. ನೀನು ಯಾವ ನಿರ್ಧಾರ ಕೈಗೊಂಡರೂ ನಾವು ಬೆಂಬಲಿಸುತ್ತೇವೆ ಎಂದು ಹೇಳಿದ್ದರಂತೆ.
ಅದೇ ಹೊತ್ತಿಗೆ ಸೋನಿಯಾ ಗಾಂಧಿ ಪ್ರಧಾನ ಮಂತ್ರಿಯಾಗಲು ನಿರಾಕರಿಸಿದ್ದು ಕೂಡ ರಹಸ್ಯ ದಾಖಲೆಗಳಲ್ಲಿ ಸೇರಿವೆ.
ಪಕ್ಷದ ಕಾರ್ಯಕರ್ತರು ತೀವ್ರ ಅಸಮಾಧಾನಗೊಂಡಿರುವುದರಿಂದ ನಾನು ಭಾರೀ ಒತ್ತಡಗಳನ್ನು ಎದುರಿಸುತ್ತಿದ್ದೇನೆ. ನಾವು ನಿಮಗೆ ಮತ ಹಾಕಿ ಪಕ್ಷಕ್ಕೆ ಬಹುಮತ ಒದಗಿಸಿರುವ ಹೊರತಾಗಿಯೂ ಪಕ್ಷದ ಅಧ್ಯಕ್ಷೆಯಾಗಿರುವ ನೀವು ಯಾಕೆ ಪ್ರಧಾನ ಮಂತ್ರಿ ಸ್ಥಾನವನ್ನು ಅಲಂಕರಿಸುತ್ತಿಲ್ಲ ಎಂದು ಅವರು ಪ್ರಶ್ನಿಸುತ್ತಿದ್ದಾರೆ ಎಂದು ಸೋನಿಯಾ ಹೇಳಿದ್ದರು.