ಮುಸ್ಲಿಂ ಭಯೋತ್ಪಾದಕರಿಗಿಂತ ದಿನದಿಂದ ದಿನಕ್ಕೆ ಪ್ರಬಲಗೊಳ್ಳುತ್ತಿರುವ ಹಿಂದೂ ತೀವ್ರವಾದಿಗಳು ಭಾರತಕ್ಕೆ ಅಪಾಯಕಾರಿ ಎಂದು ಹೇಳಿದ್ದ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ, ಕಾಂಗ್ರೆಸ್ ನಾಯಕ ಪಾಕಿಸ್ತಾನದಲ್ಲಿ ನೆಲೆಸಲಿ ಎಂದಿದ್ದಾರೆ.
ಹುಬ್ಬಳ್ಳಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಯಾವತ್ತೂ ಹಿಂದೂ ವಿರೋಧಿಯಾಗಿರಲಿಲ್ಲ. ಅವರ ಪುತ್ರ ರಾಹುಲ್ ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಜಿಹಾದ್‌ಗೆ ಬೆಂಬಲ ನೀಡುತ್ತಿದ್ದಾರೆ. ಅದನ್ನು ಉಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಹುಲ್ ಗಾಂಧಿ ನೀಡಿರುವ ಈ ಹೇಳಿಕೆ ಹಿಂದೂಗಳಿಗೆ ಮಾಡಿರುವ ಅವಮಾನವಾಗಿದೆ. ಅವರನ್ನು ಕಾಂಗ್ರೆಸ್‌ನಿಂದ ಉಚ್ಛಾಟಿಸಬೇಕು ಎಂದು ಆಗ್ರಹಿಸಿರುವ ತೊಗಾಡಿಯಾ, ದಿನಕ್ಕೊಂದರಂತೆ ವಿವಾದಿತ ಹೇಳಿಕೆಗಳನ್ನು ನೀಡುತ್ತಾ ಬಂದಿರುವ ರಾಹುಲ್ ಯಾವುದೇ ನಿಟ್ಟಿನಲ್ಲೂ ಓರ್ವ ಮುಖಂಡನಾಗಲು ಯೋಗ್ಯನಲ್ಲ ಎಂದರು.
ಕಾಂಗ್ರೆಸ್ ನಾಯಕರು ಕೇಸರಿ ಭಯೋತ್ಪಾದನೆಯ ಕುರಿತು ಮಾತನಾಡುವುದನ್ನೇ ವ್ಯಾಪಾರ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ರಾಹುಲ್ ನೀಡಿರುವ ಹೇಳಿಕೆ ಸ್ಪಷ್ಟ ಉದಾಹರಣೆ. ಈ ಹಿಂದೆ ಕಾಂಗ್ರೆಸ್‌ನ ಪಿ. ಚಿದಂಬರಂ ಮತ್ತು ದಿಗ್ವಿಜಯ್ ಸಿಂಗ್ ಕೂಡ ಇದರಲ್ಲೇ ತೊಡಗಿಸಿಕೊಂಡಿದ್ದರು ಎಂದು ವಿಎಚ್‌ಪಿ ನಾಯಕ ವಿವರಿಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಂದೂಗಳನ್ನು ಅಪಮಾನಗೊಳಿಸಿರುವ ಕಾಂಗ್ರೆಸ್ ಮತ್ತು ರಾಹುಲ್, ಸಮಸ್ತ ಹಿಂದೂಗಳ ಕ್ಷಮೆ ಯಾಚಿಸಬೇಕು ಎಂದೂ ಅವರು ಒತ್ತಾಯಿಸಿದರು.
ಅಮೆರಿಕಾ ರಾಯಭಾರಿ ತಿಮೋತಿ ರೋಮರ್ ಜತೆ ಇಂತಹ ಮಾತುಕತೆ ನಡೆಸಿರುವ 'ಯುವರಾಜ' ಗಾಂಧಿಯ ರಾಷ್ಟ್ರಪ್ರೇಮದ ಬಗ್ಗೆ ಈಗ ಗಂಭೀರ ಶಂಕೆಗಳು ಹುಟ್ಟಿಕೊಂಡಿವೆ. ಮುಂದಿನ ಪ್ರಧಾನಿ ಎಂದು ಬಿಂಬಿಸಲ್ಪಡುತ್ತಿರುವ ವ್ಯಕ್ತಿಗೆ ಭಾರತ ಮತ್ತು ಹಿಂದೂಗಳ ಮೇಲೆ ಕನಿಷ್ಠ ಗೌರವವೂ ಇದ್ದಂತಿಲ್ಲ ಎಂದು ವಾಗ್ದಾಳಿ ನಡೆಸಿದರು.