ಇಟಲಿ ಸಂಜಾತೆ ಎಡ್ವಿಜ್ ಅಂಟೋನಿಯಾ ಅಲ್ಬಿನಾ ಮೈನೋರನ್ನು (ಸೋನಿಯಾ ಗಾಂಧಿ) ಮದುವೆಯಾಗುವುದಕ್ಕೆ ರಾಜೀವ್ ಗಾಂಧಿಗೆ ಕುಟುಂಬವು ಪ್ರತಿರೋಧ ವ್ಯಕ್ತಪಡಿಸಿತ್ತು ಎನ್ನುವುದು ಈ ದೇಶದ ಪ್ರತಿಯೊಬ್ಬರಿಗೂ ತಿಳಿದಿರುವಂತದ್ದೇ. ಆದರೆ ಸೋನಿಯಾ ಗಾಂಧಿ ಕೂಡ ಅಂತಹುದೇ ಪರಿಸ್ಥಿತಿಯನ್ನು ಎದುರಿಸಿದ್ದರು ಎನ್ನುವುದು ಬಯಲಾಗಿದೆ.
ರಾಜೀವ್ ಗಾಂಧಿಯನ್ನು ಪ್ರೀತಿಸಿ ಮದುವೆಯಾಗಲು ಹೊರಟಿದ್ದ ಸೋನಿಯಾಗೆ ಹೆತ್ತವರು ಅಡ್ಡಗಾಲು ಹಾಕಿದ್ದರು. ಈ ಮದುವೆ ಸಾಧ್ಯವಿಲ್ಲ ಎಂದಿದ್ದರು. ಆದರೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದ ಸೋನಿಯಾ, ಹೆತ್ತವರ ಮಾತಿಗೆ ಕಿವಿಗೊಟ್ಟಿರಲಿಲ್ಲ. ಏನೇ ಆದರೂ ಮದುವೆಯಾಗಿಯೇ ಸಿದ್ಧ ಎಂದು ಮುಂದುವರಿದಿದ್ದರು ಎಂದು ವಿಕಿಲೀಕ್ಸ್ ರಹಸ್ಯ ದಾಖಲೆ ಹೇಳಿದೆ.
ಸೋನಿಯಾ ಗಾಂಧಿ ಈ ರೀತಿಯಾಗಿ ಮಾತನಾಡಿದ್ದು ಕ್ಯಾಲಿಫೋರ್ನಿಯಾ ಗವರ್ನರ್-ಚಿತ್ರನಟ ಅರ್ನಾಲ್ಡ್ ಸ್ವಾಜ್ನಿಗರ್ ಪತ್ನಿ ಮರಿಯಾ ಶ್ರಿವರ್ ಜತೆ. ಸಮಾರಂಭವೊಂದರಲ್ಲಿ ಜತೆಯಾಗಿದ್ದ ಇಬ್ಬರು, ಮಹಿಳೆಯರ ಮತ್ತು ರಾಜಕೀಯ ಸಮಸ್ಯೆಗಳ ಕುರಿತು ಮಾತುಕತೆ ನಡೆಸುತ್ತಾ ಹಲವಾರು ಭಾವನಾತ್ಮಕ ಅಂಶಗಳನ್ನು ಹಂಚಿಕೊಂಡಿದ್ದರು.
ಭಾರತೀಯರು ವಿದೇಶೀಯರನ್ನು ಪರಕೀಯರು ಎಂಬಂತೆ ನೋಡುವುದು ಸಾಮಾನ್ಯ. ಹಾಗಾಗಿ ಇಟಲಿ ಮೂಲದ ಮಹಿಳೆಯನ್ನು ತನ್ನ ಮಗ ಮದುವೆಯಾಗುವುದರಿಂದ ಮುಂದಿನ ದಿನಗಳಲ್ಲಿ ರಾಜಕೀಯ ಮಾಡುವುದು ಕಷ್ಟವಾಗಬಹುದು ಎಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಈ ಮದುವೆಯನ್ನು ವಿರೋಧಿಸಿದ್ದರು ಎಂದು ಈ ಹಿಂದೆ ಹೇಳಲಾಗುತ್ತಿತ್ತು.
ಕೇಂಬ್ರಿಜ್ಡ್ ವಿಶ್ವವಿದ್ಯಾಲಯದ ವಾರ್ಸಿಟಿ ರೆಸ್ಟಾರೆಂಟ್‌ನಲ್ಲಿ ಸೋನಿಯಾ ಮತ್ತು ರಾಜೀವ್ ಮೊದಲ ಬಾರಿ ಭೇಟಿಯಾಗಿದ್ದರು. ನಂತರ ಅವರಿಬ್ಬರಲ್ಲಿ ಪ್ರೇಮಾಂಕುರವಾಗಿತ್ತು. ಆರಂಭದಲ್ಲಿ ಪೈಲಟ್ ಆಗಿದ್ದ ರಾಜೀವ್, ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ತೋರಿಸಿರಲಿಲ್ಲ. ಆದರೆ ನಿಧಾನವಾಗಿ ರಾಜೀವ್ ತನ್ನ ನಿಲುವನ್ನು ಬದಲಾಯಿಸಿಕೊಂಡಿದ್ದರು.