ಯುಪಿಎ ಸರಕಾರದ ಹಲವು ಹಗರಣಗಳು ಮತ್ತು ವಿಕಿಲೀಕ್ಸ್ ಬಹಿರಂಗಪಡಿಸಿರುವ ಅಚ್ಚರಿಯ ಮಾಹಿತಿಗಳಿಂದಾಗಿ ವಿವಾದಕ್ಕೆ ಸಿಲುಕಿರುವ ಹೊರತಾಗಿಯೂ ಕಾಂಗ್ರೆಸ್ ಪಕ್ಷ ಮಹಾಧಿವೇಶನವು ರವಿವಾರ ಆರಂಭವಾಗಲಿದೆ.
'ಕಾಂಗ್ರೆಸ್ ಪಕ್ಷದ 125 ವರ್ಷಗಳ ಅರ್ಪಣೆ ಮತ್ತು ಸೇವೆ' ಎಂಬ ಆಶಯದೊಂದಿಗೆ ಮೂರು ದಿನಗಳ ಕಾಲ ಮಹಾಧಿವೇಶನ ನಡೆಯಲಿದೆ. ಇದರೊಂದಿಗೆ ವರ್ಷವಿಡಿ ಪಕ್ಷ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳು ಸಮಾರೋಪಗೊಳ್ಳಲಿದೆ.
ಹಿಂದೂ ತೀವ್ರಗಾಮಿ ಸಂಘಟನೆಗಳು ಲಷ್ಕರ್ ಇ ತೋಯ್ಬಾಕ್ಕಿಂತಲೂ ಹೆಚ್ಚು ಅಪಾಯಕಾರಿ ಭಯೋತ್ಪಾದಕ ಸಂಘಟನೆಗಳು ಎಂಬ ರಾಹುಲ್ ಗಾಂಧಿ ಹೇಳಿಕೆಯಿಂದ ಪಕ್ಷಕ್ಕೆ ಭಾರಿ ಮುಜುಗರ ಉಂಟಾಗಿದೆ. ಈ ಸಂದರ್ಭದಲ್ಲಿಯೇ ಪಕ್ಷದ ಮಹಾಧಿವೇಶನ ನಡೆಯುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಈ ಎಲ್ಲ ವಿವಾದಗಳಿಂದ ಪಾರಾಗುವುದೇ ಅಧಿವೇಶನದ ಮುಖ್ಯ ಉದ್ದೇಶವಾಗಲಿದೆ. ಟೆಲಿಕಾಂ ಹಗರಣ, ಕಾಮನ್‌ವೆಲ್ತ್ ಅಕ್ರಮ ಮುಂತಾದ ಹಲವು ಹಗರಣಗಳಿಂದ ಪಕ್ಷದ ಮಾನ ಕಾಪಾಡುವುದೇ ಸಮಸ್ಯೆಯಾಗಿ ಬಿಟ್ಟಿದೆ.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹೀನಾಯ ಸೋಲು ಎದುರಾದರೂ ಮುಂಬರುವ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಗಳಲ್ಲಿ ನಡೆಯಲಿರುವ ಚುನಾವಣೆಗಳಿಗೆ ಪಕ್ಷಕ್ಕೆ ನವಚೈತನ್ಯ ಸಿಗಲಿದೆ ಎಂಬ ಆಶಾವಾದವನ್ನು ನಾಯಕರು ವ್ಯಕ್ತಪಡಿಸಿದ್ದಾರೆ.